ಮುಖಪುಟ /ನಮ್ಮದೇವಾಲಯಗಳು 

ಮದ್ದೂರು ವರದರಾಜಸ್ವಾಮಿ ದೇವಾಲಯ
 

*ಟಿ.ಎಂ.ಸತೀಶ್

Maddur temple, varadarajaswamy, netranarayana, Kanchi Varadaraja swamy, ಮದ್ದೂರು ವರದರಾಜಸ್ವಾಮಿ, ನೇತ್ರ ನಾರಾಯಣ.ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಣ್ಣದ ಬೊಂಬೆಗಳನಾಡು ಚನ್ನಪಟ್ಟಣದಿಂದ ಸಕ್ಕರೆ ನಾಡು ಮಂಡ್ಯಕ್ಕೆ ಹೋಗುವ ಮಾರ್ಗದಲ್ಲಿ ಇರುವ ಊರೇ ಮದ್ದೂರು.  ಅರ್ಜುನಪುರಿ, ಕದಂಬಕ್ಷೇತ್ರ ಎಂದು ಖ್ಯಾತವಾದ ಇಲ್ಲಿ ಬಹಳ ಸುಂದರವಾದ ವರದರಾಜಸ್ವಾಮಿಯ ದೇವಾಲಯವಿದೆ.

ಮದ್ದೂರಿನಲ್ಲಿರುವ ಮೂರು ಪ್ರಮುಖ ಹಾಗೂ ಪ್ರಾಚೀನ ದೇವಾಲಯಗಳ ಪೈಕಿ ವರದರಾಜಸ್ವಾಮಿ ದೇವಾಲಯವೂ ಒಂದು. ಹೆದ್ದಾರಿಯಿಂದ 1 ಕಿಲೋ ಮೀಟರ್ ದೂರದಲ್ಲಿರುವ ಈ ದೇವಾಲಯ ಉಗ್ರನರಸಿಂಹ ದೇವಾಲಯದ ಪಕ್ಕದಲ್ಲೇ ಇದೆ.

ಐತಿಹ್ಯದ ಪ್ರಕಾರ, ವರದರಾಜಸ್ವಾಮಿ ದೇವಾಲಯವನ್ನು ವಿಷ್ಣುವರ್ಧನ (ಬಿಟ್ಟಿದೇವ) ಕಟ್ಟಿಸಿದ. ಈ ದೇವಾಲಯವನ್ನು ಬಿಟ್ಟಿದೇವ ಕಟ್ಟಿಸಲು ಒಂದು ಕಾರಣವಿದೆ. ರಾಜನ ತಾಯಿಗೆ ದೃಷ್ಟಿದೋಷ ಉಂಟಾಗಿತ್ತು. ಆಕೆಗೆ ಎರಡೂ ಕಣ್ಣುಗಳು ಕಾಣಿಸುತ್ತಿರಲಿಲ್ಲವಂತೆ. ಆಗ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ. ರಾಮಾನುಜಾಚಾರ್ಯರು ಕಂಚಿಗೆ ಹೋಗಿ ಶ್ರೀವರದರಾಜಸ್ವಾಮಿಯ ದರ್ಶನ ಪಡೆದರೆ ದೋಷ ಪರಿಹಾರವಾಗುತ್ತದೆ ಎಂದು ಹೇಳಿದರಂತೆ.

ಆದರೆ, ವಯಸ್ಸಾದ ತಾಯಿಯನ್ನು ಅಷ್ಟು ದೂರ ಕರೆದೊಯ್ಯುವುದು ಕಷ್ಟ ಎಂದು ಬಿಟ್ಟಿದೇವ ಕಂಚಿಯಿಂದಲೇ ಕೆಲವು ಶಿಲ್ಪಿಗಳನ್ನು ಕರೆಸಿ, ಕಂಚಿಯಲ್ಲಿರುವ ವರದರಾಜಸ್ವಾಮಿಯ ಪ್ರತಿರೂಪದಂಥ ವಿಗ್ರಹ ಕಡೆಯುವಂತೆ ಹೇಳಿದನಂತೆ. ಅದೇ ವಿಗ್ರಹವನ್ನು ಮದ್ದೂರಿನಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದಾಗ ಆತನ ತಾಯಿಗೆ ದೃಷ್ಟಿದೋಷ ನಿವಾರಣೆ ಆಯಿತಂತೆ. ಹೀಗಾಗಿ ಈ ದೇವರಿಗೆ ನೇತ್ರ ನಾರಾಯಣ, ಕಂಚಿ ಕಣ್ವರದರಾಜಸ್ವಾಮಿ ಎಂಬ ಹೆಸರೂ ಇದೆ.

ಗರ್ಭಗ್ರಹದಲ್ಲಿ  ಮೂರೂವರೆ ಮೀಟರ್ ಎತ್ತರವಿರುವ ಕೃಷ್ಣಶಿಲೆಯ ಸುಂದರ ವರದರಾಜಸ್ವಾಮಿ ಮೂರ್ತಿಯಿದೆ. ಮೂರ್ತಿಯ ಮುಮ್ಮುಖ ಹಾಗೂ ಹಿಮ್ಮುಖಗಳ ಕೆತ್ತನೆ ಮನೋಹರವಾಗಿದೆ.  ಹಿಮ್ಮುಖದ ಕೆತ್ತನೆ ಹೆಚ್ಚು ಸುಂದರವಾಗಿರುವುದರಿಂದ ಎಲ್ಲ ದೇವರನ್ನೂ ಎದುರುಗಡೆ ನೋಡು. ವರದರಾಜಸ್ವಾಮಿಯನ್ನು ಮಾತ್ರ ಹಿಂದಿನಿಂದ ನೋಡು ಎನ್ನುವ ಜನಪ್ರಿಯ ಮಾತೂ ಮದ್ದೂರಿನಲ್ಲಿದೆ.

ನರಸಿಂಹಸ್ವಾಮಿ ದೇವಾಲಯದ ಪಕ್ಕದಲ್ಲಿ ಇರುವ ಈ ದೇವಾಲಯ ಕಾಡುಕಲ್ಲಿನ ಕಟ್ಟಡವಾಗಿದ್ದು ವಿಶೇಷವಾದ ಕೆತ್ತನೆಗಳು ಇಲ್ಲ. ದಪ್ಪ ದಪ್ಪ ಕಲ್ಲುಗಳಿಂದ ಕಟ್ಟಿರುವ ದೇವಾಲಯದಲ್ಲಿ ಗರ್ಭಗೃಹದಲ್ಲಿ ಮತ್ತು ಮುಂದಿನ ಪ್ರಾಕಾರಣದಲ್ಲಿ ಭುವನೇಶ್ವರಿಗಳಿದ್ದು ಅದರಲ್ಲಿ ಕಮಲದ ಕೆತ್ತನೆ ಇದೆ. ಗರ್ಭಗೃಹದ ಮುಂದಿನ ಪ್ರಾಕಾರದಲ್ಲಿ ಮೇಲ್ಭಾಗದಲ್ಲಿ ಸಾಧಾರಣ ಕೆತ್ತನೆಗಳ ಸಾಲುಗಳಿವೆ.

Maddur temple, varadarajaswamy, netranarayana, Kanchi Varadaraja swamy, ಮದ್ದೂರು ವರದರಾಜಸ್ವಾಮಿ, ನೇತ್ರ ನಾರಾಯಣ.ಕೋಟೆಯಂತೆ ಭಾಸವಾಗುವ ಈ ದೇವಾಲಯದ ಮೆಟ್ಟಿಲುಗಳನ್ನೇರಿ ಒಳ ಪ್ರವೇಶಿಸಿದರೆ, ಗರ್ಭಗೃಹದಲ್ಲಿರುವ ಎತ್ತರದ ಸುಂದರ ವರದರಾಜಸ್ವಾಮಿಯ ಮೂರ್ತಿ ಮನಸೆಳೆಯುತ್ತದೆ. ಆ ಮೂರ್ತಿಯಲ್ಲಿರುವ ಕೆತ್ತನೆ, ಶಿಲ್ಪಿಯ ಸೂಕ್ಷ್ಮತೆ, ಕಲಾನೈಪುಣ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಶಂಖ, ಚಕ್ರ, ಗದಾಧಾರಿಯಾದ ವರದರಾಜಸ್ವಾಮಿ ಕೈಯಲ್ಲಿ ಸುಂದರವಾದ ಕಮಲ ಪುಷ್ಪ ಹಿಡಿದಿದ್ದಾನೆ. ಶಂಖ ಚಕ್ರಗಳನ್ನು ಶಿಲ್ಪಿ ಅತ್ಯಂತ ಮೋಹಕವಾಗಿ ಕಡೆದಿದ್ದಾನೆ. ಸ್ವಾಮಿಯವರ ವಕ್ಷಸ್ಥಳದಲ್ಲಿ ಶ್ರೀಮಹಾಲಕ್ಷ್ಮೀ ಅಮ್ಮನವರ ಕೆತ್ತನೆ ಇದೆ.

ಗರ್ಭಗೃಹದ ದ್ವಾರದ ಎಡಭಾಗದಲ್ಲಿ ನಮ್ಮಾಳ್ವಾರ್ ಪ್ರತಿಮೆ ಇದೆ. ಬಲಭಾಗದಲ್ಲಿ ಗಂಧ ತೇಯುವ ಕಲ್ಲಿದೆ. ಪ್ರತಿ ತಿಂಗಳ ಮೊದಲ ಭಾನುವಾರ 16 ಅಡಿ ಎತ್ತರದ ಈ ಮಹಾಮೂರ್ತಿಗೆ ಅಭಿಷೇಕ ನಡೆಯುತ್ತದೆ. ಕಮಲ ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿರುವ ವರದರಾಜಸ್ವಾಮಿಯ ಪೀಠದಲ್ಲಿ ಸುಂದರವಾದ ಗರುಡಮೂರ್ತಿಯ ವಿಗ್ರಹವಿದೆ.  ಪಾಂಚರಾತ್ರಾಗಮದ ರೀತ್ಯ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ.

ಶ್ರೀಮದ್ವರದರಾಜೇಂದ್ರಾಯ ಶ್ರೀವತ್ಸಾಂಕಾಯಶುಭಪ್ರದಾಯ
ತುಂಡೀರಮಂಡಲೋಲ್ಲಾಸಾಯ ತಾಪತ್ರಯ ನಿವಾರಕಾಯ ನಮಃ
ಎಂಬ ಶ್ಲೋಕ ಹೇಳಿಕೊಂಡು ಈ ದೇವರಿಗೆ ಪೂಜೆ ಸಲ್ಲಿಸಿದರೆ ಎಲ್ಲ ಬಗೆಯ ತಾಪತ್ರಯಗಳೂ ಪರಿಹಾರವಾಗುತ್ತದೆ ಎಂಬುದು ನಂಬಿಕೆ.

ದೇವಾಲಯದ ವಿಳಾಸ - ಶ್ರೀ ವರದರಾಜಸ್ವಾಮಿ ದೇವಸ್ಥಾನ, ಮದ್ದೂರು, ಮಂಡ್ಯಜಿಲ್ಲೆ ಪಿನ್ ಕೋಡ್ 571428. ದೂರವಾಣಿ (08232) 232610, ಮೊಬೈಲ್ 9844421388, 9964174408, 9342809939, 9945943800.   

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು