ಮುಖಪುಟ /ನಮ್ಮ ದೇವಾಲಯಗಳು

ಮಳಲಿಯ ಮಲ್ಲೇಶ್ವರ ದೇವಾಲಯ

*ಟಿ.ಎಂ.ಸತೀಶ್

ಕಾಫಿಯ ನಾಡು ಸಕಲೇಶಪುರದಿಂದ ಕೇವಲ ೨ ಕಿಲೋ ಮೀಟರ್ ದೂರದಲ್ಲಿರುವ ಊರು ಮಳಲಿ. ಈ ಊರಿನಲ್ಲಿ ಧರ್ಮ ಸಮನ್ವಯದಿಂದ ಕೂಡಿದ ಅತ್ಯಂತ ಅಪರೂಪದ ಹಾಗೂ ಹಲವು ವಿಶೇಷಗಳಿಂದ ಕೂಡಿದ ದೇವಾಲಯವಿದೆ.

ಸಾಮಾನ್ಯವಾಗಿ ಹೊಯ್ಸಳರು ದೇವಾಲಯ ನಿರ್ಮಿಸಿರುವ ಬಹುತೇಕ ಎಲ್ಲ ಊರುಗಳಲ್ಲೂ ಪ್ರತ್ಯೇಕವಾದ ವಿಷ್ಣು ಹಾಗೂ ಶಿವದೇವಾಲಯಗಳನ್ನು ಕಾಣಬಹುದು. ಈ ಮೂಲಕ ವಿಷ್ಣು -ಶಿವನಲ್ಲಿ ಭೇದವಿಲ್ಲ ಎಂದು ಸಾರಿದ ಹೊಯ್ಸಳ ದೊರೆಗಳು ರಾಜ್ಯದ ಹಲವು ಪುಣ್ಯಕ್ಷೇತ್ರಗಳನ್ನು ಹರಿಹರ ಕ್ಷೇತ್ರವಾಗಿ ಪರಿವರ್ತಿಸಿದ್ದಾರೆ.

ಹೊಯ್ಸಳರ ಕಾಲದಲ್ಲಿ ಹಲವು ಜಿನ ದೇವಾಲಯಗಳೂ ನಿರ್ಮಾಣಗೊಂಡಿವೆ.

ಮಳಲಿಯಲ್ಲಿ ಸಹ ೧೩ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂದು ತಜ್ಞರು ಅಭಿಪ್ರಾಯ ಪಡುವ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದ ಮಲ್ಲೇಶ್ವರ ಸ್ವಾಮಿ ದೇವಾಲಯವಿದೆ. ಧರ್ಮಸಮನ್ವಯತೆಯ ಸಂಕೇತವಾದ ಈ ದೇವಾಲಯ ಶೈವ, ವೈಷ್ಣವ ಹಾಗೂ ಜೈನ ಧರ್ಮದ ಸಂಗಮವಾಗಿತ್ತು.

ಹೆಚ್ಚೇನೂ ಕಲಾತ್ಮಕತೆಯ ಬಿತ್ತಿಗಳಿಲ್ಲದ ಆದರೆ ಗರ್ಭಗುಡಿಯ ಭುವನೇಶ್ವರಿ, ದ್ವಾರದ ಬಾಗಿಲವಾಡಗಳಲ್ಲಿ ಸುಂದರ ಕೆತ್ತನೆಗಳಿಂದ ಕೂಡಿತ್ತು. ಇತರ ಹೊಯ್ಸಳ ದೇವಾಲಯಗಳಂತೆ ನಕ್ಷತ್ರಾಕಾರದ ಜಗಲಿ, ಮುಖಮಂಟಪ ಇರಲಿಲ್ಲ. ಈ ದೇವಾಲಯ ಸಂಪೂರ್ಣ ಶಿಥಿಲವಾಗಿ ಬೀಳುವ ಸ್ಥಿತಿಯಲ್ಲಿತ್ತು. ಕೆಲಭಾಗ ಬಿದ್ದೂ ಹೋಗಿತ್ತು. ದುಸ್ಥಿತಿಯಲ್ಲಿದ್ದ ದೇವಾಲಯದ ಸುತ್ತ ಗಿಡಗಂಟಿಗಳು ಬೆಳೆದು ಪ್ರವೇಶವೂ ದುರ್ಗಮವಾಗಿತ್ತು.

ಸ್ಥಳೀಯರ ಮನವಿಯ ಮೇರೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ , ರಾಜ್ಯ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಸಹಯೋಗದಲ್ಲಿ ದೇಗುಲದ ಜೀರ್ಣೋದ್ಧಾರವಾಗಿದ್ದು, ಹಳೆಯ ದೇವಾಲಯವಿದ್ದ ಜಾಗದಲ್ಲಿ ಹೊಸ ದೇವಾಲಯ ನಿರ್ಮಾಣವಾಗಿದೆ.

ಹಳೆಯ ಕಲ್ಲುಗಳನ್ನೂ ಬಳಸಿಕೊಂಡು ಈಗ ಹೊಸ ದೇವಾಲಯ ನಿರ್ಮಿಸಲಾಗಿದೆ. ಬಹಳ ಹಿಂದೆ ಇತ್ತೆಂದು ಹೇಳಲಾಗುತ್ತಿದ್ದ ಮುಖಮಂಟಪವೂ ಈಗ ತಲೆ ಎತ್ತಿದೆ. ದೇವಾಲಯಕ್ಕೆ ಸುಂದರ ಗೋಪುರ ನಿರ್ಮಿಸಲಾಗಿದೆ.  

ಮುಖಪುಟ /ನಮ್ಮ ದೇವಾಲಯಗಳು