|
ಶೃಂಗಗಿರಿ ಶ್ರೀಷಣ್ಮುಖ ದೇವಸ್ಥಾನ
ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ದೇವಾಲಯದ ಗೋಪುರದಲ್ಲೇ ಷಣ್ಮುಖನ ಆರುತಲೆಗಳ ಗಾರೆಯ ಶಿಲ್ಪವಿದೆ. ಆರೂ ಮುಖಗಳು ಒಂದೇ ರೂಪ, ಆಕಾರ ಅಳತೆಯನ್ನು ಹೊಂದಿದ್ದು, ಮೇಲ್ಭಾಗದಲ್ಲಿ ವರ್ಣರಂಜಿತವಾದ ದೀಪಾಲಂಕಾರ ಮಾಡುವ ಕಾರ್ಯ ನಡೆದಿದೆ. ದೂರದವರೆಗೆ ಗೋಚರಿಸುವ ಈ ಷಣ್ಮುಖ ಗೋಪುರ ನೋಡುಗರ ಮನಸೆಳೆಯುತ್ತದೆ. ದೇವಾಲಯದ ಮೆಟ್ಟಿಲೇರುತ್ತಿದ್ದಂತೆ ಮುಂಭಾಗದಲ್ಲಿಯೇ ನಾಲ್ಕು ದಿಕ್ಕಿಗೆ ಮುಖಮಾಡಿ ಶಿರದ ಮೇಲೆ ಮತ್ತೊಂದು ಗಜಶಿರ ಹೊಂದಿರುವ ಪಂಚಮುಖಿ ಗಣಪತಿಯ ಮಂದಿರವಿದೆ. ಎಂಟುಕೈಗಳ ಗಣಪ ಇಲ್ಲಿ ಸಿಂಹವಾಹನನಾಗಿ ವಿಶೇಷ ಆಕರ್ಷಣೆಯನ್ನು ಹೊಂದಿದ್ದಾನೆ. ಗಣಪನ ಎದುರು ಬಲಿ ಪೀಠ ಹಾಗೂ ಇಲಿಯ ವಿಗ್ರಹಗಳೂ ಇವೆ.
ಇಲ್ಲಿ ಶೈವಾಗಮದ ರೀತ್ಯ ಪೂಜೆ ನಡೆಯುತ್ತದೆ. ಸುಬ್ರಹ್ಮಣ್ಯ ಷಷ್ಟಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ಈ ಸುಂದರವಾದ ದೇವಾಲಯದ ಕಲ್ಪನೆ, ಸೃಷ್ಟಿ ಹಾಗೂ ಕಾರ್ಯರೂಪಕ್ಕೆ ತಂದ ಹಿರಿಮೆ ಡಾ. ಆರ್. ಅರುಣಾಚಲಂ ಅವರಿಗೆ ಸಲ್ಲುತ್ತದೆ. ಮಾರ್ಗ: ರಾಜರಾಜೇಶ್ವರಿ ದೇವಾಲಯದಿಂದ ಅನತಿ ದೂರದಲ್ಲೇ ಈ ದೇವಾಲಯವಿದೆ. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ, ಎಡಕ್ಕೆ ತಿರುಗಿದರೆ ಸುಬ್ರಹ್ಮಣ್ಯ ದೇವಾಲಯ ಕಾಣಿಸುತ್ತದೆ. | |||