|
ಮುಳಬಾಗಲು ಆಂಜನೇಯಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ಮುಳಬಾಗಿನಲ್ಲಿನ ಪ್ರಾಚೀನವಾದ ಆಂಜನೆಯನ ದೇವಾಲಯವಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಆಂಜನೇಯನ ದೇವಾಲಯ ಸುಮಾರು 5 ಸಾವಿರ ವರ್ಷಗಳಷ್ಟು ಪುರಾತನವಾದುದೆಂದು ಹೇಳುತ್ತಾರೆ. ದೇವಾಲಯ ವಿಶಾಲವಾಗಿದ್ದು, ವಿಜಯನಗರ ಶೈಲಿಯ ಪ್ರವೇಶದ್ವಾರವಿದೆ. ದ್ವಾರ ಪ್ರವೇಶಿಸಿ ಒಳ ಹೋದರೆ, ಪುರಾತನವಾದ ಆಂಜನೇಯಸ್ವಾಮಿಯ ದೇವಾಲಯ ಕಾಣುತ್ತದೆ. ಸುಮಾರು 10 ಅಡಿ ಎತ್ತರವಿರುವ ಆಂಜನೇಯನನ್ನು ದ್ವಾಪರಯುಗದಲ್ಲಿ ಅರ್ಜುನ ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ನಿತ್ಯವೂ ಆಂಜನೇಯನಿಗೆ ತಾಳೆ ಹೂವಿನ ಪೂಜೆ ನಡೆಯುವುದು ಇಲ್ಲಿನ ವಿಶೇಷ. ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿರುವ ಭಿತ್ತಿಯಲ್ಲಿ ಹಲ್ಲಿಯ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ಅದಕ್ಕೆ ಈ ಹಲ್ಲಿಯನ್ನು ಮುಟ್ಟಿ ನಮಸ್ಕರಿಸಿದರೆ ಹಲ್ಲಿ ಬಿದ್ದ ಶಕುನ ದೋಷ ನಾಷವಾಗುತ್ತದೆ ಎಂಬುದು ನಂಬಿಕೆ. ಅಷ್ಟೇಕೆ ಹಲ್ಲಿ ಬಿದ್ದವರು ಈ ಹಲ್ಲಿ ಮುಟ್ಟಿ ಬಂದವರ ಕಾಲಿಗೆ ಬಿದ್ದು ನಮಸ್ಕರಿಸಿದರೂ ಸಾಕು ದೋಷ ಪರಿಹಾರವಾಗುತ್ತದೆ ಎನ್ನುತ್ತಾರೆ ಹಿರಿಯರು. ದೇವಾಲಯದ ಗರ್ಭಗೃಹದಲ್ಲಿ ಪ್ರಾಣದೇವರ ಸುಂದರವಾದ ಮೂರ್ತಿಯಿದೆ. ವೀಳೆದೆಲೆಯ ಅಲಂಕಾರದಲ್ಲಿ ದೇವರ ಮೂರ್ತಿಯ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಪಕ್ಕದಲ್ಲಿಯೇ ಸೀತಾರಾಮರ ದೇವಾಲಯವೂ ಇದೆ.
| |||