|
ಮುಖಪುಟ
/ನಮ್ಮ
ದೇವಾಲಯಗಳು ತುರುವೇಕೆರೆಯ ಮೂಲೆ ಶಂಕರ ದೇವಾಲಯ *ಟಿ.ಎಂ.ಸತೀಶ್
ತುರುವೇಕೆರೆಗೂ ಹೊಯ್ಸಳ ದೊರೆಗಳಿಗೂ ಅವಿನಾಭಾವ ಸಂಬಂಧವಿದೆ. ಹೊಯ್ಸಳರು ರಾಜ್ಯದ ವಿವಿಧೆಡೆ ನಿರ್ಮಿಸಿರುವ ಬಹುತೇಕ ಎಲ್ಲ ದೇವಾಲಯಗಳಿಗೂ ತುರುವೇಕೆರೆ ಬಳಿಯ ಕಡೇಹಳ್ಳಿ ಗುಡ್ಡದಿಂದ ಬಳಪದ ಕಲ್ಲುಗಳನ್ನು ಪೂರೈಸಲಾಗಿದೆ. ಹೀಗಾಗೇ ಹೊಯ್ಸಳರಿಗೆ ಪ್ರಿಯವಾದ ತುರುವೇಕೆರೆ ಸುತ್ತಮುತ್ತ ತಮ್ಮ ದಂಡನಾಯಕರಿಂದ ಹಲವಾರು ದೇವಾಲಯಗಳನ್ನೂ ಕಟ್ಟಿಸಿದ್ದಾರೆ. ತಾಲೂಕು ಕೇಂದ್ರವಾದ ತುರುವೇಕೆರೆಯಲ್ಲಿರುವ ಮೂಲೆಶಂಕರ ದೇವಾಲಯ ಪ್ರಾಚೀನವಾದದ್ದು. ಕ್ರಿಸ್ತಶಕ 12ನೇ ಶತಮಾನದಲ್ಲಿ ಈ ದೇವಾಲಯವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಯಿತು. ಇತಿಹಾಸ ಪ್ರಸಿದ್ಧ ಸೋಮನಾಥಪುರದ ಕೇಶವ ದೇವಾಲಯವನ್ನು ಕಟ್ಟಿಸಿದ ಹೊಯ್ಸಳರ ದಂಡನಾಯಕ ಸೋಮಣ್ಣನೇ ಈ ದೇವಾಲಯವನ್ನೂ ನಿರ್ಮಿಸಿದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದ್ದ ಮನಮೋಹಕ ಮೂಲೇ ಶಂಕರ ದೇವಾಲಯವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಧರ್ಮೋತ್ಥಾನ ಟ್ರಸ್ಟ್ – ಸ್ಥಳೀಯ ಸುರಭಿ ಸಂಗಮ ರಾಜ್ಯ ಸರಕಾರದ ಸಹಕಾರದಿಂದ ಜೀರ್ಣೋದ್ಧಾರ ಮಾಡಿದೆ.
ನವರಂಗದಲ್ಲಿ ಹೊಯ್ಸಳ ಕಾಲದ ಭೈರವ, ವೀರಭದ್ರ ಮತ್ತು ಸುಬ್ರಹ್ಮಣ್ಯ ಶಿಲ್ಪಗಳಿವೆ. ಹೊರಗಡೆ ಅಡಿಪಟ್ಟಿಕೆಯಲ್ಲಿ ಸರೋಜ, ಜಕ್ಕಣ, ಈಶ್ವರ ಎಂಬ ಶಿಲ್ಪಿಗಳ ಹೆಸರಿದ್ದು ಈ ದೇವಾಲಯವನ್ನು ಖ್ಯಾತ ಶಿಲ್ಪ ಜಕ್ಕಣಾಚಾರಿಯೇ ಕಟ್ಟಿರಬಹುದು ಎಂದೂ ಹೇಳಲಾಗುತ್ತದೆ. ಹಲವಾರು ವರ್ಷಗಳ ಹಿಂದೆ ಮೂಲೆಶಂಕರನ ದೇವಾಲಯದೊಳಗೆ ಹುಲ್ಲು ತುಂಬಿ ಬೆಂಕಿ ಹಚ್ಚು ಹಾಳು ಮಾಡುವ ಪ್ರಯತ್ನ ನಡೆದಿತ್ತು. ಬೆಂಕಿಯ ಜ್ವಾಲೆಗಳ ಶಾಖಕ್ಕೆ ದೇಗುಲದ ಒಳಗಿರುವ ಬೃಹತ್ ಗಾತ್ರದ ಕಲ್ಲಿನ ಬೋಧಿಗಳು (ಬೀಮ್ಸ್) ಸೀಳಿಹೋಗಿದ್ದವು. ಆದರೂ ಕಟ್ಟಡ ಬಲಿಷ್ಠವಾಗಿದ್ದರಿಂದ ಛಾವಣಿ ನೆಲಕಚ್ಚಲಿಲ್ಲ. ಆನಂತರ ದೇವಾಲಯವನ್ನು ಭದ್ರಗೊಳಿಸಲು ಸ್ಥಳೀಯರು ದೇಗುಲದ ಸುತ್ತಲೂ 4 ಅಡಿಯಷ್ಟು ಎತ್ತರದವರೆಗೂ ಮಣ್ಣು ತುಂಬಿದ್ದರು. ಸರ್.ಎಂ.ವಿ. ಭೇಟಿ : 1939ರಲ್ಲಿ ತುರುವೇಕೆರೆಗೆ ಭೇಟಿ ನೀಡಿದ್ದ ಅಂದಿನ ಮೈಸೂರು ದಿವಾನರಾದ ಮೋಕ್ಷಗೊಂಡಂ ಸರ್.ಎಂ. ವಿಶ್ವೇಶ್ವರಯ್ಯನವರು ಮೂಲೆಶಂಕರ ದೇವಾಲಯದಲ್ಲಿ ಬೆಂಕಿಯ ಬಿಸಿಗೆ ಸೀಳಿದ್ದ ಬೋಧಿಗಳು ನೆಲಕ್ಕೆ ಬೀಳದಂತೆ ಕೃತಕ ಶಿಲಾಕಂಬ ಜೋಡಿಸಲು ಸಲಹೆ ನೀಡಿದ್ದರು. ಆಗ ಅವರ ಆದೇಶದಂತೆ ಕೃತಕ ಕಂಬ ಜೋಡಿಸಲಾಗಿತ್ತು. ದೇವಾಲಯದ ಛಾವಣಿಗೆ ರಕ್ಷಣೆಯೂ ಸಿಕ್ಕಿತ್ತು. ಆದರೆ, ದೇವರ ದರ್ಶನಕ್ಕೆ ಈ ಕೃತಕ ಕಂಬಗಳು ಅಡ್ಡಿಯಾಗಿದ್ದವು.
ದೇವಾಲಯದಲ್ಲಿ ಭಗ್ನವಾಗಿರುವ ಸುಬ್ರಹ್ಮಣ್ಯನ ವಿಗ್ರಹವಿದ್ದು, ಅದರಲ್ಲಿ ಕೆತ್ತಲಾಗಿರುವ ನವಿಲಿನ ಪ್ರತಿಮೆ ಮನಮೋಹಕವಾಗಿದೆ. ದೇವಾಲಯದ ಒಳಗೆ ಇಡಲಾಗಿರುವ ಪಟ್ಟಿಕೆಯೊಂದರಲ್ಲಿ ಸಪ್ತಮಾತೃಕೆಯರ ಸುಂದರ ಕೆತ್ತನೆಯೂ ಇದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||