|
ನಗರ್ತಪೇಟೆಯ ಲಕ್ಷ್ಮೀನಾರಾಯಣ ದೇವಾಲಯ *ಟಿ.ಎಂ.ಸತೀಶ್
ನಗನಾಣ್ಯ ವ್ಯಾಪಾರಕ್ಕಾಗಿ ನಗರಕ್ಕೆ ಬಂದ ನಗರ್ತ ಸಮುದಾಯದವರು ಇಲ್ಲಿ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ನಿರ್ಮಾಣವಾದ ದೇವಾಲಯಗಳ ಪೈಕಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಮತ್ತು ಪ್ರಸನ್ನ ಆಂಜನೇಯಸ್ವಾಮಿ ದೇವಾಲಯವೂ ಒಂದು. ಧರ್ಮರಾಯದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನಗರ್ತಪೇಟೆಯತ್ತ ಸಾಗಿದರೆ, ಮಕ್ಕಳ ಬಸವಣ್ಣ ದೇವಾಲಯಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿರುವ ಪುಟ್ಟ ದೇವಾಲಯವೇ ಶ್ರೀಲಕ್ಷ್ಮೀನಾರಾಯಣ ಮತ್ತು ಪ್ರಸನ್ನ ಆಂಜನೇಯ ದೇವಾಲಯ.
ಈ ಆಲಯ
ಪುಟ್ಟದಾದರೂ ಇದರಲ್ಲಿರುವ ಲಕ್ಷ್ಮೀನಾರಾಯಣ ಮಾತ್ರ ಅತಿ ದೊಡ್ಡಮೂರ್ತಿ. ಸುಮಾರು ೧೪
ಅಡಿ ಎತ್ತರ
ಸುಮಾರು ೨೦೦ ವರ್ಷಗಳ ಹಿಂದೆ ಭಕ್ತರೊಬ್ಬರಿಗೆ ಕನಸಿನಲ್ಲಿ ಲಕ್ಷ್ಮೀನಾರಾಯಣ ಕಾಣಿಸಿಕೊಂಡು, ತಾನು ಬೆಂಗಳೂರಿನ ಸಂಪಂಗಿ ಕೆರೆಯಲ್ಲಿ ಇರುವುದಾಗಿ, ತನ್ನನ್ನು ಹೊರ ತೆಗೆದು ದೇವಾಲಯ ನಿರ್ಮಿಸುವಂತೆ ಅಪ್ಪಣೆ ಕೊಡಿಸಿದನಂತೆ ಅದರಂತೆ ಅವರು ಕೆರೆಯಲ್ಲಿ ಶೋಧ ನಡೆಸಿದಾಗ ಈ ಎಲ್ಲ ದೇವತಾ ವಿಗ್ರಹಗಳೂ ದೊರಕಿದವು. ಅದನ್ನು ತಂದು ಅವರು ನಗರ್ತ ಪೇಟೆಯಲ್ಲಿ ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಿದರು ಎಂದು ತಮ್ಮ ಪೂರ್ವಿಕರು ಹೇಳುತ್ತಿದ್ದರು ಎನ್ನುತ್ತಾರೆ ದೇವಾಲಯ ಅರ್ಚಕರಾದ ಜಗನ್ನಾಥಚಾರಿ ಹಾಗೂ ಸಂಪತ್ ಅಯ್ಯಂಗಾರ್ ಅವರು. ಶ್ರೀಲಕ್ಷ್ಮೀನಾರಾಯಣಸ್ವಾಮಿ ಮತ್ತು ಪ್ರಸನ್ನ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಈ ದೇವಾಲಯದಲ್ಲಿ ಗಣಪನ ಮೂರ್ತಿಯೂ ಇದೆ. ವೈಖಾನಸ ಪದ್ಧತಿಯ ರೀತ್ಯ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಶ್ರೀರಾಮನವಮಿಯಂದು, ಹನುಮಜಯಂತಿಯಂದು ಹಾಗೂ ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆರೆಯಲ್ಲಿ ದೊರೆತ ಈ ಮೂರ್ತಿಗಳು ಸಾವಿರಾರು ವರ್ಷಗಳಷ್ಟು ಹಳೆಯದೆಂದು ಅವರು ಹೇಳುತ್ತಾರೆ. ಪ್ರತಿವರ್ಷ ಮಾಘ ಮಾಸದಲ್ಲಿ ಇಲ್ಲಿ ವಾರ್ಷಿಕೋತ್ಸವ ಜರುಗುತ್ತದೆ. | |||