|
ಹರಿಹರರ ಬೀಡು ಶಿವನಸಮುದ್ರ *ಟಿ.ಎಂ.ಸತೀಶ್ ಜಲಲ.. ಜಲಲ.. ಜಲ ಧಾರೆ... ಕಾವೇರಿ ನದಿ ಧುಮ್ಮಿಕ್ಕುತ್ತಾ ಹರಿವ ವಿಹಂಗಮ ನೋಟವನ್ನು ಹಾಗೂ ಹಾಲುನೊರೆಯಂತೆ ಹಲವು ಕವಲುಗಳಲ್ಲಿ ಪ್ರಪಾತಕ್ಕೆ ರಭಸದಿಂದ ಭೋರ್ಗರೆಯುತ್ತಾ ಬೀಳುವ ಅವರ್ಣನಾತೀತ ಅನುಭವವನ್ನು ಕಣ್ತುಂಬಿಕೊಳ್ಳಬೇಕಾದರೆ ಶಿವನಸಮುದ್ರಕ್ಕೇ ಬರಬೇಕು. ಶಿವನ ಸಮುದ್ರ ರಮಣೀಯ ಪ್ರಕೃತಿ ಸಿರಿಯ ಪ್ರವಾಸಿ ತಾಣವಷ್ಟೇ ಅಲ್ಲ ಪವಿತ್ರ ಪುಣ್ಯ ಕ್ಷೇತ್ರವೂ ಹೌದು. ಈಶ್ವರನ ಶಿರದಿಂದ ಗಂಗೆ ಧುಮ್ಮಿಕ್ಕುವಂತೆ ಕಾವೇರಿ ಇಲ್ಲಿ ಧುಮ್ಮಿಕಿ ವಿಶಾಲ ಹರವು ಪಡೆದು ಸಮುದ್ರದೋಪಾದಿಯಲ್ಲಿ ಹರಿವ ಕಾರಣ ಇದಕ್ಕೆ ಶಿವನಸಮುದ್ರ ಎಂದೇ ಹೆಸರು ಬಂದಿದೆ. ಇಲ್ಲಿ ಶ್ರೀ ರಂಗನಾಥಸ್ವಾಮಿ, ಸೋಮೇಶ್ವರ, ವೀರಭದ್ರರ ಪುರಾತನ ದೇವಾಲಯಗಳಿವೆ. ಕಾವೇರಿ ನದಿ ದಂಡೆಯ ಮೇಲಿರುವ ಮೂರು ರಂಗನಾಥಸ್ವಾಮಿ ದೇವಾಲಯಗಳ ಪೈಕಿ ಇದು ಎರಡನೆಯದಾಗಿದ್ದು, ಮಧ್ಯರಂಗ ಎಂದು ಖ್ಯಾತವಾಗಿದೆ. ಮೊದಲ ರಂಗನಾಥನ ಗುಡಿ ಶ್ರೀರಂಗಪಟ್ಟಣದಲ್ಲಿ ಇದನ್ನು ಆದಿರಂಗ ಎನ್ನುತ್ತಾರೆ, ಇನ್ನು ತಮಿಳುನಾಡಿನಲ್ಲಿರುವ ಶ್ರೀರಂಗ ಅಂತ್ಯರಂಗ ಎಂದು ಕರೆಸಿಕೊಂಡಿದೆ. ಶಿವನಸಮುದ್ರದ ರಂಗನಾಥ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ. ಇಲ್ಲಿ ಮಲಗಿರುವ ಭಂಗಿಯಲ್ಲಿರುವ ಎರಡೂವರೆ ಮೀಟರ್ ಉದ್ದದ ಸುಂದರ ಹಾಗೂ ನಯನ ಮನೋಹರ ರಂಗನಾಥಸ್ವಾಮಿ ವಿಗ್ರಹವಿದೆ. ಈ ರಂಗನಾಥ ತನ್ನ ಚಲುವಿನಿಂದ ಜಗನ್ಮೋಹನ ರಂಗನಾಥನೆಂದೂ ಖ್ಯಾತನಾಗಿದ್ದಾನೆ. ವಿಗ್ರಹದ ಪಾದದ ಬಳಿ ಕಾವೇರಮ್ಮನ ಚಿಕ್ಕ ವಿಗ್ರಹವಿದೆ. ರಂಗಧಾಮನಿಗೆ ಹಾಸಿಗೆಯಾಗಿರುವ ಆದಿಶೇಷನನ ವಿಗ್ರಹವೂ ಇದೆ. ರಾಮಾನುಜಾಚಾರ್ಯರ ಮೂರ್ತಿಯೂ ಇದೆ.
ಈ ತಾಣದಲ್ಲಿರುವ ಮತ್ತೊಂದು
ದೊಡ್ಡ ದೇವಾಲಯ ಸೋಮೇಶ್ವರನದು. ಇದು ಕೂಡ ಹೊಯ್ಸಳರ ಕಾಲದ್ದೇ. ಆರು ಮೂಲೆಗಳ
ಆಕಾರದಲ್ಲಿರುವ ಪೀಠದ ಮೇಲಿರುವ ದೇವಾಲಯದಲ್ಲಿ ಸೋಮೇಶ್ವರ,
ಗಣೇಶ ಮತ್ತು ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಜಗತ್ತಿಗೆ ಹಗಲು ರಾತ್ರಿಯಲ್ಲಿ ಬೆಳಕು ನೀಡುತ್ತಾ ಜಗದ ಕಣ್ಣಾಗಿರುವ ಸೂರ್ಯಚಂದ್ರರ
ಮೂರ್ತಿಗಳೂ ಇವೆ.
ಶತಮಾನ ಸಂಭ್ರಮ: ಶಿವನಸಮುದ್ರ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲ, ಇಡೀ ದೇಶವನ್ನೇ ಕತ್ತಲಿಂದ ಬೆಳಕಿಗೆ ತಂದ ಸ್ಮರಣೀಯ ತಾಣ. ಕತ್ತಲಲ್ಲಿದ್ದ ಕರುನಾಡಿಗೆ ಬೆಳಕು ನೀಡಿದ ಕೀರ್ತಿಯೂ ಶಿವನಸಮುದ್ರದ್ದು. ತನ್ನದೇ ಆದ ಸಮರ್ಥ ಶಕ್ತಿಯಿಂದ ಇಲ್ಲಿ ಕಾವೇರಿ 419ಅಡಿ ಕಂದಕಕ್ಕೆ ಧುಮ್ಮಿಕ್ಕುತ್ತಾಳೆ. ತಾಯಿ ಕಾವೇರಿಯ ಈ ಭೋರ್ಗರೆತ ಕಂಡ ಮೈಸೂರು ರಾಜ್ಯದ ಅಂದಿನ ಉಪಮುಖ್ಯ ಎಂಜಿನಿಯರ್ ಮೇಜರ್ ಎ.ಜೆ.ಡಿ. ಲಾಬಿನೀರ್ 1896-99ರ ಅವಧಿಯಲ್ಲಿ ಇಲ್ಲಿ ಜಲವಿದ್ಯುತ್ ಉತ್ಪಾದನೆಗಾಗಿ ಯೋಜನೆ ರೂಪಿಸಿದರು.
ಕೋಲಾರ ಚಿನ್ನದ ಗಣಿಗೆ 35 ಕಿ.ವ್ಯಾ. ವಿದ್ಯುತ್ ಒದಗಿಸಿ ಗಂಧದ ನಾಡನ್ನು ಚಿನ್ನದ ಬೀಡಾಗಿ ಮಾಡಿದ ಹೆಮ್ಮೆಯೂ ಈ ತಾಣದ್ದು. ಈಗ ಈ ವಿದ್ಯುತ್‌ದಾಗಾರ ಹೊಸ ಉಪಕರಣಗಳಿಂದ ಆಧುನೀಕರಣಗೊಂಡಿದ್ದು, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು (1೦ ಘಟಕ ಸೇರಿ) ವಾರ್ಷಿಕ 180 ದಶಲಕ್ಷ ಯುನಿಟ್‌ಗಳಿಗೆ ಏರಿಸಿಕೊಂಡಿದೆ.
ಪ್ರವಾಸ ಮಾಹಿತಿ: ಈ ಸುಂದರ ಜಲಪಾತ ಬೆಂಗಳೂರಿನಿಂದ 120 ಕಿಲೋ ಮೀಟರ್ ದೂರದಲ್ಲಿದೆ. ಮಂಡ್ಯದಿಂದ ಇಲ್ಲಿಗೆ ಕೇವಲ 60 ಕೀಲೋ ಮೀಟರ್ ಮಾತ್ರ. ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in ಸಂಪರ್ಕಿಸಬಹುದು. | |||