|
ಮುಖಪುಟ
/ನಮ್ಮ
ದೇವಾಲಯಗಳು ಕುಮಾರಪಾರ್ಕ್ ಶ್ರೀ ಮಹಾಲಕ್ಷ್ಮೀ ಮಂದಿರ
ತಾರಣ ನಾಮ ಸಂವತ್ಸರದ ಮಾರ್ಗಶಿರ ಮಾಸ ಶುಕ್ಲಪಕ್ಷ ತ್ರಯೋದಶಿಯ ಮಂಗಳವಾರ 28-11-1944ರಲ್ಲಿ ಶ್ರೀಮತಿ ನ್ಯಾಪತಿ ನರಸಮ್ಮ ಮಾಧವರಾವ್ ಈ ದೇವಾಲಯಕ್ಕೆ ಅಸ್ತಿಭಾರ ಹಾಕಿದರು ಎಂದು ದೇವಾಲಯದ ಭಿತ್ತಿಯಲ್ಲಿರುವ ಶಿಲಾಕೆತ್ತನೆ ಸಾರುತ್ತದೆ. ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದಲ್ಲಿ ಕಲ್ಲು ಕಂಬಗಳಿಂದ ಕಟ್ಟಿದ ಹಾಗೂ ಗೋಪುರಗಳಿರುವ ಪ್ರವೇಶ ದ್ವಾರವಿದೆ. ದೇವಾಲಯ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಹನುಮದ್ ಸಮೇತ ಸೀತಾರಾಮಲಕ್ಷ್ಮಣರ ಪುಟ್ಟ ಹಾಗೂ ಸುಂದರ ಪ್ರತಿಮೆಗಳು ಗಮನ ಸೆಳೆಯುತ್ತವೆ. ಇದಕ್ಕೇ ನೇರವಾಗಿ ಎದುರು ಇರುವ ಗುಡಿಯಲ್ಲಿ ನವಗ್ರಹಗಳ ಮಂದಿರವಿದೆ.
ಪಕ್ಕದಲ್ಲಿರುವ ಮತ್ತೊಂದು ಮಂದಿರದಲ್ಲಿ ಪಾಂಡುರಂಗನ ಪ್ರತಿಮೆಯಿದೆ. 1988ರಲ್ಲಿ ಇಲ್ಲಿ ಲಕ್ಷ್ಮೀಸಹಿತ ಪಾಂಡುರಂಗನನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಮತಿ ಗಿರಿಜಾ ಭಾಯಿ ಮಹೇಂದ್ರಕರ್ ಅವರು ದೇವಾಲಯದ ಸಂಸ್ಥಾಪಕರಾಗಿ ಈ ಮಂದಿರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ದೇವಾಲಯದಲ್ಲಿ ತಂತ್ರಸಾರೋಕ್ತ ಮಧ್ವ ಸಂಪ್ರದಾಯ ವೈಷ್ಣವ ಪದ್ಧತಿಯಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ಪೌರ್ಣಿಮೆಯಂದು ಇಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಂಕಷ್ಟಹರ ಗಣಪತಿ ಪೂಜೆ, ತಿಂಗಳಲ್ಲಿ ಎರಡು ದಿನ ಪ್ರದೋಷ, ಪ್ರತಿ ಏಕಾದಶಿಯಂದು ಪಾಂಡುರಂಗನಿಗೆ ವಿಶೇಷ ಪೂಜೆ ನಡೆಯುತ್ತದೆ.
ರಾಮನವಮಿ, ಕೃಷ್ಣಾಷ್ಟಮಿಗಳಲ್ಲಿ ಉತ್ಸವಗಳೂ ಜರುಗುತ್ತವೆ. ದೀಪಾವಳಿ ಅಮಾವಾಸ್ಯೆಯಂದು ಹಾಗೂ ವರಮಹಾಲಕ್ಷ್ಮೀ ಹಬ್ಬದ ದಿನ ಮಹಾಲಕ್ಷ್ಮಿಗೆ ಅಭಿಷೇಕ, ಅಲಂಕಾರಗಳನ್ನು ಮಾಡಲಾಗುತ್ತದೆ. ಶಿವರಾತ್ರಿಯ ದಿನ ನಾಲ್ಕೂ ಜಾವದಲ್ಲಿ ಪೂಜೆ, ಭಜನೆ, ಜಾಗರಣೆ ನಡೆಯುತ್ತದೆ. ದೇವಾಲಯದ ಎದುರು ಗರುಡಗಂಬವಿದ್ದು, ಆಂಜನೇಯನ ಪುಟ್ಟ ವಿಗ್ರಹವೂ ಇದೆ. ಮಾರ್ಗ : ಶೇಷಾದ್ರಿಪುರ ಕಾಲೇಜಿನ ಪಕ್ಕದ ರಸ್ತೆಯಲ್ಲಿ ಸಾಗಿದರೆ ಮಹಾಲಕ್ಷ್ಮೀ ಮಂದಿರ ಕಾಣುತ್ತದೆ. ಹೆಚ್ಚಿನ ಮಾಹಿತಿಗೆ ಶ್ರೀ ಗಂಗಾಧರ್ ಅವರನ್ನು ೯೭೪೨೩೪೩೬೯೮ ದೂರವಾಣಿ ಮೂಲಕ ಸಂಪರ್ಕಿಸಬಹುದು. | |||