|
ಬೆಂಗಳೂರು ವಿವಿಯ ವಿದ್ಯಾಗಣಪತಿ *ಟಿ.ಎಂ.ಸತೀಶ್
ಮಲ್ಲತ್ತಹಳ್ಳಿ ಬಳಿ ಸಿಬ್ಬಂದಿಯ ಅನುಕೂಲತೆಗಾಗಿ ವಸತಿ ಗೃಹ ನಿರ್ಮಾಣವೂ ಆಯಿತು. ಆ ಪ್ರದೇಶದಲ್ಲಿ ಹಳೆಯ ಗ್ರಾಮವೂ ಇತ್ತು. ಗ್ರಾಮಕ್ಕೊಂದು ದೇವಾಲಯ ಬೇಕೆಂದು ೧೯೮೭ರಲ್ಲಿ ಊರಿನ ಜನತೆ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಸೇರಿ ಪುಟ್ಟದೊಂದು ಗಣೇಶನ ದೇವಾಲಯ ನಿರ್ಮಿಸಿದರು. ನಿತ್ಯ ಪೂಜೆ ಇಲ್ಲಿ ನಡೆಯುತ್ತಿತ್ತು. ಆದರೆ, 2002ರಲ್ಲಿ ಈ ಪ್ರದೇಶದಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸುವ ಕಾರ್ಯ ಆರಂಭವಾದಾಗ, ದೇವಾಲಯ ಸ್ಥಳಾಂತರ ಅನಿವಾರ್ಯವಾಯ್ತು. ಬಿಡಿಎ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಾರ್ವಜನಿಕರು ಸೇರಿ 2003ರಲ್ಲಿ ಬೃಹತ್ ಭವ್ಯ ದೇವಾಲಯ ನಿರ್ಮಿಸಿದರು. ವಿದ್ಯಾದಾನ ನಡೆಯುವ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಈ ದೇವಾಲಯದಲ್ಲಿ ವಿದ್ಯಾಗಣಪತಿಯ ಪುನರ್ ಪ್ರತಿಷ್ಠಾಪನೆ ಜರುಗಿತು. ಭವ್ಯವಾಗಿರುವ ದೇವಾಲಯ ವಿಶಾಲವಾದ ಪ್ರದೇಶದಲ್ಲಿದ್ದು, ದೇಗುಲದ ಎದುರು ಅಶ್ವತ್ಥಕಟ್ಟೆ ಇದೆ. ವೃಕ್ಷದ ಕೆಳಗೆ ನಾಗರಕಲ್ಲುಗಳನ್ನು ಸ್ಥಾಪಿಸಲಾಗಿದೆ. ಕಟ್ಟೆಯ ಬಲ ಭಾಗದಲ್ಲಿ ನವಗ್ರಹಗಳ ಗುಡಿ ಇದೆ. ಪ್ರಧಾನ ದೇವಾಲಯ ಇತ್ತೀಚಿನ ಇಟ್ಟಿಗೆ, ಸಿಮೆಂಟ್ ಕಟ್ಟಡವಾಗಿದ್ದು, ಆವರಣ ಗೋಡೆಗೆ ಗ್ರಿಲ್ ಅಳವಡಿಸಿ ಗಾಳಿ, ಬೆಳಕಿಗೆ ಅವಕಾಶ ಮಾಡಲಾಗಿದೆ.
ಶೃಂಗೇರಿಯ ರಾಜೇಂದ್ರಭಟ್ ಹಾಗೂ ಸುಧಾಕರ ಭಟ್ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ತಿಂಗಳ ಪೌರ್ಣಿಮೆಯ ದಿನ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಚೌತಿಯ ದಿನ ಸಂಕಷ್ಟ ಹರ ಗಣಪತಿ ಪೂಜೆ ನಡೆಯುತ್ತದೆ. | |||