ಮುಖಪುಟ /ನಮ್ಮದೇವಾಲಯಗಳು  

ಹಲಸೂರು ಸೋಮೇಶ್ವರ ದೇವಸ್ಥಾನ

ಹಲಸೂರಿನ ಸೋಮೇಶ್ವರ ದೇವಾಲಯ, ಬೆಂಗಳೂರು ನಗರದ ಪುರಾತನ ದೇವಾಲಯಗಳಲ್ಲಿ  ಒಂದು.  ಚೋಳರ ಕಾಲದ ಈ ದೇಗುಲ ಕಲಾತ್ಮಕವಾಗಿಯೂ ಶ್ರೀಮಂತವಾಗಿದೆ. ಈ ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದ್ದು, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ದೇವಾಲಯಕ್ಕೆ ಆವರಣ ಗೋಡೆ ಹಾಗೂ ರಾಜಗೋಪುರ ಕಟ್ಟಿಸಿದರೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ.

ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಸೋಮೇಶ್ವರ ಲಿಂಗವಿದೆ. ದೇವಾಲಯದ ಪ್ರಾಕಾರದಲ್ಲಿ ಕಾಮಾಕ್ಷಮ್ಮ, ಅರುಣಾಚಲೇಶ್ವರ, ನಂಜುಂಡೇಶ್ವರ, ಪಂಚಲಿಂಗೇಶ್ವರ ಗುಡಿಗಳಿವೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರರು ಇಲ್ಲಿ ಪೂಜೆಗೊಳ್ಳುವುದು ವಿಶೇಷ.

ಪ್ರತಿ ತಿಂಗಳೂ ಇಲ್ಲಿ ಎರಡು ಪ್ರದೋಷ, ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ಶಿವರಾತ್ರಿಯಂದು ಬೆಳಗ್ಗೆಯಿಂದ ಬೆಳಗಿನ ಝಾವದವರೆಗೂ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. 4 ಯಾಮದ ಪೂಜೆಯ ನೋಡಲು ಜನಜಾತ್ರೆಯೇ ಸೇರುತ್ತದೆ.

ಪ್ರತಿ ಪೌರ್ಣಿಮೆಯಲ್ಲಿ ದೇವಾಲಯದಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕಾಮಾಕ್ಷಮ್ಮ ದೇವಿಗೆ ಪಲ್ಲಕ್ಕಿ ಉತ್ಸವ ಜರುಗುತ್ತದೆ. ನವರಾತ್ರಿಯ 9 ದಿನವೂ ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ಎಲ್ಲ ಹಬ್ಬ ಹರಿದಿನಗಳಂದು ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ.

ಚೈತ್ರ ಪಾಡ್ಯದ ಯುಗಾದಿಯ ದಿನ ಸಂಜೆ ಪಂಚಾಂಗ ಶ್ರವಣವೂ ನಡೆಯುತ್ತದೆ. ಇಲ್ಲಿರುವ ದೇವಾಲಯದ ಕಂಬ ಕಂಬಗಳಲ್ಲೂ ನಾದ ಹೊಮ್ಮುವುದು ವಿಶೇಷ.

ಮುಖಪುಟ /ನಮ್ಮದೇವಾಲಯಗಳು