|
ರಾಜೇಶ್ವರಿ ನಗರ ನಿಮಿಷಾಂಬಾ ದೇವಾಲಯ
ಮುಖ್ಯರಸ್ತೆಯಲ್ಲಿಯೇ ಕೆಂಪು ಲ್ಯಾಟರೇಟ್ ಶಿಲೆಯಿಂದ ನಿರ್ಮಿಸಲಾಗಿರುವ ಹೆಂಚ್ಚಿನ ಛಾವಣಿಯ ಈ ದೇವಾಲಯ ದಕ್ಷಿಣ ಕನ್ನಡ ಮತ್ತು ಕೇರಳ ಭಾಗದಲ್ಲಿರುವ ದೇವಾಲಯಗಳನ್ನು ನೆನಪಿಗೆ ತರುತ್ತದೆ. ಮೆಟ್ಟಿಲುಗಳನ್ನೇರುತ್ತಿದ್ದಂತೆಯೇ ದೇವಾಲಯದ ಎದುರು ಇರುವ ಗರುಡಗಂಬ, ಅದರ ಪಕ್ಕದಲ್ಲೇ ಇರುವ ಸಿಂಹದ ವಿಗ್ರಹ ಹಾಗೂ ಬಲಿಪೀಠ ಮನಸೆಳೆಯುತ್ತದೆ. 2006ರ ಮೇ 7ರಂದು ಪ್ರತಿಷ್ಠಾಪಿಸಲಾದ, ದೇವಾಲಯದ ಪ್ರವೇಶಕ್ಕೆ ಮುನ್ನ ಎಡ ಮತ್ತು ಬಲ ಭಾಗದಲ್ಲಿ ಶಿವಭಾಸ್ಕರ ಮತ್ತು ಕಾಲಭೈರವೇಶ್ವರನ ಪುಟ್ಟ ಗುಡಿಗಳಿವೆ. ಒಳಗಿನ ಪ್ರಾಕಾರದಲ್ಲಿ ಬೃಹದಾಕಾರದ ಮರದ ತೊಲೆಗಳಿಂದ ಕೂಡಿದ ಮೊಗಸಾಲೆಯಿದೆ. ಎದುರು ಇರುವ ಗರ್ಭಗುಡಿಯಲ್ಲಿ ನಿಮಿಷಾಂಬಾ ದೇವಿಯ ಸುಂದರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ನೈಸರ್ಗಿಕವಾದ ದೇಸೀ ಬಣ್ಣ, ದೇವಾಲಯದ ಒಳಗೆ ನೇರವಾಗಿ ಸೂರ್ಯನ ಬಿಸಿಲು ಬೀಳುವಂತಿರುವ ಮಾಡಲಾಗಿರುವ ವಿನ್ಯಾಸ ಕಣ್ಮನ ಸೂರೆಗೊಳ್ಳುತ್ತದೆ. ಶಾರದಾದೇವಿಯ ಗುಡಿಯ ಮುಂದೆ ಇರುವ ಗೂಡಿನಲ್ಲಿ ಮುಂಡಿನಿ ಮತ್ತು ಆಂಜನೇಯನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಎಡಭಾಗದಲ್ಲಿ ಅಷ್ಟಕೋನ ಸಮತಲಾಕೃತಿಯಲ್ಲಿ ಯಜ್ಞಶಾಲೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ನಿತ್ಯ ಬೆಳಗ್ಗೆ ಚಂಡಿಕಾ ಹೋಮ ನಡೆಯುತ್ತದೆ. ಹೀಗಾಗೇ ನಿತ್ಯ ಚಂಡಿಕಾಹೋಮ ಸ್ವೀಕೃತೆ ಎಂದು ನಿಮಿಷಾಂಬಾದೇವಿಗೆ ಕರೆಯುತ್ತಾರೆ. ದೇವಾಲಯದ ಕೆಳಗೆ ಧ್ಯಾನಮಂದಿರವಿದೆ. ಅಲ್ಲಿ ದಕ್ಷಿಣಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನಿರ್ಮಲವಾದ ಪ್ರಶಾಂತ ವಾತಾವರಣದಲ್ಲಿ ಧ್ಯಾನ ಮಾಡಿದವರಿಗೆ ನವಚೈತನ್ಯ ಮೂಡುತ್ತದೆ. ಮನಸ್ಸು, ದೇಹ, ಹೃದಯ ಹಗುರವಾದಂತೆ ಭಾಸವಾಗುತ್ತದೆ.
ಋತ್ವಿಜರು ಈ ಯಾಗ ಮಾಡಲು ಸ್ಥಳ ಶೋದನೆಗೆ ತೊಡಗಿದಾಗ ಶ್ರೀರಂಗಪಟ್ಟಣ ಬಳಿಯ ಗಂಜಾಂ ಸಮೀಪದ ಕಾವೇರಿ ತಟವನ್ನು ಆಯ್ಕೆ ಮಾಡಿದರು. ಯಾಗ ಆರಂಭವಾದಾಗ ಇಲ್ಲಿದ್ದ ಸುಮಂಡಲ ಮತ್ತು ಜಾನು ಎಂಬ ಇಬ್ಬರು ರಕ್ಕಸರು ಯಾಗಕ್ಕೆ ಪದೇ ಪದೇ ಅಡ್ಡಿಪಡಿಸಲಾರಂಭಿಸಿದರು. ದಾರಿ ಕಾಣದೆ ಋಷಿ,ಮುನಿಗಳು ದೇವಿ ಆದಿ ಪರಾಶಕ್ತಿಯ ಮೊರೆಹೋದರು. ಆಗ ತಾಯಿ ನಿಮಿಷಮಾತ್ರದಲ್ಲಿ ಹೋಮಕುಂಡದಿಂದ ಆವಿರ್ಭವಿಸಿ ದುಷ್ಟ ಸಂಹಾರ ಮಾಡಿದಳು. ತಾನು ಇಲ್ಲಿಯೇ ನೆಲೆಸಿ ಬೇಡಿ ಬರುವ ಭಕ್ತರ ಸಂಕಷ್ಟವನ್ನು ನಿಮಿಷ ಮಾತ್ರದಲ್ಲಿ ಬಗೆಹರಿಸುವೆ ಎಂದು ಹೇಳಿದಳಂತೆ. ಹೀಗಾಗೇ ತಾಯಿಗೆ ನಿಮಿಷಾಂಬಾ ಎಂದು ಕರೆಯಲಾಗುತ್ತದೆ.. ಬೆಂಗಳೂರಿನಲ್ಲಿರುವ ಈ ದೇವಾಲಯ ನಿಮಿಷಾಂಬಾದೇವಿ ಭಕ್ತಾದಿಗಳ ಟ್ರಸ್ಟ್ (ರಿ) ಆಡಳಿತಕ್ಕೊಳಪಟ್ಟಿದೆ. ಈ ಟ್ರಸ್ಟ್ ನ ಗೌರವಾಧ್ಯಕ್ಷರು ವಿಶ್ವೇಶತೀರ್ಥ ಶ್ರೀಪಾಂದಗಳು. | |||