|
ಮುಖಪುಟ
/ನಮ್ಮ
ದೇವಾಲಯಗಳು ತುರುವೇಕೆರೆಯ ಚನ್ನಿಗರಾಯಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ತುರುವೇಕೆರೆಯಲ್ಲಿ ಹೇರಳವಾಗಿ ಗೋ ಸಂಪತ್ತು ಮತ್ತು ಜಲ ಸಂಪತ್ತು ಇತ್ತು ಹೀಗಾಗಿ ಈ ಊರು ನಂತರ ಧೇನುಪುರಿ ಎಂದೂ ಕರೆಸಿಕೊಂಡಿತ್ತು. ತುರು ಎಂದರೆ ಆಡು ಭಾಷೆಯಲ್ಲಿ ಹಸು. ಕಾಲಾನಂತರದಲ್ಲಿ ಈ ಊರು ತುರುವೇಕೆರೆಯಾಯ್ತು ಎಂದು ತಿಳಿದುಬರುತ್ತದೆ. ಈ ಪವಿತ್ರ ಪುಣ್ಯಭೂಮಿಯಲ್ಲಿ ಹೊಯ್ಸಳರ ಹೊಯ್ಸಳ ದೊರೆ 3ನೇ ನರಸಿಂಹನಿಗೆ ದಂಡನಾಯಕನಾಗಿದ್ದ ಸೋಮಣ್ಣ ನಿರ್ಮಿಸಿದನೆಂದು ಇತಿಹಾಸ ಸಾರುತ್ತದೆ. (ಶಿಲ್ಪಕಲೆಯ ತವರೆಂದೇ ಖ್ಯಾತವಾದ ಸೋಮನಾಥಪುರದ ತ್ರಿಕೂಟಾಚಲವನ್ನು ನಿರ್ಮಿಸಿದ್ದೂ ಈ ಸೋಮಣ್ಣನೇ). ಸೋಮಣ್ಣ ಕ್ರಿ.ಶ. 1258ರಲ್ಲಿ ತುರುವೇಕೆರೆಯ ಅಗ್ರಹಾರದಲ್ಲಿ ಶ್ರೀಚನ್ನಕೇಶವನಿಗಾಗಿ ಏಕಕೂಟ ದೇವಾಲಯ ನಿರ್ಮಿಸಿದ. ತನ್ನ ಪಿತೃಗಳಿಗೆ ಸದ್ಗತಿ ದೊರಕಲೆಂದು, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗಲೆಂದು ಇದೇ ಅಗ್ರಹಾರವನ್ನು ಊರಿನಲ್ಲಿ ಪ್ರಸಿದ್ಧರಾಗಿದ್ದ ಹಾಗೂ ವೇದಪಾರಂಗತರಾಗಿದ್ದ ಕೋಟೆ ಶಂಕರದೇವ ಎಂಬ ಯಜುರ್ವೇದ ಅಪಸ್ಥಂಬ ಸೂತ್ರದ ಬ್ರಾಹ್ಮಣನಿಗೆ ಊರಿನ ಮಹಾಜನತೆಯ ಸಮ್ಮುಖದಲ್ಲಿ ದಾನ ಮಾಡಿದ. ಈ ದಾನವನ್ನು ಸ್ವೀಕರಿಸುವಾಗ ಐದು ಜನ ಬ್ರಾಹ್ಮಣರ ಸಹಿಯನ್ನೂ ಪಡೆದ. ಇದು ಇಂದಿಗೂ ಚನ್ನಕೇಶವ ದೇವಾಲಯದ ಭಿತ್ತಿ ಹಾಗೂ ಕಂಬದಲ್ಲಿ ಶಾಸನವಾಗಿ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಈ ದೇವಾಲಯ ಸುಂದರ ಕಲ್ಲು ಕಟ್ಟಡವಾಗಿದ್ದು, ಪೂರ್ವಾಭಿಮುಖವಾಗಿದೆ. ಭಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ ಹೊರಭಿತ್ತಿಗಳಲ್ಲಿ ಅರೆಕಂಬ ಹಾಗೂ ಅರೆಗೋಪುರಗಳ ಶಿಲ್ಪ ಇದೆ. ಪ್ರವೇಶ ದ್ವಾರದಲ್ಲಿ ಜಗತಿ ಇದ್ದು, ಊರಿನ ಪಂಡಿತರು ಇಲ್ಲಿ ಕುಳಿತು ಓಲೆಗರಿಯಲ್ಲಿ ನೂರಾರು ಗ್ರಂಥ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಓಲೆಗರಿಯಲ್ಲಿ ಬರೆಯಲು ತಮ್ಮ ಲೋಹದ ಲೇಖನಿಯನ್ನು ಹರಿತ ಮಾಡಿಕೊಂಡಿರುವುದಕ್ಕೆ ಇಲ್ಲಿರುವ ಕಲ್ಲುಗಳು ಗೆರೆಯಂತೆ ಏಕಪ್ರಕಾರವಾಗಿ ಸವೆದಿರುವುದು ಸಾಕ್ಷಿಯಾಗಿದೆ.
ನಾಲ್ಕೂವರೆ ಅಡಿ ಎತ್ತರದ ಚನ್ನಕೇಶವಸ್ವಾಮಿಯ ಪಾದದ ಬಳಿ ಲಕ್ಷ್ಮಿಯ ಪುಟ್ಟ ವಿಗ್ರಹವಿದೆ ಈ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ. ನವರಾತ್ರಿಯ ವೇಳೆ 10 ದಿನಗಳ ಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆ, ಉತ್ಸವಗಳು ಜರುಗುತ್ತವೆ. ಶ್ರಾವಣ, ಕಾರ್ತೀಕ ಮಾಸಗಳಲ್ಲೂ ವಿಶೇಷ ಪೂಜಾ ವಿಧಿಗಳು ಜರುಗುತ್ತವೆ. ಈ ದೇವಾಲಯಕ್ಕೆ ಬರುವ ಭಕ್ತರಿಗೆ, ಪ್ರವಾಸಿಗರಿಗೆ ಸ್ಥಳ ಪುರಾಣ, ದೇವಾಲಯದ ಮಾಹಿತಿ ದೊರಕಲೆಂದು ಟಿ.ನಟರಾಜ ಪಂಡಿತ್ ಅವರು, ದೊಡ್ಡ ಫಲಕವನ್ನೇ ಇಲ್ಲಿ ಹಾಕಿಸಿದ್ದಾರೆ. | |||