ಮುಖಪುಟ /ನಮ್ಮದೇವಾಲಯಗಳು   

ಉಡುಪಿಯಿದು, ಉಡುಪಿಯಿದು... ಶ್ರೀಕೃಷ್ಣನು ನೆಲೆಸಿಹ ಉಡುಪಿಯಿದು
ಕಂಗಳಿದ್ಯಾತಕೋ... ಉಡುಪಿಯ ಕಡಗೋಲ ಕೃಷ್ಣನ ನೋಡದಾ..

*ಟಿ.ಎಂ.ಸತೀಶ್

Udupi Krishna, Lord krishna. ಉಡುಪಿ ಕೃಷ್ಣ, ಪಶ್ಚಿಮ ಘಟ್ಟದ ಸೆರಗಿನ ಕರ್ನಾಟಕ ಕರಾವಳಿಯ ರಮಣೀಯ ಪ್ರಕೃತಿಯ ಮಡಿಲಲ್ಲಿ ಇರುವ ಶ್ರೀಕೃಷ್ಣನ ಆಡುಂಬೋಲವೇ ಉಡುಪಿ. ಮಂಗಳೂರಿನಿಂದ ಕೇವಲ 58 ಕಿಲೋ ಮೀಟರ್ ದೂರದಲ್ಲಿರುವ ಉಡುಪಿ ಈಗ ಜಿಲ್ಲಾಕೇಂದ್ರ. ಪ್ರಗತಿಯ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ಪ್ರಮುಖ ಪಟ್ಟಣ.

ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹು ಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡಗೋಲು ಕೃಷ್ಣನ ಸೊಬಗನ್ನು ಸವಿಯುವುದೇ ಒಂದು ಆನಂದ.

ಭಾರತದ ಏಳು ಪ್ರಮುಖ ಯಾತ್ರಾಸ್ಥಳಗಳ ಪೈಕಿ ಉಡುಪಿಯೂ ಒಂದು. ಪುರಾಣ ಪ್ರಸಿದ್ಧವಾದ ಉಡುಪಿ, ಕನಕದಾಸರಿಂದಾಗಿ ಇತಿಹಾಸ ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಶ್ರೀಕೃಷ್ಣನ ದರ್ಶನಭಾಗ್ಯಕ್ಕಾಗಿ ವರ್ಷದ ಎಲ್ಲ ಕಾಲದಲ್ಲೂ ಭಕ್ತರು ಆಗಮಿಸುತ್ತಾರೆ. ಭಗವಂತನನ್ನು ಮುಖ್ಯದ್ವಾರದ ಬದಲಿದೆ, ಹಿಂಬದಿಯ ಪುಟ್ಟ ನವರಂದ್ರದ ಕಿಟಕಿಯ ಮೂಲಕ ನೋಡಿ, ಕೃಷ್ಣನ ಸೊಬಗನ್ನು ಕಣ್ಮು ತುಂಬಿಕೊಂಡು ಅಮಿಮಾನಂದ ಪಡುತ್ತಾರೆ. ಈ ಕಿಟಕಿಗೆ ನವರಂಗ ಕಿಟಕಿ, ಕನಕನ ಕಿಂಡಿ ಎಂಬ ಹೆಸರುಗಳುಂಟು.

ಬೆಂಗಳೂರಿನಿಂದ 425 ಕಿ. ಮಿ. ದೂರದಲ್ಲಿ ರುವ ಉಡುಪಿ ಮಧ್ವಾಚಾರ್ಯರ ಪಾದಧೂಳಿನಿಂದ ಪುನೀತವಾದ ಉಡುಪಿ, ವೇದ ಶಿಕ್ಷಣ ನೀಡುವ ಪ್ರಸಿದ್ಧ ಶಿಕ್ಷಣಕೇಂದ್ರವೂ ಹೌದು. ಕೃಷ್ಣ ಮಠದ ಸುತ್ತ ವಿಶಾಲವಾದ ರಾಜಾಂಗಣವಿದೆ. ಇಲ್ಲಿ ಒಂದು ದೀರ್ಘ ಸುತ್ತು ಹಾಕಿದೆವೆಂದರೆ ನಮಗೆ ಶ್ರೀಮಧ್ವಾಚಾರ‍್ಯ ಸ್ಥಾಪಿತ ಅಷ್ಟ ಮಠಗಳ ದರ್ಶನವೂ ಆಗುತ್ತದೆ. ರಾಜಾಂಗಣ ಪ್ರವೇಶಿಸುತ್ತಿದ್ದಂತೆಯೇ ಕನಕನ ಕಿಂಡಿ ಭಕ್ತರ - ಪ್ರವಾಸಿಗರ ಗಮನ ಸೆಳೆಯುತ್ತದೆ. ತುಸು ದೂರದಲ್ಲೇ ಪವಿತ್ರ ಮಧ್ವ ಸರೋವರ ಇದೆ.

Udupi Krishna, Lord krishna temple, ಉಡುಪಿ ಕೃಷ್ಣ ಮಂದಿರಉಡುಪಿಯಲ್ಲಿ ಮೂರು ಪ್ರಮುಖ ದೇವಾಲಯಗಳಿವೆ. ಚಂದ್ರೇಶ್ವರ ದೇವಾಲಯ, ಅನಂತೇಸ್ವರ ದೇವಾಲಯ ಹಾಗೂ ಶ್ರೀ ಕೃಷ್ಣಮಂದಿರ. ಚಂದ್ರೇಶ್ವರ ಹಾಗೂ ಅನಂತೇಶ್ವರ ದೇವಾಲಯಗಳು ಉಡುಪಿಯಲ್ಲಿ ಅತ್ಯಂತ ಪುರಾತನವಾದ ದೇಗುಲಗಳಾಗಿವೆ. ಪರಶುರಾಮರ ಅನುಯಾಯಿಯಾದ ರಾಜ ರಾಮಭೋಜ ಇಲ್ಲಿ ಅನಂತೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ಮಾಡಿಸಿದನೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಅನಂತೇಶ್ವರ, ಚಂದ್ರೇಶ್ವರ ದೇವಾಲಯಗಳಿಗೆ ಭೇಟಿ ಕೊಟ್ಟ ಬಳಿಕವೇ ಕೃಷ್ಣ ದೇವಾಲಯಕ್ಕೆ ಆಗಮಿಸುವುದು.

ಉಡುಪಿಯಲ್ಲಿರುವ ಶ್ರೀಕೃಷ್ಣನ ವಿಗ್ರಹ ಅಲ್ಲಿಗೆ ಬಂದ ಬಗ್ಗೆಯೂ ಒಂದು ಕಥೆ ಇದೆ. ಹಿಂದೆ ದ್ವಾರಕಾನಗರದಲ್ಲಿ ಇದ್ದ ಶ್ರೀಕೃಷ್ಣನ Udupi Krishna, Lord krishna temple, ಉಡುಪಿ ಕೃಷ್ಣ ಮಂದಿರಮೂಲಮೂರ್ತಿ ಪವಿತ್ರ ಗೋಪಿ ಚಂದನದಿಂದ ಮುಚ್ಚಿಹೋಗಿತ್ತು. ನಾವಿಕರೊಬ್ಬರು ಚಂದನಲೇಪಿತ ಶ್ರೀಕೃಷ್ಣನೂ ಇದ್ದ ಇಡೀ ಚಂದನದ ಗುಡ್ಡೆಯನ್ನು ತನ್ನ ದೋಣಿಯಲ್ಲಿ ತುಂಬಿಕೊಂಡು ಪಶ್ಚಿಮ ಕರಾವಳಿಯ ಕಡೆ ಬರುತ್ತಿದ್ದಾಗ ಭೀಕರ ಬಿರುಗಾಳಿಗೆ ಆತನ ಹಡಗು ಸಿಲುಕಿತು. ಇದನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿದ ಮಧ್ವಾಚಾರ್ಯರು ಮಲ್ಪೆಯ ಬಳಿ ದೋಣಿ ದಡ ಮುಟ್ಟಲು ನೆರವಾಗುತ್ತಾರೆ. ಆಗ ನಾವಿಕ ಇದಕ್ಕೆ ಪ್ರತಿಫಲವಾಗಿ ಏನು ಬೇಕು ಕೇಳಿ ಎಂದಾಗ. ಮಧ್ವಾಚಾರ್ಯರು ಚಂದನಲೇಪಿತ ಶ್ರೀಕೃಷ್ಣನನ್ನು ಕೇಳಿ ಪಡೆಯುತ್ತಾರೆ. ಆನಂತರ ಮೂರ್ತಿಯನ್ನು ನಿರ್ಮಲ ಜಲದಲ್ಲಿ ಶುಚಿಗೊಳಿಸಿ ತಮ್ಮ ಮಠದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮತ್ತೊಂದು ಕಥೆಯ ರೀತ್ಯ ಬಿರುಗಾಳಿಗೆ ಸಿಲುಕಿದ ದೋಣಿಯಲ್ಲಿದ್ದ ಶ್ರೀಕೃಷ್ಣಮೂರ್ತಿ ನೀರಿನಲ್ಲಿ ಮುಳುಗಿತು. ಇದನ್ನು ದಿವ್ಯ ದೃಷ್ಟಿಯಿಂದ ಅರಿತ ಆಚಾರ್ಯರು ಸಮುದ್ರದಿಂದ ಕೃಷ್ಣಮೂರ್ತಿಯನ್ನು ಹೊರತೆಗೆದು ಅದನ್ನು ತಂದು ೧೩ನೇ ಶತಮಾನದಲ್ಲಿ ಸಂಕ್ರಾಂತಿಯ ದಿನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ಆಚಾರ‍್ಯರು ಭಕ್ತರು ದೇವರನ್ನು ಪೂಜಿಸುತ್ತಾ ಬಂದಿದ್ದಾರೆ.

ಪರ್ಯಾಯ : ಶ್ರೀ ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರ ಶಿಷ್ಯರು ಮಾತ್ರ ಮುಟ್ಟಬಹುದು. ಕೃಷ್ಣ ಮಠದ ಸುತ್ತ ಎಂಟು ಮಠಗಳಿವೆ. ಈ ಮಠಗಳ ಮಠಾಶರು ಮಾತ್ರ ವಿಗ್ರಹವನ್ನು ಮುಟ್ಟಬಹುದು. ಪೂಜೆ ಮಾಡಬಹುದು. ಅನ್ಯರಿಗೆ ವಿಗ್ರಹವನ್ನು ಸ್ಪರ್ಶಿಸಲು ಅವಕಾಶವಿಲ್ಲ. ಪ್ರತಿಯೊಂದು ಮಠದವರೂ ಸರತಿಯ ಪ್ರಕಾರ ಎರಡು ವರ್ಷ ಪೂಜೆ ಮಾಡುತ್ತಾರೆ. ಒಂದು ಮಠದ ಪೂಜಾಕಾರದ ಅವ ಮುಗಿದಾಗ ಇದನ್ನು ಮತ್ತೊಂದು ಮಠಕ್ಕೆ ವರ್ಗಾಯಿಸಲಾಗುತ್ತದೆ. ಈ ಅಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಪರ್ಯಾಯ ಎಂದು ಕರೆಯುತ್ತಾರೆ. ಉಡುಪಿ ಪರ್ಯಾಯ ಉಡುಪಿಯಲ್ಲಿ ಜರುಗುವ ಎಲ್ಲ ಉತ್ಸವ , ಹಬ್ಬಗಳಿಗೆ ಕಿರೀಟಪ್ರಾಯ. ಇಲ್ಲಿ ಪ್ರತಿ ವರ್ಷ ಸಂಕ್ರಾಂತಿಯಂದು ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ವಜ್ರಕಿರೀಟಧಾರಣೆ ನಡೆಯುತ್ತದೆ. ಜಾತ್ರೆ, ಆಯನಗಳ ಸಂದರ್ಭದಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿರುವ ಚಿನ್ನದ ರಥ ಎಳೆಯುತ್ತಾರೆ.

udupi Krishna golden ratha, ಉಡುಪಿ ಕೃಷ್ಣ ಸುವರ್ಣ ರಥಕನಕದಾಸರ ಮಹಿಮೆ: ಹದಿನಾರನೇ ಶತಮಾನದಲ್ಲಿ ಅದು ವಾದಿರಾಜರ ಕಾಲ. ಆ ಸಮಯದಲ್ಲಿ ಶ್ರೀಕೃಷ್ಣನ ಭಕ್ತರಾದ ಕನಕದಾಸರು ಉಡುಪಿಯ ಕೃಷ್ಣನ ಕಾಣಲು ಬರುತ್ತಾರೆ. ಆದರೆ, ಅವರನ್ನು ದೇವಾಲಯದ ಒಳಗೆ ಬಿಡುವುದಿಲ್ಲ. ಇದರಿಂದ ನೊಂದ ದಾಸರು ದೇಗುಲದ ಹಿಂಭಾಗದಲ್ಲಿ ಕುಳಿತು ಕೃಷ್ಣನ ಮೊರೆಯಿಡುತ್ತಾರೆ. ಇವರ ಭಕ್ತಿಗೆ ಒಲಿದ ಕೃಷ್ಣ ಹಿಂದು ಮುಂದಾಗಿ ತಿರುಗಿ, ಗೋಡೆಯಲ್ಲೊಂದು ರಂಧ್ರ ಮಾಡಿ ಕನಕರಿಗೆ ದರ್ಶನ ನೀಡಿದರು ಎಂಬುದು ಪ್ರಚಲಿತವಾದ ಕಥೆ. ಹೀಗಾಗಿ ಈ ಕಿಂಡಿಗೆ ಕನಕನ ಕಿಂಡಿ ಎಂದೇ ಹೆಸರು. ಇಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳುತ್ತವೆ. ಮಧ್ವನವಮಿ, ರಾಮನವಮಿ, ಅನಂತ ಚತುರ್ದಶಿ, ಸುಬ್ರಹ್ಮಣ್ಯ ಷಷ್ಠಿ, ನವರಾತ್ರಿ, ಜನ್ಮಾಷ್ಟಮಿ, ಉತ್ವಾನ ದ್ವಾದಶಿ ಮೊದಲಾದ ದಿನಗಳಂದು ವಿಶೇಷ ಪೂಜೆಗಳು ಜರುಗುತ್ತವೆ.

ಉಡುಪಿಗೆ ಹೋಗಬೇಕೆಂದಿದ್ದೀರಾ ?  ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ಎಲ್ಲ ಬಸ್ಸುಗಳೂ ಉಡುಪಿ ನಗರಕ್ಕೆ ಹೋಗುತ್ತವೆ. ಬೆಂಗಳೂರಿನಿಂದ ಉಡುಪಿಗೆ ರಸ್ತೆ ಮಾರ್ಗದಲ್ಲಿ ಸುಮಾರು ೯ ಗಂಟೆಗಳ ಪ್ರಯಾಣ. ಉಡುಪಿಯ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಒಂದು ಕಿಲೋ ಮೀಟರ್‌ಗಿಂತ ಹೆಚ್ಚು ದೂರವಿಲ್ಲ. ಉಡುಪಿಯ ಸುತ್ತಮುತ್ತ ಇರುವ ಮರವಂತೆ, ಮಲ್ಪೆ ಬೀಚ್‌ಗಳು, ಸೈಂಟ್ ಮೇರಿಸ್ ದ್ವೀಪ, ಕೊಲ್ಲೂರು, ಸೌಪರ್ಣಿಕಾ ನದಿಯ ಸಮುದ್ರ ಸೇರುವ ಸಂಗಮ ಸ್ಥಳವೇ ಮೊದಲಾದ ಪ್ರೇಕ್ಷಣೀಯ ಸ್ಥಳಗಳೂ ಉಡುಪಿಯ ಪ್ರವಾಸೋದ್ಯಮಕ್ಕೆ ನೆರವಾಗಿವೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು

M.V.Shankaranarayan

Our ministers.com