ಮುಖಪುಟ /ನಮ್ಮದೇವಾಲಯಗಳು

ಭೂವರಾಹನಾಥಸ್ವಾಮಿ ದೇವಾಲಯ

*ಟಿ.ಎಂ. ಸತೀಶ್

Bho varahanatha swamy, kannadaratna.com, our temples.in, karnataka temples, kallahalli, ಕನ್ನಡರತ್ನ.ಕಾಂ, ಭೂ ವರಹಸ್ವಾಮಿ ದೇವಾಲಯ, ಮಂಡ್ಯ, ಕಲ್ಲಹಳ್ಳಿ, ಪಾಂಡವಪುರ.ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆಯಿಂದ  18 ಕಿಲೋ ಮೀಟರ್ ದೂರದಲ್ಲಿರುವ ಊರು ಕಲ್ಲಹಳ್ಳಿ. ದೇವಲಾಪುರ ಎಂದೂ ಕರೆಸಿಕೊಂಡಿರುವ ಈ ಪುಟ್ಟ ಗ್ರಾಮದಲ್ಲೊಂದು ಸುಂದರ ಭೂ ವರಾಹನಾಥಸ್ವಾಮಿ ದೇವಾಲಯವಿದೆ.

ಇಲ್ಲಿ ಹಿಂದೆ ಪುಟ್ಟದೊಂದು ಗುಡಿಯತ್ತು. ಗುಡಿ ಪುಟ್ಟದಾದರೂ ಇಲ್ಲಿರುವ ಬೃಹತ್ ಭೂವರಾಹ ಮೂರ್ತಿಯಿಂದ ಈ ಊರಿನ ಕೀರ್ತಿ ರಾಜ್ಯಾದ್ಯಂತ ಹಬ್ಬಿತ್ತು.

ನಿತ್ಯವೂ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಬರುವ ಭಕ್ತರು ತನ್ನ ತೊಡೆಯ ಮೇಲೆ ಭೂದೇವಿಯನ್ನು ಕೂರಿಸಿಕೊಂಡಿರುವ ಹಾಗೂ ಶಂಖ, ಚಕ್ರ, ಪದ್ಮ ಹಿಡಿದ  ಸುಂದರ ಕೃಷ್ಣವರ್ಣದ ಸಾಲಿಗ್ರಾಮ ಶಿಲೆಯ 15 ಅಡಿ ಎತ್ತರದ ಬೃಹತ್  ಮೂರ್ತಿಯನ್ನು ಕಂಡು ನಿಬ್ಬೆರಗಾಗುತ್ತಿದ್ದರು.

ಸ್ಥಳೀಯರು, ಭಕ್ತರು ಸೇರಿ ಈಗ ಇಲ್ಲಿ ಸುಂದರವಾದ ದೇವಾಲಯ ನಿರ್ಮಿಸಿದ್ದಾರೆ. ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿನಿಯೋಗದ ವ್ಯವಸ್ಥೆಯೂ ಇಲ್ಲಿದೆ. ಪ್ರತಿ ನಿತ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4ರಿಂದ 7 ಗಂಟೆಯವರೆಗೆ ದೇವಾಲಯ ತೆರೆದಿರುತ್ತದೆ. ಭಾನುವಾರಗಳಂದು ಮಧ್ಯಾಹ್ನ ಬಾಗಿಲು ಹಾಕುವುದಿಲ್ಲ.

Bho varahanatha swamy old temple, kannadaratna.com, our temples.in, karnataka temples, kallahalli, ಕನ್ನಡರತ್ನ.ಕಾಂ, ಭೂ ವರಹಸ್ವಾಮಿ ದೇವಾಲಯ, ಮಂಡ್ಯ, ಕಲ್ಲಹಳ್ಳಿ, ಪಾಂಡವಪುರ.ಇಲ್ಲಿರುವ ಸುಂದರ ಭೂವರಾಹನಾಥಸ್ವಾಮಿಯನ್ನು ಹೊಯ್ಸಳರ ಕಾಲದಲ್ಲಿ ಹೇಮಾವತಿ ದಂಡೆಯ ಮೇಲೆ ನಿರ್ಮಿಸಲಾದ ಪುಟ್ಟ ದೇವಾಲಯದಲ್ಲಿ ಕ್ರಿ.ಶ. 1334ರಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ಹಿರಿಯರು ಹೇಳುತ್ತಾರೆ.

ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಈ ಮೂರ್ತಿ ನಿರ್ಮಾಣವಾಗಿದೆ ಎಂದು ಹೇಳಲಾಗತ್ತದೆ. ಇಲ್ಲಿರುವ ಮೂರ್ತಿ ಅತ್ಯಂತ ಮನಮೋಹಕವಾಗಿದ್ದರೂ, ಇಲ್ಲಿದ್ದ ದೇವಾಲಯ ಇತರ ಹೊಯ್ಸಳರ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿರಲಿಲ್ಲ. ಆದರೆ ಸಭಾಮಂಟಪದ ಎದುರು ಇರುವ ಗರ್ಭಗೃಹದಲ್ಲಿ ಪೀಠದ ಮೇಲೆ ಎಡ ತೊಡೆಯ ಮೇಲೆ ಭೂ ದೇವಿಯನ್ನು ಕೂರಿಸಿಕೊಂಡಿರುವ 15 ಅಡಿ ಎತ್ತರದ ಪೂರ್ವಾಭಿಮುಖ ವರಾಹಸ್ವಾಮಿ ವಿಗ್ರಹ ನಯನ ಮನೋಹರವಾಗಿತ್ತು. ಪೀಠದ ಎಡಭಾಗದಲ್ಲಿ ಆಂಜನೇಯಸ್ವಾಮಿಯ ಪುಟ್ಟ ವಿಗ್ರಹವೂ ಇತ್ತು. ಈಗ ಹಳೆ ದೇವಾಲಯ ಕೆಡವಿ ಹೊಸ ದೇಗುಲ ನಿರ್ಮಿಸಲಾಗಿದೆ.

Bhoo Varahaswamy temple, Kallahalli, K.R. Pet, ಭೂ ವರಾಹನಾಥ ಸ್ವಾಮಿ ದೇವಾಲಯಇಲ್ಲಿರುವ ಭೂ ವರಾಹಸ್ವಾಮಿಗೆ ಹರಕೆ ಹೊತ್ತರೆ ಭೂ ವಿವಾದಗಳು ಶೀಘ್ರ ಇತ್ಯರ್ಥವಾಗುತ್ತವೆ ಎಂಬ ನಂಬಿಕೆ ಇದೆ. ಜೊತೆಗೆ ಇಲ್ಲಿ ಮರಳು ಇಟ್ಟಿಗೆ ಖರೀದಿಸಿ ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ದೇವಾಲಯದ ಪಕ್ಕದಲ್ಲಿ ಇಟ್ಟಿಗೆಯಿಂದ ಗೂಡು ಕಟ್ಟಿ, ಆ ಇಟ್ಟಿಗೆ ತೆಗೆದುಕೊಂಡು ಹೋಗಿ ತಮ್ಮ ನೂತನ ಗೃಹ ನಿರ್ಮಾಣ ಮಾಡುವವರ ಸಂಖ್ಯೆಯೂ ಇತ್ತೀಚಿಗೆ ಹೆಚ್ಚಾಗಿದೆ. 

ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಟ್ಟಾಗ, ವಿಷ್ಣು ವರಾಹಾವತಾರ ತಾಳಿ, ಹಿರಣ್ಯಾಕ್ಷನ ಕೊಂದು ಭೂದೇವಿಯನ್ನು ರಕ್ಷಿಸಿದ ಎಂದು ಪುರಾಣಗಳು ಸಾರುತ್ತವೆ. ವರಾಹಾವತಾರದ ವೈಶಿಷ್ಟ್ಯ ಸಾರುವ ಸುಂದರ ದೇವಾಲಯದ ಮುಂದಿನ ಬಯಲಿನಲ್ಲಿ ಶಾಸನವೂ ದೊರೆತಿದೆ. 

ನೃಸಿಂಹ ಜಯಂತಿ, ವೈಕುಂಠ ಏಕಾದಶಿಯಂದು ಹಾಗೂ ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೃಹದಾಕಾರದ ಮೂರ್ತಿಗೆ ಮಾಡುವ ಅಭಿಷೇಕ ನೋಡಲು ಎರಡು ಕಣ್ಣು ಸಾಲದು.ಕಲ್ಲಹಳ್ಳಿಗೆ ಹೋಗಲು ಕೆ.ಆರ್.ಪೇಟೆ, ಮೇಲುಕೋಟೆ ಹಾಗೂ ಪಾಂಡವಪುರಗಳಿಂದ ನೇರ ಬಸ್ ಸೌಕರ್ಯವಿದೆ.

ಮುಖಪುಟ /ನಮ್ಮದೇವಾಲಯಗಳು