|
ಮುಖಪುಟ
/ನಮ್ಮ
ದೇವಾಲಯಗಳು ಕರಾವಳಿ ತಟದ ಪುಣ್ಯಕ್ಷೇತ್ರ ಮುರ್ಡೇಶ್ವರ * ಟಿ.ಎಂ.ಸತೀಶ್
ಅತ್ತ ಬೆಟ್ಟಗಳ ಸಾಲು ಇತ್ತ ಅರಬ್ಬೀ ಸಮುದ್ರದಿಂದ ಸುತ್ತುವರಿದಿರುವ ಈ ಕ್ಷೇತ್ರದ ಸೊಬಗು ವರ್ಣಿಸುವುದು ಕಷ್ಟಸಾಧ್ಯವೇ ಸರಿ. ವಿವಿಧ ಧರ್ಮಗಳ ಸಂಗಮಕ್ಷೇತ್ರವಾಗಿ ಭಾವೈಕ್ಯತೆಯ ತಾಣವಾಗಿರುವ ಮುರ್ಡೇಶ್ವರದಲ್ಲಿ ಬಸದಿಗಳೂ ಇವೆ. ಸಮುದ್ರ ದಂಡೆಯ ಕುಂದುಗಿರಿ ಬೆಟ್ಟದ ಮೇಲೆ ಮುರ್ಡೇಶ್ವರನ ದೇವಾಲಯವಿದೆ. ಇಲ್ಲಿರುವ ಶಿವಲಿಂಗ ಶಿವನಾತ್ಮಲಿಂಗದ ಒಂದು ಭಾಗ ಎಂಬುದು ಜನರ ನಂಬಿಕೆ.
ರಾವಣೇಶ್ವರ ತನ್ನ ತಾಯಿಯ ಕೋರಿಕೆ ಈಡೇರಿಸಲು ತಪವನ್ನಾಚರಿಸಿ ಆತ್ಮಲಿಂಗವನ್ನು ವರವಾಗಿ ಪಡೆದು ಬರುವಾಗ, ವಟುರೂಪಿ ಗಣಪ, ಆತ್ಮಲಿಂಗವನ್ನು ಗೋಕರ್ಣದಲ್ಲಿ ಭೂಸ್ಪರ್ಶ ಮಾಡಿಸಿದಾಗ, ಲಿಂಗ ಭೂತಳಕ್ಕೆ ಜಾರುವುದನ್ನು ಕಂಡ ರಾಣೇಶ್ವರ ಪಾತಾಳಕ್ಕೆ ಇಳಿಯುತ್ತಿರುವ ಲಿಂಗವನ್ನು ಬಲವಾಗಿ ಹಿಡಿದಾಗ ಲಿಂಗದ ಒಂದು ಭಾಗ ಮುರುಟಿಕೊಂಡು ತುಂಡಾಯಿತು. ಕೋಪದಿಂದ ರಾವಣ ಅದನ್ನು ಎಸೆದಾಗ ಅದು ಇಲ್ಲಿ ಬಂದು ಬಿತ್ತೆಂದೂ, ಇದುವೇ ಮುರ್ಡೇಶ್ವರ ಎಂಬ ಹೆಸರಿನಿಂದ ಪಾಂಡವರಿಂದ ಪೂಜಿಸಲ್ಪಟ್ಟಿತೆಂಬ ಕಥೆ ಇದೆ. ಸ್ಕಾಂದಪುರಾಣದಲ್ಲಿ ಸಹ ಮುರುಡೇಶ್ವರದ ಪ್ರಸ್ತಾಪವಿದೆ. ಗಣಪತಿ ಶಿವನ ಆತ್ಮಲಿಂಗವನ್ನು ಭೂಸ್ಮರ್ಶ ಮಾಡಿದಾಗ, ರಾವಣ ಅದನ್ನು ಕೀಳಲು ಯತ್ನಿಸಿ ಲಿಂಗಕ್ಕೆ ಕಟ್ಟಿದ ದೋರ ಅಂದರೆ ವಸ್ತ್ರ ಹಾಗೂ ಅಂಟಿಕೊಂಡ ಗುಣ ಕಿತ್ತುಬಂತು. ಕೋಪದಿಂದ ರಾವಣ ದೋರಕ ಗುಣವಸ್ತ್ರಗಳನ್ನು ದಕ್ಷಿಣಕ್ಕೊಂದು, ಉತ್ತರಕ್ಕೊಂದು ಎಸೆದ ದೋರಕ ನಾಗಶೃಂಗ ಪರ್ವತದ ಬಳಿ ಬಿದ್ದು ಧಾರೇಶ್ವರ ಎಂದು ಪ್ರಸಿದ್ಧವಾದರೆ, ಗುಣ ಬಿದ್ದ ಜಾಗ ಗುಣವಂತೆಯಾಯ್ತು. ವಸ್ತ್ರ ಬಿದ್ದ ಸ್ಥಳ ಮುರುಡೇಶ್ವರವಾದರೆ ಸಂಪುಟ ಬಿದ್ದ ಸ್ಥಳ ಸಜ್ಜೇಶ್ವರವಾಯಿತೆಂದು ಹೇಳಲಾಗುತ್ತದೆ
ಈ ಪುಣ್ಯ ಕ್ಷೇತ್ರದಲ್ಲಿ ಕಾಕತೀರ್ಥ, ಭೀಮತೀರ್ಥ, ಜಟಾಯು ತೀರ್ಥ, ಕುಂಭತೀರ್ಥ ಎಂಬ ಚಿಕ್ಕ ತೊರೆಗಳೂ ಹರಿಯುತ್ತವೆ. ಸ್ವಲ್ಪ ದೂರದಲ್ಲಿಯೇ ವಿಶಾಲ ಪುಷ್ಕರಿಣಿಯಿದ್ದು, ಭಕ್ತರು ಇಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಈ ಕಲ್ಯಾಣಿಯಲ್ಲಿ ವರ್ಷಕ್ಕೆರಡು ಬಾರಿ ತೆಪ್ಪೋತ್ಸವ ಜರುಗುತ್ತದೆ. ಎನ್.ಆರ್. ಶೆಟ್ಟಿ ಅವರು ಈಗ ಈ ಪ್ರಸಿದ್ಧ ಪುಣ್ಯಕ್ಷೇತ್ರದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಇಲ್ಲಿ ಇತ್ತೀಚೆಗೆ 250 ಅಡಿ ಬೃಹತ್ ಗೋಪುರ ನಿರ್ಮಿಸಲಾಗಿದೆ. ಜೊತೆಗೆ 150 ಅಡಿ ಎತ್ತರದ ಸುಂದರ ಶಿವನ ಮೂರ್ತಿಯನ್ನೂ ಇಲ್ಲಿ ನಿರ್ಮಿಸಲಾಗಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||