ಮುಖಪುಟ /ನಮ್ಮ ದೇವಾಲಯಗಳು  

ಮಲ್ಲೇಶ್ವರದ ಶ್ರೀಮಹಾಗಣಪತಿ

Malleswara Mahaganapati, ಮಲ್ಲೇಶ್ವರ ಮಹಾಗಣಪತಿ, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಬೆಂಗಳೂರು ದೇವಾಲಯಗಳು, temples of Bangalore, ಚಿತ್ರಕೃಪೆ  ಸರ್ಕಾರದ ವೆಬ್ ತಾಣಬೆಂಗಳೂರಿನ ಮಲ್ಲೇಶ್ವರ ಅನೇಕ ದಿವ್ಯ ದೇವಾಲಯಗಳನ್ನು ಒಳಗೊಂಡ ಬಡಾವಣೆ. ಮಲ್ಲೇಶ್ವರದ 9ನೇ ಕ್ರಾಸ್ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀಮಹಾಗಣಪತಿ ದೇವಾಲಯ ಮಹಿಮಾನ್ವಿತವಾದ ದೇವಾಲಯ. ಹೀಗಾಗಿ ಇಲ್ಲಿರುವ ಗಣಪನಿಗೆ ಭಕ್ತರು ಇಷ್ಟಾರ್ಥಸಿದ್ಧ ಮಹಾಗಣಪತಿ ಎಂದು ಕರೆಯುತ್ತಾರೆ.

80 ವರ್ಷಗಳ ಹಿಂದೆ ಗಿರಿಯಪ್ಪ ಗೌಡರ ಮುಖಂಡತ್ವದಲ್ಲಿ ಪುಟ್ಟದಾಗಿ ನಿರ್ಮಾಣವಾದ ಈ ದೇವಾಲಯ ಇಂದು ಬೃಹತ್ ಭವ್ಯ ದೇವಾಲಯವಾಗಿ ಮಾರ್ಪಟ್ಟಿದೆ. ಒಮ್ಮೆ ಗಿರಿಯಪ್ಪಗೌಡರಿಗೆ ದೇವರೊಂದು ಸಿಕ್ಕಿದಂತೆ, ಅವರು ದೇವಾಲಯ ನಿರ್ಮಿಸಿದಂತೆ ಕನಸು ಬಿದ್ದಿದಂತೆ, ಇದನ್ನು ಸ್ನೇಹಿತರ ಬಳಿ ಹೇಳಿಕೊಂಡಾಗ ಹಲವರು ನಕ್ಕರು. ಆದರೆ, ಕೆಲವು ತಿಂಗಳುಗಳ ಬಳಿಕ ಅವರಿಗೆ ನೆಲಮಂಗಲದ ಬಳಿ ಕೆರೆಯಲ್ಲಿ ಗಣಪತಿ ವಿಗ್ರಹ ದೊರಕಿತಂತೆ. ಆಗ ಗೌಡರು ಬೆಂಗಳೂರಿನ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಪುಟ್ಟ ಗುಡ್ಡದ ಮೇಲೆ ಈ ವಿಗ್ರಹ ಸ್ಥಾಪಿಸಿ ಗುಡಿ ಕಟ್ಟಿಸಿದರು. 1930ನೇ ಇಸವಿ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದ ಶುಕ್ರವಾರ ಇಲ್ಲಿ ದೇವರ ಪ್ರತಿಷ್ಠಾಪನೆ ನೆರವೇರಿತು 1964ರಲ್ಲಿ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಇಲ್ಲಿ ವಿಮಾನ ಗೋಪುರದ ಪೂಜೆ ನೆರವೇರಿತು ಎಂದು ಸ್ಥಳೀಯರು ಹೇಳುತ್ತಾರೆ.

ಈ ಗಣಪನಿಗೆ ಹರಕೆ ಹೊತ್ತರೆ ಬೇಡಿದ ವರ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ. ಬೆಂಗಳೂರು ಉತ್ತರ ಭಾಗದಲ್ಲಿ ಸಂಕಷ್ಟಹರ ಚತುರ್ಥಿಯ ಪೂಜೆಯನ್ನು ಆರಂಭಿಸಿದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಯೂ ಈ ದೇವಾಲಯಕ್ಕಿದೆ.

ನಿತ್ಯವೂ ಇಲ್ಲಿ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರತಿ ತಿಂಗಳು ಹುಣ್ಣಿಮೆಯ ದಿನ ಶ್ರೀಸತ್ಯನಾರಾಯಣ ಪೂಜೆ ಹಾಗೂ ಚೌತಿಯ ದಿನ ಸಂಕಷ್ಟಹರ ಗಣಪತಿ ವ್ರತ ಜರುಗುತ್ತದೆ. ಅಂದು ವಿಶೇಷ ಅಭಿಷೇಕ, ಅರ್ಚನೆ ಹಾಗೂ ಅಲಂಕಾರಗಳು ನಡೆಯುತ್ತವೆ. ಪ್ರತಿ ನಿತ್ಯ ಇಲ್ಲಿ ಗಣಪನಿಗೆ ಹರಕೆ ಹೊತ್ತ ಭಕ್ತರು ವಡೆ ಸರ, ಕೋಡಬಳೆ ಸರ, ಕಡುಬಿನ ಮಾಲೆ ಹಾಕಿಸುತ್ತಾರೆ. ಇಷ್ಟಾರ್ಥ ಈಡೇರಿದ ಹಲವು ಭಕ್ತರು ಇಲ್ಲಿ ಮೆಟ್ಟಲಿಗೊಂದು ಕಾಯಿಯಂತೆ ಈಡುಗಾಯಿ ಒಡೆಯುತ್ತಾರೆ.

ದೇವಾಲಯದ ಪ್ರಕಾರದಲ್ಲಿ ಆಂಜನೇಯಸ್ವಾಮಿ, ನವಗ್ರಹ, ಶ್ರೀ ಸತ್ಯನಾರಾಯಣ, ಪಂಚಲಿಂಗ ಹಾಗೂ ತಾಯಿ ಬನಶಂಕರಿ ದೇವರ ಗುಡಿಗಳೂ ಇವೆ. ಗಿರಿಯಪ್ಪಗೌಡರು ದೇವಾಲಯ ನಿರ್ಮಿಸಿದ ಬಳಿಕ ಶ್ರೀ ನಟೇಶ್ ಅಯ್ಯರ್ ಅವರು ಸನ್ಮಾರ್ಗ ಪ್ರವರ್ತಕ ಸಂಘವನ್ನು ಸ್ಥಾಪಿಸಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದರು. 1980ರಿಂದ ದೇವಾಲಯ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

ಮುಖಪುಟ /ನಮ್ಮ ದೇವಾಲಯಗಳು

Mahendra Diamonda and jewellers, Malleswaram,