|
ಕೊಪ್ಪಳ ‘ಪುರ’ದ ಸೋಮನಾಥ ದೇವಾಲಯ
ಇಲ್ಲಿರುವ ಲಿಂಗಗಳು ಪಂಚಲಿಂಗ, ವರದಾಶಂಕರ ಲಿಂಗ, ಸಂಗಮೇಶ್ವರಲಿಂಗ, ಅಷ್ಟಲಿಂಗ, ನವಲಿಂಗ, ರುದ್ರಾಕ್ಷಿ ಲಿಂಗ, ರುದ್ರಲಿಂಗ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತವೆ. ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎಂದು ಊರಿನ ಹಿರಿಯರು ಹೇಳುತ್ತಾರೆ. ಕ್ರಿ.ಶ.೧೪೬೯ರ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯ ನಿರ್ಮಾಣವಾಗಿರಬಹುದು ಇದನ್ನು ವಿಜಯನಗರದ ದೊರೆ ಎರಡನೇ ವೀರಪ್ರತಾಪ ಸದಾಶಿವರಾಯ ಕಟ್ಟಿಸಿರುವನೆಂದು ದೇವಾಲಯದ ಹೊರಗೆ ಇರುವ ಶಾಸನ ತೋರಿಸುತ್ತಾರೆ. ದೇವಾಲಯದ ಪ್ರಾಕಾರದಲ್ಲಿ ಹಲವೆಡೆ ಸಾಲು ಸಾಲು ಲಿಂಗಗಳಿದ್ದರೆ, ಮತ್ತೆ ಕೆಲವೆಡೆ ಗುಂಪುಗಳಾಗಿ ಲಿಂಗಪ್ರತಿಷ್ಠೆ ಮಾಡಲಾಗಿದೆ. ಮತ್ತೆ ಕೆಲವೆಡೆ ಹಂತ ಹಂತಗಳಲ್ಲಿ ಲಿಂಗಗಳಿವೆ. ಸೋಮನಾಥ ದೇವಾಲಯದ ಗರ್ಭಗೃಹದ ಮುಂದೆ ಕಲ್ಲಿನ ಕಂಬವೊಂದರ ಮೇಲೆ ಶಿವಲಿಂಗವಿದೆ. ಇದನ್ನು ಹರಿವಾಣ ಲಿಂಗ ಎಂದು ಕರೆಯಲಾಗುತ್ತದೆ. ಕೊಳವೆ ಜೋಡಿಸಿರುವ ಈ ಲಿಂಗಕ್ಕೆ ಅಭಿಷೇಕ ಮಾಡಿ, ಲಿಂಗ ತಿರುಗಿಸಿದರೆ ಆ ತೀರ್ಥ ದೇವಾಲಯದಲ್ಲಿರುವ ಎಲ್ಲ ಶಿವಲಿಂಗಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳುತ್ತಾರೆ. ಈಗ ಆ ವ್ಯವಸ್ಥೆ ಇಲ್ಲ ಆದರೆ ಲಿಂಗ ತಿರುಗುತ್ತದೆ. ದೇವಾಲಯದ ಗರ್ಭಗೃಹದ ಎಡಭಾಗದಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋಪಾಲಕರನ್ನು ಕಾಪಾಡಿದ ಕೃಷ್ಣ, ಗಣಪತಿ, ನವಿಲೇರಿ ಸವಾರಿ ಮಾಡುತ್ತಿರುವ ಷಣ್ಮುಖ, ರಾವಣ, ಗಣಪತಿ ಇರುವ ಗೋಕರ್ಣ ಮಹಾತ್ಮೆ, ಗಜಗೌರಿ ವ್ರತ, ಬೇಡರ ಕಣ್ಣಪ್ಪ ಮೊದಲಾದ ದೃಶ್ಯಾವಳಿಗಳಿವೆ.
ಶಿವರಾತ್ರಿಯ ವೇಳೆ ಇಲ್ಲಿ ರಥೋತ್ಸವ ಜರುಗುತ್ತದೆ. ಎಳ್ಳಮಾವಾಸ್ಯೆ, ನಾಗರಪಂಚಮಿ ಹಾಗೂ ಶ್ರಾವಣದಲ್ಲಿ ಇಲ್ಲಿ ಪೂಜೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪರೂಪದ ಈ ದೇವಾಲಯ ಸಂರಕ್ಷಣೆಗೆ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ಪ್ರಜ್ಞಾವಂತರ ಮನವಿ. | |||