|
ತ್ರಿವಿಧ ದಾಸೋಹ ಕ್ಷೇತ್ರ ಸಿದ್ಧಗಂಗೆ
ಐತಿಹ್ಯ: ಈ ಕ್ಷೇತ್ರಕ್ಕೆ ಸುಮಾರು 600 ವರ್ಷಗಳ ಸುದೀರ್ಘ ಇತಿಹಾಸವಿದೆ. ತಪಸ್ವಿಗಳ ನೆಲೆವೀಡಾಗಿದ್ದ ಈ ಕ್ಷೇತ್ರದ ಮೂಲಪುರುಷರಾದ ಶ್ರೀ ಗೋಸಲ ಸಿದ್ಧೇಶ್ವರರು ಆತ್ಮ ಕಲ್ಯಾಣ ಹಾಗೂ ಜನಕಲ್ಯಾಣಕ್ಕಾಗಿ ಘೋರ ತಪಸ್ಸನ್ನಾಚರಿಸಿ, ತಮ್ಮ ತಪಃಶಕ್ತಿಯಿಂದ ಹೆಬ್ಬಂಡೆಯಲ್ಲಿ ಗಂಗಾವತರಣ ಮಾಡಿಸಿದರು (ಬಂಡೆಯಿಂದ ನೀರು ಹೊರಹೊಮ್ಮಿಸಿದರು) ಸಿದ್ಧರು ಗಂಗೆಯನ್ನು ತರಿಸಿದ ಈ ನಾಡಿಗೆ ‘ಸಿದ್ಧಗಂಗಾ’ ಎಂದೇ ಹೆಸರಾಯ್ತು. ಜನರು ಈ ಕ್ಷೇತ್ರವನ್ನು ಒಂದೇ ಪದದಲ್ಲಿ ‘ಸಿದ್ಧಗಂಗೆ ಬೆಟ್ಟ’ ಎಂದು ಕರೆಯುತ್ತಾರಾದರೂ, ಇದು ಜ್ಞಾನ-ಅನ್ನ ದಾಸೋಹಗಳ ತವರು. ಶಾರದೆ- ಅನ್ನಪೂರ್ಣೆಶ್ವರಿಯರ ನೆಲೆವೀಡು, ಸಿದ್ಧಪುರುಷರ ನಾಡು, ಒಟ್ಟಾರೆಯಾಗಿ ಈ ಎಲ್ಲವನ್ನೂ ಮೇಳೈಸಿಕೊಂಡ ಒಂದು ಪರಿಪೂರ್ಣ ಪುಣ್ಯ ತಾಣ. 15ನೇ ಶತಮಾನದಿಂದಲೂ ಹಾಗೂ ಅದಕ್ಕೂ ಮುಂಚಿನಿಂದಲೂ ಇಲ್ಲಿ ಸಿದ್ಧಪುರುಷರು ತಮ್ಮ ತಪೋಬಲದಿಂದ ಜನಕಲ್ಯಾಣದಲ್ಲಿ ನಿರತರಾಗಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ-ಪುರಾವೆಗಳು ದೊರೆತಿವೆ.
ಈ ಹೊತ್ತು ‘ಸಿದ್ಧಗಂಗಾ’ ಕ್ಷೇತ್ರ ಅನ್ನದಾಸೋಹ, eನ ದಾಸೋಹಗಳಿಂದ ವಿಶ್ವಾದ್ಯಂತ ಹೆಸರು ಮಾಡಿದೆ. ಈ ವಿಶ್ವಖ್ಯಾತಿ - ಕೀರ್ತಿಯ ರೂವಾರಿ ಡಾ. ಶಿವಕುಮಾರ ಸ್ವಾಮಿಗಳು. ಶ್ರೀಗಳ ಅಂತಾರಾಷ್ಟ್ರೀಯ ಚಿಂತನೆ - ವಿದ್ವತ್ತು ಸಿದ್ಧಗಂಗೆಗೆ ರಾಷ್ಟ್ರೀಯ - ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ. 3-3-1930ರಲ್ಲಿ ಶ್ರೀಉದ್ಧಾನ ಶಿವಯೋಗಿಗಳವರ ಉತ್ತರಾಧಿಕಾರಿಗಳಾಗಿ ಮಠದ ಅಕಾರವಹಿಸಿಕೊಂಡ ಕರ್ಮಯೋಗಿ ಶ್ರೀ ಶಿವಕುಮಾರ ಸ್ವಾಮಿಗಳು ಭಾರತೀಯ ಕೃಷಿ ಪರಂಪರೆಯ ಅಪೂರ್ವ ಚೇತನರಾಗಿ, ಗಾಂಜಿಯವರು ತೋರಿಸಿಕೊಟ್ಟ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ಧಾರ್ಮಿಕ ಕೇಂದ್ರವಾಗಿದ್ದ ನೆಲೆವೀಡನ್ನು ಶಿಕ್ಷಣಾರ್ಥಿಗಳ ಗುರುಕುಲವಾಗಿ ಮಾರ್ಪಡಿಸಿದ್ದಾರೆ. ನಿಶ್ಶಕ್ತರಿಗೆ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ಜಾತಿ ಮತಗಳ ಬೇಧವಿಲ್ಲ. ದೇಶಕ್ಕೆ ಮಾದರಿಯಾಗಿರುವ ಈ ಗುರುಕುಲದಲ್ಲಿ ಮನುಷ್ಯರೆಂದು ಕರೆಸಿಕೊಳ್ಳಲು ಅರ್ಹನಾದ ವ್ಯಕ್ತಿಗೆ ಶಿಷ್ಯವೃತ್ತಿ ಕೈಗೊಳ್ಳುವ ಮುಕ್ತ ಅವಕಾಶ ಇದೆ.
ಉಚಿತ ಊಟ -ವಸತಿ : ಶ್ರೀಶಿವಕುಮಾರ ಸ್ವಾಮಿಗಳು ತಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ, ಅನ್ನದಾಸೋಹ - eನದಾಸೋಹವನ್ನು ಅವಿರತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಶಿಕ್ಷಣಾರ್ಥಿಗಳಿಗೆ ಇಲ್ಲಿ ಉಚಿತ ಊಟ, ವಸತಿಯ ವ್ಯವಸ್ಥೆ ಒದಗಿಸಲಾಗುತ್ತದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಇಲ್ಲಿ ಸಂಸ್ಕೃತ ಕಲಿಸಿಕೊಡಲಾಗುತ್ತದೆ. ೨೦ನೇ ಶತಮಾನದ 20ರ ದಶಕದಲ್ಲಿ ಕೇವಲ 40 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿದ್ದ ಕ್ಷೇತ್ರದ ವಿದ್ಯಾರ್ಥಿ ನಿಲಯದಲ್ಲಿ ಈ ಹೊತ್ತು 10ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.
ಆರದ ಒಲೆ : ನೂರು ವರ್ಷಗಳ ಹಿಂದೆ ಇಲ್ಲಿನ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದೂ ಆರಿಲ್ಲ ಎಂದರೆ, ಇಲ್ಲಿನ ಅನ್ನದಾಸೋಹದ ಪರಿ ಅರ್ಥವಾದೀತು. ಇಂದು ಇಲ್ಲಿ ಏಕ ಕಾಲದಲ್ಲಿ 3೦೦೦ ಮಂದಿ ಊಟ ಮಾಡಬಹುದಾದಷ್ಟು ದೊಡ್ಡ ಸುಸಜ್ಜಿತ ಪ್ರಸಾದ ನಿಲಯವಿದೆ. ಅಂದಿನ ರಾಷ್ಟ್ರಪತಿ ಶಂಕರದಯಾಳ ಶರ್ಮರು ಉದ್ಘಟಿಸಿದ ಬೃಹತ್‌ಭವ್ಯ ವಿದ್ಯಾರ್ಥಿ ನಿಲಯವೂ ಇದೆ. ಈ ವಿದ್ಯಾರ್ಥಿ ನಿಲಯದಲ್ಲಿ ಇನ್ನೂರು ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ೨೫೦೦ ವಿದ್ಯಾರ್ಥಿಗಳಿದ್ದು, ಇವರಿಗೆ ಉಚಿತ, ಊಟ, ವಸತಿ ಕಲ್ಪಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಬರುವ ಭಕ್ತರಿಗೂ ಇಲ್ಲಿ ಉಚಿತ ಊಟ- ವಸತಿ ಒದಗಿಸಲಾಗುತ್ತದೆ. ಶಿವರಾತ್ರಿಯ ಜಾತ್ರೆಯ ಕಾಲದಲ್ಲಿ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಮಹಾದಾಸೋಹ ನಿಧಿ: ಇದಕ್ಕೆ ಎಷ್ಟೇ ಖರ್ಚು ತಗುಲುತ್ತಿದ್ದರೂ ಶ್ರೀಗಳು ದಾಸೋಹವನ್ನು ಮುಂದುವರಿಸಿದ್ದಾರೆ. ಈ ದಾಸೋಹ ನಿರಂತರವಾಗಿ ನಡೆಯಲೆಂದು ‘ಮಹಾದಾಸೋಹ ನಿಧಿ’ ಸ್ಥಾಪಿಸಲಾಗಿದೆ. ಈ ನಿಗೆ ೨೧೦೧ ರುಪಾಯಿ ನೀಡುವ ಮೂಲಕ ಸಾರ್ವಜನಿಕರು ಈ ಮಹಾ ಅನ್ನದಾಸೋಹ ಸೇವೆಯ ಸದಸ್ಯರಾಗಬಹುದು. ಸಾಧನೆ : 1917ರಲ್ಲಿ ಆರಂಭಗೊಂಡ ವಿದ್ಯಾಶಾಲೆ 1973ರ ಹೊತ್ತಿಗೆ ಕಾಲೇಜು ಹಂತಕ್ಕೆ ಏರಿತು. ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಈ ಎಲ್ಲ ಸಾಧನೆಗಳ ರೂವಾರಿ ಡಾ. ಶಿವಕುಮಾರ ಸ್ವಾಮಿಗಳೆ. ಇವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಶಿವರಾತ್ರಿ ಜಾತ್ರೆ : ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಜಾನುವಾರು ಮೇಳದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಿಂದಲೂ ಜಾನುವಾರುಗಳು ಆಗಮಿಸುತ್ತವೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರುವ ದನಕರುಗಳನ್ನು ಇಲ್ಲಿ ಜನ ಕೊಳ್ಳುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮುತ್ತಿನ ಪಾಲಕಿ ಉತ್ಸವ, ರಥೋತ್ಸವ, ಬೆಳ್ಳಿ ಪಾಲಕಿ ಉತ್ಸವ, ತೆಪ್ಪೋತ್ಸವ, ಪಂಚಬ್ರಹ್ಮೋತ್ಸವವೇ ಮೊದಲಾದ 19ಉತ್ಸವಗಳೂ ಜರುಗುತ್ತವೆ. ಜಾತ್ರೆಯ ಅಂಗವಾಗಿ ನಡೆವ ಮದ್ದು (ಪಟಾಕಿ) ಗುಂಡುಗಳ
ಸುರಿಮಳೆ, ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತವೆ.
ಕೃಷಿ ಕೈಗಾರಿಕೆ ಮಾಹಿತಿ: ಔಪಚಾರಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ತರುತ್ತಿರುವ ಕ್ಷೇತ್ರ ಜಾತ್ರೆಯ ಸಂದರ್ಭದಲ್ಲಿ ರೈತರಿಗೆ ಕೃಷಿ -ಕೈಗಾರಿಕೆ ಮಾಹಿತಿಯನ್ನೂ ನೀಡುತ್ತದೆ. ಇದಕ್ಕಾಗೇ ಸುಸಜ್ಜಿತ ವಸ್ತುಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸುತ್ತದೆ. ರಾಜ್ಯದ ಗ್ರಾಮೀಣ ಜನರಿಗೆ ವೈಜ್ಞಾನಿಕ ಮಾಹಿತಿ ಒದಗಿಸುವ ಸಲುವಾಗಿ 16 ದಿನಗಳ ಕಾಲ ನಡೆವ ಈ ಕೃಷಿ - ಕೈಗಾರಿಕೆ ವಸ್ತು ಪ್ರದರ್ಶನ ನಾಡಿನಾದ್ಯಂತ ಮನೆಮಾತಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಅಭಿವೃದ್ಧಿ ಇಲಾಖೆಗಳೂ ಪಾಲ್ಗೊಳ್ಳುತ್ತವೆ. ವಸ್ತು ಪ್ರದರ್ಶನ ಆವರಣದಲ್ಲಿ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಜಾತ್ರೆಯ ಅಂಗವಾಗಿ ನಡೆಯುವ ವೈಭವದ ರಥೋತ್ಸವ ನೋಡಲು,ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಎಲ್ಲ ಭಕ್ತರಿಗೂ ಜಾತ್ರೆಯ ಸಂದರ್ಭದಲ್ಲಿ (10 ದಿನಗಳ ಕಾಲ) ಉಚಿತ ಊಟ ಮತ್ತು ವಸತಿಯನ್ನು ಶ್ರೀಮಠ ಕಲ್ಪಿಸುತ್ತದೆ. ಪ್ರಕಾಶನ: ಶ್ರೀಮಠವು ಕಳೆದ 37 ವರ್ಷಗಳಿಂದ ‘ಸಿದ್ಧಗಂಗಾ’ ಎಂಬ ಮಾಸಪತ್ರಿಕೆಯನ್ನೂ ಹೊರತರುತ್ತಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿ, ವಿeನ, ಆಧ್ಯಾತ್ಮಿಕ ಮಾಹಿತಿಗಳನ್ನೂ ನೀಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ನೈತಿಕ - ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಇದು ಸಮರ್ಥವಾಗಿ ಮಾಡುತ್ತಿದೆ. | |||