ಮುಖಪುಟ /ನಮ್ಮದೇವಾಲಯಗಳು  

ಗೊಮ್ಮಟೇಶನ ನೆಲೆಬೀಡು ಶ್ರವಣಬೆಳಗೊಳ
ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ
, ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು..

*ಟಿ.ಎಂ.ಸತೀಶ್

Sravanabelagola, bahubali, kannadaratna.comಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ, ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆನಾಡು.... ಎಂಬ ಗೀತೆ ಕೇಳಿರುವಿರಲ್ಲವೇ? ಕಗ್ಗಲು ಕಲೆಯಾಗಿ ವಿಶ್ವದ ಗಮನವನ್ನೇ ತನ್ನತ್ತ ಸೆಲೆದಿರುವ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ.

ಇತಿಹಾಸ: ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳ ಪ್ರಾಚೀನ ಇತಿಹಾಸವುಳ್ಳ ಒಂದು ಪುಟ್ಟ ಗ್ರಾಮ. ಹಿಂದೆ ಕಟವಪ್ರ, ಕಟಪ್ರ, ವೆಳ್ಗೊಳ, ಧವಳಸರ ತೀರ್ಥ ಎಂದು ಇದನ್ನು ಕರೆಯುತ್ತಿದ್ದರೆನ್ನುತ್ತವೆ ಶಾಸನಗಳು. ಊರಿನ ಮಧ್ಯೆ ಬಿಳಿ ಕೊಳವಿರುವುದರಿಂದ ಹಾಗೂ ಶ್ರವಣ ಎಂದರೆ ಜೈನ ಮುನಿ ಇಲ್ಲಿ ಹಲವಾರು ಜೈನಮುನಿಗಳು ನೆಲೆಸಿದ್ದರಿಂದ ಇದಕ್ಕೆ ಶ್ರವಣ ಬೆಳಗೊಳ ಎಂದು ಹೆಸರು ಬಂದಿದೆ ಎನ್ನುತ್ತಾರೆ ಪುರಜನ.

ವಿಂದ್ಯಗಿರಿ, ಚಂದ್ರಗಿರಿ ಬೆಟ್ಟಗಳಿಂದ ಕಂಗೊಳಿಸುತ್ತಿರುವ ಈ ಪವಿತ್ರ ಪುಣ್ಯಸ್ಥಳದಲ್ಲಿ ಏಷ್ಯಾದ ಅತಿದೊಡ್ಡ ಶಾಂತಚಿತ್ತ, ಮದಸ್ಮಿತ ಬಾಹುಬಲಿಯ ೧೭ ಮೀಟರ್‌ (58 ಅಡಿ) ಗಳ ಎತ್ತರದ ಏಕಶಿಲೆಯ ಅಖಂಡ ಶಿಲಾ ಮೂರ್ತಿ ಇದೆ. ಬಾಹುಬಲಿಯ ಈ ಮೂರ್ತಿಯಿರುವ ಬೆಟ್ಟಕ್ಕೆ ವಿಂದ್ಯಗಿರಿ (ಇಂದ್ರಗಿರಿ) ಎನ್ನುತ್ತಾರೆ. ಇಲ್ಲಿ ಹಲವು ತೀರ್ಥಂಕರರ ಮೂರ್ತಿಗಳಿವೆ. ಜೈನ ಬಸದಿಗಳಿವೆ. ಶಿಲಾ ಶಾಸನಗಳಿವೆ.

Sravanabelagola, Chandragiri, kannadaratna.comಕ್ರಿ.ಪೂ.290ರಲ್ಲಿ ಮೌರ್ಯ ಚಕ್ರವರ್ತಿ ಚಂದ್ರಗುಪ್ತನೊಡನೆ ಉತ್ತರ ಭಾರತದಿಂದ ಭದ್ರಬಾಹುಮುನಿ ತಪವನ್ನಾಚರಿಸಿ ದೇಹತ್ಯಾಗ ಮಾಡಿದ ಚಿಕ್ಕ ಬೆಟ್ಟಕ್ಕೆ ಚಂದ್ರಗಿರಿ ಎನ್ನುತ್ತಾರೆ.

ಚಂದ್ರಗಿರಿಯ ಪಾರ್ಶ್ವನಾಥ ಬಸದಿಯಲ್ಲಿ ಇರುವ ಮಾನಸ್ತಂಭ, ಇಂದ್ರಗಿರಿಯಲ್ಲಿರುವ ತ್ಯಾಗದ ಬ್ರಹ್ಮದೇವರ ಕಂಬ, ಅಕ್ಕನ ಬಸದಿಯ ಶಿಖರದ ಮುಂಭಾಗದಲ್ಲಿರುವ ಕೀರ್ತಿಮುಖ ಸೂಕ್ಷ್ಮ ಕೆತ್ತನೆಗಳಿಂದ ಗಮನಸೆಳೆಯುತ್ತವೆ. ದೊಡ್ಡಬೆಟ್ಟ ವಿಂದ್ಯಗಿರಿಯಲ್ಲಿರುವ ಭರತಮೂರ್ತಿಗಳು ಅತ್ಯಂತ ಮನೋಹರವಾಗಿವೆ. ಚಿಕ್ಕಬೆಟ್ಟದ ಚಂದ್ರಗುಪ್ತನ ಬಸದಿ ಅತ್ಯಂತ ಕಿರಿದಾದುದಾದರೆ, ಚಾವುಂಡರಾಯನ ಬಸದಿ ವಾಸ್ತುಶೈಲಿ ಹಾಗೂ ಕಲಾಕೌಶ್ಯಲ್ಯದ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ.

sravanabelagola, kannadaratna.comಐತಿಹ್ಯ: ಬಾಹುಬಲಿಯ ಸೋದರ ಭರತ ತನ್ನ ಶಸ್ತ್ರಾಗಾರದಲ್ಲಿ ಉದಯಿಸಿದ ಚಕ್ರರತ್ನ ಮುಂದಿಟ್ಟುಕೊಂಡು ಎಲ್ಲ ರಾಜರನ್ನೂ ಗೆದ್ದು ಚಕ್ರವರ್ತಿಯಾಗಿ ಹಿಂತಿರುಗುತ್ತಾನೆ. ಆದರೆ, ಚಕ್ರ ಪುರಪ್ರವೇಶಕ್ಕೆ ಅಡ್ಡಿಯುಂಟು ಮಾಡುತ್ತದೆ. ನಿನ್ನ ಸೋದರರೇ ನಿನ್ನ ಅನರಾಗದಿರುವಾಗ ನೀನು ಚಕ್ರವರ್ತಿ ಹೇಗಾಗುತ್ತೀಯೇ ಎಂದು ಅಶರೀರವಾಣಿ ಮೊಳಗುತ್ತದೆ. ಆಗ ಭರತ ಎಲ್ಲ ಸೋದರರಿಗೂ ನಿರೂಪ ಕಳಿಸುತ್ತಾನೆ. ಸ್ವಾಭಿಮಾನಿಯಾದ ಬಾಹುಬಲಿ ಯುದ್ಧಕ್ಕೆ ನಿಲ್ಲುತ್ತಾನೆ. ಬಾಹುಬಲಿಯ ವಿರುದ್ಧ ಭರತ ಸೋಲುತ್ತಾನೆ. ಆದರೆ, ತನ್ನ ಸೋದರನೊಂದಿಗೆ ಕಾದಾಡಿದ ಬಗ್ಗೆ ವ್ಯಾಕುಲಗೊಂಡ ಬಾಹುಬಲಿ ಗೆ ವೈರಾಗ್ಯ ಮೂಡುತ್ತದೆ. ರಾಜ್ಯ, ಕೋಶ ಎಲ್ಲ ತೊರೆದು ಘೋರ ತಪವನ್ನಾಚರಿಸುತ್ತಾನೆ. ವಿರಾಗಿಯಾಗುತ್ತಾನೆ.

ಚಾವುಂಡರಾಯ ಶ್ರವಣಬೆಳಗೊಳದಲ್ಲಿ ವಿಶ್ವದ ಅತಿ ಎತ್ತರದ ಏಕಶಿಲೆಯ ಗೊಮ್ಮಟಮೂರ್ತಿಯನ್ನು ಕೆತ್ತಿಸಿದ್ದಾನೆ. ಬಾಹುಬಲಿಗೆ ಗೊಮ್ಮಟೇಶ್ವರ ಎಂಬ ಹೆಸರುಕೊಟ್ಟ ಖ್ಯಾತಿ ಕರುನಾಡಿಗೆ ಸಲ್ಲುತ್ತದೆ. ಬೆಳಗೊಳದ ಈ ಸುಂದರ ಮೂರ್ತಿ ೫೮ ಅಡಿ ಎತ್ತರವಿದ್ದು, ಕಿವಿಯ ಕೆಳಭಾಗದವರೆಗಿನ ಎತ್ತರ ೫೧ ಅಡಿ, ಕಿವಿಯ ಕೆಳಭಾಗದಿಂದ ನೆತ್ತಿಯವರೆಗಿನ ಎತ್ತರವೇ ಆರೂವರೆ ಅಡಿಯಷ್ಟಿದೆ. ಪಾದದ ಉದ್ದ ೮ ಅಡಿ ೩ ಅಂಗುಲ ಇದ್ದು, ಕಾಲ Bahubali, gommateswara, gomateswara, sravanabelagola, kannadaratna.comಹೆಬ್ಬರಳೊಂದರ ಉದ್ದ ೨ ಅಡಿ ೯ ಅಂಗುಲ ಇದೆ. ತೊಡೆಯ ಉದ್ದ ೧೦ ಅಡಿಗಳಾದರೆ, ಕೈನಲ್ಲಿರುವ ಕಿರುಬೆರಳೇ ೩ ಅಡಿ ೨ ಅಂಗುಲ ಇದೆ. ಗುಂಗುರು ಗುಂಗುರು ಕೂದಲು, ಲತೆ ಹಬ್ಬಿಹ ದೇಹವುಳ್ಳ ಮೂರ್ತಿ ಮನೋಹರವಾಗಿದೆ. ಪಾದದ ಬಳಿ ಹುತ್ತವನ್ನು ಕೆತ್ತಲಾಗಿದ್ದು, ಹುತ್ತದ ಬಾಯಿಂದ ಸರ್ಪಗಳು ಹೊರಬಂದಂತೆ ಕೆತ್ತಲಾಗಿದೆ. ೧೦೦೦ ವರ್ಷಗಳಷ್ಟು ಹಳೆಯದಾದ ಈ ಮೂರ್ತಿಗೆ ೧೨ ವರ್ಷಗಳಿಗೊಮ್ಮೆ ಮಹಾಮಜ್ಜನ ನಡೆಯುತ್ತದೆ. ಈ ಸಂದರ್ಭದಲ್ಲಿ ಶತ ಕಳಶ, ಸಹಸ್ರಕಳಶ, ಹಾಲು, ಮೊಸರು, ಕಲ್ಕಚೂರ್ಣ, ಕಷಾಯ, ತುಪ್ಪ, ಜೇನು, ಸಕ್ಕರೆಯೇ ಎಲ್ಲಕ್ಕಿಂತ ಮಿಗಿಲಾಗಿ ಚಿನ್ನದ ನಾಣ್ಯಗಳಿಂದ ಮಾಡುವ ಅಭಿಷೇಕವನ್ನು ಕಣ್ಣಾರೆ ಕಾಣುವುದು ಒಂದು ಆನಂದ. ಅವಿಸ್ಮರಣೀಯ ಅನುಭವ. ೧೨ ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2006ವರ್ಷ ಫೆಬ್ರವರಿಯಲ್ಲಿ ಇಲ್ಲಿ ನಡೆದಿತ್ತು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು