ಮುಖಪುಟ /ನಮ್ಮದೇವಾಲಯಗಳು  

ತೊಣ್ಣೂರು  ದೇವಾಲಯ

*ಟಿ.ಎಂ. ಸತೀಶ್

Utsavamurthyಮೇಲುಕೋಟೆಯಿಂದ 20 ಕಿಲೋ ಮೀಟರ್,   ಪಾಂಡವಪುರದಿಂದ 8 ಕಿಲೋ ಮೀಟರ್ ದೂರದಲ್ಲಿರುವ ತೊಣ್ಣೂರು ಇತಿಹಾಸ ಪ್ರಸಿದ್ಧ ಊರು.  ಹೊಯ್ಸಳರ ಕಾಲದಲ್ಲಿ ಇದು ಅಗ್ರಹಾರವಾಗಿತ್ತು.  ತೊಂಡನೂರು, ತೊಂಡನೂರಗ್ರಹಾರ, ಯಾದವಪುರ, ಯಾದವನಾರಾಯಣ, ಚತುರ್ವೇದಿಮಂಗಲ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಈ ಊರಿನಲ್ಲಿ ಅತಿ ಉದ್ದದ ಹಾಗೂ ಆಳದ ದೊಡ್ಡ ಕೆರೆ ಇರುವ ಹಿನ್ನೆಲೆಯಲ್ಲಿ  ಈಗ ಕೆರೆ ತೊಣ್ಣೂರೆಂದೇ ಖ್ಯಾತವಾಗಿದೆ.

ಹೊಯ್ಸಳರ ಅರಸ ವಿಷ್ಣುವರ್ಧನನ ತಾಯಿ ಮಹಾದೇವಿಯವರು ಇಲ್ಲಿ ತುಪ್ಪಲೇಶ್ವರ ದೇವಾಲಯ ಕಟ್ಟಿಸಿದರೆಂದು ತಿಳಿದುಬರುತ್ತದೆ. ರಾಮಾನುಜಾಚಾರ್ಯರು ಜೈನಮತಾವಲಂಬಿಯಾಗಿದ್ದ ವಿಷ್ಣುವರ್ಧನನನ್ನು ವೈಷ್ಣವಮತಕ್ಕೆ ಮತಾಂತರಗೊಳಿಸಿದುದು ಇಲ್ಲಿಯೇ ಎಂಬ ಐತಿಹ್ಯವಿದೆ. ಈ ಊರಿನಲ್ಲಿ  ಕೈಲಾಸೇಶ್ವರ, ನರಸಿಂಹ ದೇವಾಲಯಗಳಿವೆ.

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದ್ರಾವಿಡ ಶೈಲಿಯ ಲಕ್ಷ್ಮೀನಾರಾಯಣ ದೇವಾಲಯ ವಿಷ್ಣುವರ್ಧನ ಕಟ್ಟಿಸಿದ ಪಂಚ ವಿಷ್ಣುದೇವಾಲಯಗಳ ಪೈಕಿ ಒಂದಿರಬಹುದೆಂಬ ಮಾತೂ ಇದೆ. ಈ ದೇವಾಲಯ   ಗರ್ಭಗೃಹ, ಸುಕನಾಸಿ ಮತ್ತು ನವರಂಗ ಒಳಗೊಂಡಿದೆ. ನವರಂಗದಲ್ಲಿ ನಯವಾದ ಕಂಬಗಳಿದ್ದು, ಬೇಲೂರು ಹಳೇಬೀಡು ದೇವಾಲಯಗಳ ಕಂಬವನ್ನು ಹೋಲುತ್ತವೆ.

ದ್ರಾವಿಡ ಹೊಯ್ಸಳ ಶೈಲಿಯಲ್ಲಿರುವ ಮೂಲ ದೇವಾಲಯದ ಪಕ್ಕದಲ್ಲಿ ಅಮ್ಮನವರ ಗುಡಿ ಇದೆ. ಇಲ್ಲಿ ಲಕ್ಷ್ಮೀ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಹೊಯ್ಸಳರ ದಂಡನಾಯಕ ಸುರಿಗೆಯ ನಾಗಯ್ಯ ಇದನ್ನು ಕಟ್ಟಿಸಿದನೆಂದು ಶಾಸನ ಸಾರುತ್ತದೆ.

ಇಲ್ಲಿರುವ ಮತ್ತೊಂದು ದೊಡ್ಡ ದೇವಾಲಯ ಕೃಷ್ಣ ದೇವಾಲಯ. ದೊಡ್ಡ ಪ್ರವೇಶದ್ವಾರ, ವಿಶಾಲ ಪ್ರಕಾರ, ಗೋಪುರವಿರುವ ದೇವಾಲಯದಲ್ಲಿ ಸುಖಾಸೀನನಾದ ಕೃಷ್ಣನ ದೊಡ್ಡ ಮೂರ್ತಿ ಇದೆ. ಎಡಬಲದಲ್ಲಿ ನಿಂತಿರುವ ರುಕ್ಮಿಣಿ ಸತ್ಯಭಾಮೆಯರ ಮೂರ್ತಿಗಳಿವೆ. ಇಲ್ಲಿನ ನರಸಿಂಹ ದೇವಾಲಯದಲ್ಲಿ ಯೋಗಾನರಸಿಂಹ ವಿಗ್ರಹವಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು