|
ಯಲಹಂಕದ ವೇಣುಗೋಪಾಲಸ್ವಾಮಿ ದೇವಾಲಯ
ಇಲ್ಲಿ ಸುಮಾರು 800ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಐತಿಹ್ಯದ ರೀತ್ಯ ಮಹಾಭಾರತದಲ್ಲಿ ಉಲ್ಲೇಖಿಸಲಾಗಿರುವ ಜನಮೇಜಯನಿಗೆ ಒಮ್ಮೆ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀಕೃಷ್ಣ ಪರಮಾತ್ಮ ತನ್ನ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದನಂತೆ. ಅದರಂತೆ ಜನಮೇಜಯ ವೇಣುಗೋಪಾಲಸ್ವಾಮಿ ಪ್ರತಿಷ್ಠಾಪನೆಗೆ ಮುಂದಾದ. ಈ ದೇವಾಲಯದಲ್ಲಿರುವ ಮೂಲ ದೇವರನ್ನು ಸಪ್ತಋಷಿಗಳು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.
ದೇವಾಲಯಕ್ಕೆ ನಾಲ್ಕು ಅಂತಸ್ತಿನ ಎತ್ತರ ಹಾಗೂ ಭವ್ಯವಾದ ರಾಜಗೋಪುರವಿದೆ. ಗೋಪುರದಲ್ಲಿ ದೇವಾನುದೇವತೆಗಳ ಗಾರೆ ಶಿಲ್ಪಗಳಿವೆ. ಒಳಗೆ ಪ್ರವೇಶಿಸುತ್ತಿದ್ದಂತೆ ಇರುವ ಮಂಟಪದ ಮೇಲೆ ನಿರ್ಮಿಸಲಾಗಿರುವ ಗೋಪರಗಳಲ್ಲಿರುವ ಗೂಡುಗಳಲ್ಲಿನ ದಶಾವತಾರ, ಸತ್ಯಭಾಮಾ ಗರ್ಭಭಂಗ ಇತ್ಯಾದಿ ಗಾರೆಯ ಶಿಲ್ಪಗಳು ಮನಸೆಳೆಯುತ್ತವೆ.
ಮುಖಮಂಟಪ ದಾಟಿದರೆ ಸುಖನಾಸಿ,
ಭುವನೇಶ್ವರಿ, ಅಂತರಾಳ ಹಾಗೂ ಗರ್ಭಗೃಹವಿದೆ. ಭುವನೇಶ್ವರಿಯಲ್ಲಿ ಸಾಧಾರಣ
ಗರ್ಭಗೃಹದಲ್ಲಿ ರುಕ್ಮಿಣಿ, ಸತ್ಯಭಾಮಾ ಸಹಿತ ವೇಣುಗೋಪಾಲಸ್ವಾಮಿಯ ಸುಂದರ ವಿಗ್ರಹವಿದೆ. ಕೈಯಲ್ಲಿ ಕೊಳಲು ಹಿಡಿದು ನಿಂತಿರುವ ಪ್ರತಿಮೆ ಸುಂದರವಾಗಿದೆ. ಪಕ್ಕದ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀಯ ಸುಂದರ ಕೃಷ್ಣಶಿಲೆಯ ವಿಗ್ರಹವಿದೆ. ದೇವಾಲಯ ಪ್ರಾಕಾರದಲ್ಲಿ ವಿಶ್ವಸೇನ, ರಾಮಾನುಜಾಚಾರ್ಯರು, ನಮ್ಮಾಳ್ವಾರ್ ಹಾಗೂ ದೇಶಿಕಾಚಾರ್ ಪ್ರತಿಮೆಗಳೂ ಇವೆ. ದೇವಾಲಯವನ್ನು 1991ರಲ್ಲಿ ನವೀಕರಿಸಲಾಗಿದೆ. ಈ ದೇವಾಲಯದಲ್ಲಿ ನಿತ್ಯವೂ ಪಾಂಚರಾತ್ರಾಗಮ ರೀತ್ಯ ಪಂಚಾಮೃತ ಅಭಿಷೇಕ, ಪೂಜೆಗಳು ಜರುಗುತ್ತವೆ. ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನರಸಿಂಹಜಯಂತಿ, ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ತಿಂಗಳು ಹುಣ್ಣಿಮೆಯ ಸಂಜೆ ಪ್ರಾಕಾರ ರಥೋತ್ಸವ ಜರುಗುತ್ತದೆ.
ವೇಣುಗೋಪಾಲನಿಗೆ ಸಂತಾನ ವೇಣುಗೋಪಾಲನೆಂಬ ಬಿರುದೂ ಇದೆ. ಇದಕ್ಕೆ ಕಾರಣ ಮದುವೆಯಾಗಿ ಬಹುಕಾಲ ಮಕ್ಕಳಾಗದವರು ಭಕ್ತಿಯಿಂದ ಇಲ್ಲಿಗೆ ಆಗಮಿಸಿ ಹರಕೆ ಹೊತ್ತರೆ ಸಂತಾನಭಾಗ್ಯ ದೊರಕುತ್ತದೆ ಎಂಬುದು ನಂಬಿಕೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ನಿರ್ವಹಣೆಗೆ ದೇವಾಲಯ ಸಮಿತಿಯೂ ಇದೆ. ಹೆಚ್ಚಿನ ವಿವರಗಳಿಗೆ ದೇವಾಲಯದ ಅರ್ಚಕರಾದ ವೈ.ಕೆ.ಜನಾರ್ದನ ಅವರನ್ನು ದೂರವಾಣಿ 9844105608 ಮೂಲಕ ಸಂಪರ್ಕಿಸಬಹುದು. ದೇವಾಲಯದ ಪಕ್ಕದಲ್ಲಿ ವಿಶ್ವನಾಥೇಶ್ವರನ ದೇವಾಲಯವಿದೆ. | |||