|
ಮುಖಪುಟ
/ನಮ್ಮದೇವಾಲಯಗಳು
ಕುರುಡುಮಲೆ ಗಣೇಶನ
ಸನ್ನಿಧಿ
*ಟಿ.ಎಂ.ಸತೀಶ್
ಸ್ಥಳ ಪುರಾಣದ ಪ್ರಕಾರ ಇದು
ಕೌಂಡಿನ್ಯ ಕ್ಷೇತ್ರ.ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ
ಉಲ್ಲೇಖವಿದೆ. ಕೌಂಡಿನ್ಯ
ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು
ಪರಿಗಣಿಸಲ್ಪಟ್ಟಿದೆ. ಇಲ್ಲಿ ಎರಡು ಬೆಟ್ಟಗಳು ಕೂಡುವ ಕಾರಣ ಇದನ್ನು ಕೂಡು ಮಲೆ
ಎನ್ನುತ್ತಿದ್ದರು. ಕಾಲಾಂತರದಲ್ಲಿ ಇದು ಕುರುಡುಮಲೆ ಆಗರಬಹುದು ಎಂಬುದು ತಜ್ಞರ
ವಾದ.
ಪುರಾಣ ಪ್ರಸಂಗದ ರೀತ್ಯ ತ್ರಿಪುರಾಸುರ ಸಂಹಾರವಾದ ಬಳಿಕ ದೇವಾನು ದೇವತೆಗಳು ಈ
ಗಿರಿಯ ಮೇಲೆ ಕೂಡಿ ಸಂಭ್ರಮ ಪಟ್ಟರಂತೆ. ದೇವತೆಗಳೆಲ್ಲರೂ ಒಂದೇ ಕಡೆ ಕೂಡಿದ ಈ
ಬೆಟ್ಟ ಕೂಡು ಮಲೆ ಎಂದು ಖ್ಯಾತವಾಯಿತಂತೆ.
ಕೃತಯುಗದಲ್ಲಿ, ದ್ವಾಪರದಲ್ಲಿ
ಇದು ಗಣೇಶಗಿರಿ ಎನಿಸಿಕೊಂಡಿತ್ತಂತೆ. ಇಲ್ಲಿ ಮಹಾಗಣಪತಿಯ ಪ್ರಾಚೀನ ಮಂದಿರವಿದೆ.
ಚೋಳರ ಕಾಲದಲ್ಲಿ ಈ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಸುಂದರವಾದ ಈ ದೇವಾಲಯದ ಮುಂದೆ ಗಣಪತಿಯ ವಾಹನ ಇಲಿಯ ಬೃಹತ್ ಗಾತ್ರದ ಕಲಾತ್ಮಕ
ವಿಗ್ರಹವಿದೆ. ದೇವಾಲಯದ ಗರ್ಭಗೃಹದಲ್ಲಿ ಸುಂದರ
3 ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ 15
ಅಡಿ ಎತ್ತರದ ತುಸು ಹಸಿರು ಬಣ್ಣದ ಸಾಲಿಗ್ರಾಮ ಶಿಲೆಯ ಗಣಪನ ವಿಗ್ರಹವಿದೆ. ಒಂದು
ಕೈಯಲ್ಲಿ ಪಾಶ, ಮತ್ತೊಂದರಲ್ಲಿ ಅಂಕುಶ ಹಿಡಿದ ಗಣಪ ಮತ್ತೊಂದು ಕೈಯಲ್ಲಿ ತನಗೆ
ಪ್ರಿಯವಾದ ಮೋದಕವನ್ನು ಹಿಡಿದಿರುವುದನ್ನು ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ.
ಗರ್ಭಗೃಹದ ಎದುರು ನೇರವಾಗಿ
ಎರಡು ಬೃಹತ್ ಕಂಬಗಳನ್ನು ನಿಲ್ಲಿಸಲಾಗಿದೆ. ಈ ಕಲ್ಲುಕಂಬದಲ್ಲಿ ಸಾಧಾರಣ ಕೆತ್ತನೆ
ಇದೆ. ಈ ಕಂಬಗಳು ಸಮಾನಾಂತರವಾಗಿ ಕಮಾನಿನಂತೆ ಬಾಗಿವೆ. ಗಣಪನ ಗುಡಿಯ ಪ್ರಾಂಗಣದಲ್ಲಿ
ನವಗ್ರಹ ಗುಡಿಯೂ ಇದೆ.
ಹೊರಭಿತ್ತಿಗಳ ಮೇಲೆ ಸುಂದರ
ಕೆತ್ತನೆ ಇದೆ. ಕಂಬವೊಂದರ ಮೇಲೆ ಸಿಂಹ ಆನೆಯನ್ನು ಕೊಲ್ಲುತ್ತಿರುವ ಶಿಲ್ಪವೂ ಇದೆ.
ಗರ್ಭಗುಡಿಯಲ್ಲಿರುವ ಲಿಂಗ ಸುಂದರವಾಗಿದೆ. ದೇಗುಲ ಪ್ರಾಕಾರದಲ್ಲಿ ಪಾರ್ವತಿ ಮತ್ತು
ಕ್ಷಮಾಂಬಾ ಅಮ್ಮನವರ ಗುಡಿಗಳು ಇವೆ. |
![]() ![]() |
||