ಮುಖಪುಟ /ನಮ್ಮ ದೇವಾಲಯಗಳು

ವನೌಷಧಗಳ ಧಾಮ ಸಿದ್ಧರಬೆಟ್ಟ

*ಟಿ.ಎಂ.ಸತೀಶ್

Siddarabettaತುಮಕೂರಿನಿಂದ ೪೩ ಕಿಲೋ ಮೀಟರ್ ದೂರದಲ್ಲಿರುವ ಸಿದ್ಧರಬೆಟ್ಟ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ. ಸಿದ್ಧರ ಬೆಟ್ಟ ಹೆಸರೇ ಹೇಳುವಂತೆ ಇದು ಸಿದ್ಧಪುರುಷರು ತಪವನ್ನಾಚರಿಸಿದ ಪುಣ್ಯಭೂಮಿ. ಈ ಬೆಟ್ಟ ಮುಳ್ಳಯ್ಯನಗಿರಿಯಷ್ಟು ದೊಡ್ಡದೂ ಅಲ್ಲ ಎತ್ತರವೂ ಇಲ್ಲ. ಆದರೂ ಇದಕ್ಕೆ ಪ್ರಾಮುಖ್ಯತೆ ಬಂದಿರುವುದು ಇಲ್ಲಿರುವ ವನೌಷಧ ಸಸ್ಯಗಳಿಂದ. ನೂರಾರು ಬಗೆಯ ಔಷಧೀಯ ಸಸ್ಯಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಒಂದು ದಿನ ಕಳೆದರೂ ಸಾಕು ಆರೋಗ್ಯ ಸುಧಾರಿಸುತ್ತದೆ. ಮನಸ್ಸು ಪ್ರಫುಲ್ಲವಾಗಿ ನವಚೈತನ್ಯ ಮೂಡುತ್ತದೆ ಎಂಬುದು ಇಲ್ಲಿಗೆ ಭೇಟಿ ನೀಡಿದವರೆಲ್ಲರ ಅಭಿಪ್ರಾಯ.

Siddarabettaಈ ಬೆಟ್ಟದ ತಪ್ಪಲಲ್ಲಿ ಹಾಗೂ ಬೆಟ್ಟದ ಮೇಲೆ ಶಿವನ ದೇವಾಲಯಗಳಿವೆ. ತಪ್ಪಲಲ್ಲಿರುವುದು ಪುಟ್ಟ ದೇವಾಲಯ. ಚಿಕ್ಕದಾದರೂ ಚೊಕ್ಕವಾಗಿರುವ ಇಲ್ಲಿ ಸುಂದರವಾದ ಶಿವಲಿಂಗವಿದೆ. ನಿತ್ಯ ಪೂಜೆ ನಡೆಯುತ್ತದೆ.

ಬೆಟ್ಟದ ಮೇಲೆ ಗುಹಾಂತರ ದೇವಾಲಯವಿದ್ದು, ಹತ್ತಲು ಒಂದು ಹಂತದವರೆಗೆ ಮೆಟ್ಟಿಲುಗಳಿವೆ ನಂತರ ಬೆಟ್ಟವನ್ನೇ ಕಡೆದು ಚಿಕ್ಕ ಚಿಕ್ಕ ಮೆಟ್ಟಲು ಮಾಡಲಾಗಿದೆ. ಇದನ್ನು ಕಷ್ಟಪಟ್ಟು ಹತ್ತಿ ಮೇಲೆ ಹೋದರೆ, ಗುಹಾಂತರ ದೇವಾಲಯದಲ್ಲಿ ಶಿವ ಹಾಗೂ ಯತಿಯ ವರ್ಣಚಿತ್ರ ಮನಸೆಳೆಯುತ್ತದೆ. ಇಲ್ಲಿರುವ ಪುಟ್ಟ ಬಾವಿಯಂಥ ಕುಂಡಿಕೆಯಲ್ಲಿ ಸದಾ ಜಲಧಾರೆ. ಈ ನೀರು ರೆಫ್ರಿಜರೇಟರ್‌ನಲ್ಲಿ ಇಟ್ಟ ನೀರಿನಂತೆ ತಂಪಾಗಿರುವುದು ವಿಶೇಷ.

ಬೆಟ್ಟಹತ್ತುವಾಗ ಆಗುವ ಆಯಾಸವನ್ನು ಸುತ್ತಲೂ ಇರುವ ರಮಣೀಯ ದೃಶ್ಯಗಳು ಮರೆಸುತ್ತವೆ. ಇಲ್ಲಿಂದ ಶಿವಗಂಗೆ ಬೆಟ್ಟ ಲಿಂಗಾಗೃತಿಯಲ್ಲಿ ಗೋಚರಿಸುತ್ತದೆ.

Siddarabettaಮೆಟ್ಟಿಲುಗಳ ಎಡ ಬಲದಲ್ಲಿ ನೂರಾರು ಗಿಡಗಳಿದ್ದು, ಕೆಲವು ಗಿಡಮರದಲ್ಲಿ ಬಿಟ್ಟ ಕಾಡು ಹೂಗಳು ಪರಿಮಳ ಬೀರುತ್ತಾ ನಮ್ಮ ಚಿತ್ತವನ್ನು ತಮ್ಮತ್ತ ಆಕರ್ಷಿಸುತ್ತವೆ.

ಇಲ್ಲೊಂದು ಫಲಕವೂ ಇದೆ. ಅದರಲ್ಲಿ ಕೈ ಮುಗಿದು ಬಾ ಯಾತ್ರಿಕನೆ ಇದು ವನೌಷಧಗಳ ಬೀಡು. ನೀವು ಈ ಸಸ್ಯ ಸಂಕುಲ ಸಂರಕ್ಷಿಸಿದರೆ ಉಳಿವುದು ಮನುಜನ ಪ್ರಾಣ ಎಂಬ ಸಂದೇಶವಿದೆ. ಆರೋಗ್ಯಧಾಮವೂ, ಶಿವನನೆಲೆವೀಡೂ ಆದ ಇಲ್ಲಿಗೆ ಆಗಮಿಸಲು ತುಮಕೂರು, ಮಧುಗಿರಿಯಿಂದ ನೇರ ಬಸ್ ಸೌಕರ್ಯವಿದೆ. ಮಧುಗಿರಿಯಿಂದ ಇಲ್ಲಿಗೆ ೨೨ ಕಿಲೋ ಮೀಟರ್ ಮಾತ್ರ.   

ಮುಖಪುಟ /ನಮ್ಮ ದೇವಾಲಯಗಳು