|
ಶಿಲ್ಪಕಲೆ, ದೇವಾಲಯಗಳ ತವರು ಲಕ್ಕುಂಡಿ *ಟಿ.ಎಂ. ಸತೀಶ್
ಲಕ್ಕುಂಡಿ ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಹೆಸರು ಪಡೆದ ತಾಣ. ಗಿಡುಗನಿಂದ ಪಾರಿವಾಳವನ್ನು ರಕ್ಷಿಸಲು ತನ್ನ ತೊಡೆಯ ಮಾಂಸವನ್ನು ನಂತರ ತನ್ನನ್ನೇ ತಕ್ಕಡಿಯಲ್ಲಿ ತೂಗಿ ಕೊಟ್ಟ ದಾನಶೂರ ಶಿಬಿ ಚಕ್ರವರ್ತಿಯ ರಾಜಧಾನಿಯಾಗಿ ಲಕ್ಕುಂಡಿ ಮೆರೆದಿತ್ತೆಂದೂ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದಾನವಾಗಿ ನೀಡಿದ ಅಗ್ರಹಾರ ಇದೆಂದೂ ಪ್ರತೀತಿಯಿದೆ. ನಂತರ 1,192ರಲ್ಲಿ ಹೊಯ್ಸಳರ ಅರಸ ವೀರಬಲ್ಲಾಳನ ರಾಜಧಾನಿಯಾಗಿಯೂ ಖ್ಯಾತಿ ಪಡೆದ ಲಕ್ಕುಂಡಿ, ನಂತರದ ವರ್ಷಗಳಲ್ಲಿ ಶೈಕ್ಷಣಿಕ ಕೇಂದ್ರವಾಗಿ, ಕಲೆಯ ತವರಾಗಿ ಅಭಿವೃದ್ಧಿಹೊಂದಿತು ಎನ್ನುತ್ತದೆ ಇತಿಹಾಸ. ಒಂದು ಕಾಲದಲ್ಲಿ ಲಕ್ಕುಂಡಿಯಲ್ಲಿ ನೂರೊಂದು ದೇವಾಲಯ, ನೂರೊಂದು ಬಾವಿಗಳಿದ್ದವೆಂದು ಶಾಸನಗಳಲ್ಲಿ ಉಲ್ಲೇಖವಿದೆ. ಇಲ್ಲಿರುವ ಬಹುತೇಕ ದೇವಾಲಯಗಳು ನಕ್ಷತ್ರಾಕಾರದ ಜಗತಿಯ ಮೇಲಿದ್ದು, ಬಾಗಿಲಿನಲ್ಲಿ ಗಜಲಕ್ಷ್ಮಿಯ ಕೆತ್ತನೆಯಿಂದ ಕೂಡಿ ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳ ಶೈಲಿಯ ವಿನ್ಯಾಸದ ಸಮ್ಮಿಲನವಾಗಿವೆ.
ಕವಿಚಕ್ರವರ್ತಿ ರನ್ನನಿಂದ ಅಜಿತನಾಥ ಪುರಾಣ, ಪೊನ್ನನಿಂದ ಶಾಂತಿನಾಥ ಪುರಾಣ ಬರೆಸಿದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯೂ ಆದ ಲಕ್ಕುಂಡಿಯಲ್ಲಿ ಬ್ರಹ್ಮಜಿನಾಲಯವನ್ನು ಆಕೆಯ ಕಟ್ಟಿಸಿದಳು. ಬ್ರಹ್ಮನ ಸುಂದರ ಮೂರ್ತಿ ಇಲ್ಲಿರುವ ಕಾರಣ ಇದನ್ನು ಬ್ರಹ್ಮ ಜಿನಾಲಯ ಎನ್ನುತ್ತಾರೆ. ಪದ್ಮಾವತಿಯ ಪ್ರತಿಮೆಯೂ ಇಲ್ಲಿದೆ. ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶಿಲ್ಪವನ್ನೊಳಗೊಂಡ ಬಸದಿ ಮನಮೋಹಕವಾಗಿದೆ. ಶೈವ, ವೈಷ್ಣವ, ಜೈನರ ನೆಲೆವೀಡಾಗಿ ವಿವಿಧ ಧರ್ಮ ಸಮನ್ವಯ ಕೇಂದ್ರ ಎಂದೇ ಖ್ಯಾತವಾಗಿದ್ದ ಲಕ್ಕುಂಡಿಯಲ್ಲಿ ಪ್ರಾಚೀನ ಬ್ರಹ್ಮಜಿನಾಲಯವಲ್ಲದೆ ಇನ್ನೂ ಎರಡು ಬಸದಿಗಳಿದ್ದು, ಒಂದು ಬಸದಿ ನಾಗನಾಥಾಲಯವೆಂದು ಖ್ಯಾತವಾಗಿದೆ. ವಾಸ್ತವವಾಗಿ ಇದು ಪಾರ್ಶ್ವನಾಥ ಬಸದಿಯಾಗಿದೆ. ಪ್ರಸ್ತುತ ಇಲ್ಲಿ ವಿಗ್ರಹದ ಪೀಠ ಹಾಗೂ ಪಾರ್ಶ್ವನಾಥ ತಲೆಯ ಮೇಲಿನ ಹೆಡೆಯುಳ್ಳ ಸರ್ಪ ಮಾತ್ರ ಇದೆ. ಹಂಪಿ ಉತ್ಸವ, ಕದಂಬೋತ್ಸವದ ಮಾದರಿಯಲ್ಲೇ ಪ್ರತಿವರ್ಷ ಇಲ್ಲಿ ಲಕ್ಕುಂಡಿ ಉತ್ಸವ ಜರುಗುತ್ತದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||