|
ಮುಖಪುಟ
/ನಮ್ಮ
ದೇವಾಲಯಗಳು ಕೊಂಡಜ್ಜಿಯ ಮನೋಹರ ವರದರಾಜಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ಹಾಸನದಿಂದ ಉತ್ತರಕ್ಕೆ 17 ಕಿಲೋ ಮೀಟರ್ ದೂರದಲ್ಲರುವ ಇಲ್ಲಿ ಶ್ರೀವರದರಾಜಸ್ವಾಮಿ ನೆಲೆನಿಂತ ಬಗ್ಗೆ ಹಾಗೂ ಈ ಊರಿಗೆ ಕೊಂಡಜ್ಜಿ ಎಂಬ ಹೆಸರು ಬಂದ ಬಗ್ಗೆ ಊರಿನಲ್ಲಿ ಜನಜನಿತವಾದ ಕಥೆ ಇದೆ. ಹೊಯ್ಸಳರ ದೊರೆ ವಿಷ್ಣುವರ್ಧನ ತನ್ನ ಪತ್ನಿ ಶಾಂತಲೆಯ ಕೋರಿಕೆ ತೀರಿಸಲು ನಿಂತಿರುವ ಭಂಗಿಯ 18 ಅಡಿ ಎತ್ತರದ ಭವ್ಯವಾದ ಶ್ರೀವರದರಾಜಸ್ವಾಮಿ ವಿಗ್ರಹವನ್ನು ಮಾಡಿಸಿ ತಮಿಳುನಾಡಿನಿಂದ ಕುದುರೆ ಬಂಡಿಯಲ್ಲಿ ಬೇಲೂರಿಗೆ ತರಿಸಿದನಂತೆ. ಈ ಪ್ರತಿಮೆಯನ್ನು ಬೇಲೂರಿನ ಚೆನ್ನಕೇಶವ ದೇವಾಲಯದ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲು ಇಚ್ಛಿಸಿದ ಆದರೆ, ಗರ್ಭಗೃಹ ಚಿಕ್ಕದಾದ ಕಾರಣ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ. ಹೀಗೆ ಪ್ರತಿಷ್ಠಾಪನೆ ಆಗದೆ ಪ್ರಾಕಾರದಲ್ಲೇ ಉಳಿದ ವಿಗ್ರಹವನ್ನು ಒಬ್ಬ ಅಜ್ಜಿ ಕೊಂಡು ತಂದು, ತನ್ನೂರಿನಲ್ಲಿ ಪ್ರತಿಷ್ಠಾಪಿಸಿ, ಪುಟ್ಟ ಗುಡಿ ಕಟ್ಟಿಸಿದಳಂತೆ ಹೀಗಾಗೇ ವಿಗ್ರಹ ಕೊಂಡ ಅಜ್ಜಿಯ ಊರು ಕೊಂಡಜ್ಜಿ ಎಂದೇ ಖ್ಯಾತವಾಯಿತು. ವರದರಾಜ ಸ್ವಾಮಿ ಅಥವಾ ಅಲ್ಲಾಳನಾಥ ವಿಷ್ಣುವಿನ 24 ದಿವ್ಯ ನಾಮಗಳಲ್ಲಿ ಒಂದು. ವರದರಾಜಸ್ವಾಮಿ ಜನಾರ್ದನನ ರೂಪವೆಂದು ಪುರಾಣಗಳು ಹೇಳುತ್ತವೆ. ಇಂಥ ಭವ್ಯ ಮೂರ್ತಿ ಇಲ್ಲಿ ನಿಂತಿರುವ ಭಂಗಿಯಲ್ಲಿದೆ. ಶಂಖ, ಚಕ್ರ, ಗದೆ ಮತ್ತು ಅಭಯ ಮುದ್ರೆಯನ್ನು ಹೊಂದಿರುವ ವಿಗ್ರಹದ ಬಲ ಎದೆಯ ಮೇಲೆ ಲಕ್ಷ್ಮೀ ವಿಗ್ರಹವಿದೆ. ಪ್ರತಿಮೆಯಲ್ಲಿನ ಕಿರೀಟ, ಯಜ್ಞೋಪವೀತ, ವಸ್ತ್ರ, ಒಡವೆಗಳಲ್ಲಿನ ಕುಸೂರಿ ಕೆತ್ತನೆ ಶಿಲ್ಪಿಯ ಕೈಚಳಕಕ್ಕೆ ಸಾಕ್ಷಿಯಾಗಿದೆ. ಸೊಂಟಕ್ಕೆ ಸ್ವಾಮಿ ಕಟ್ಟಿರುವ ಪೀತಾಂಬರದ ಉತ್ತರೀಯಕ್ಕೆ ಹಾಕಿರುವ ಗಂಟನ್ನು ಸಹ ನೈಜವಾಗಿ ಶಿಲ್ಪಿ ಮೂಡಿಸಿದ್ದಾನೆ.
ಈ ದೇವಾಲಯದ ಪ್ರಾಕಾರದಲ್ಲಿ ದೇವಾಲಯದ ಸಂಕ್ಷಿಪ್ತ ಮಾಹಿತಿಯನ್ನು ಭಕ್ತಾದಿಗಳ ಅನುಕೂಲಕ್ಕಾಗಿ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ಹಾಸನ ಘಟಕದ ಸಂಚಾಲಕರಾದ ತುರುವೇಕೆರೆಯ ಟಿ.ವಿ. ನಟರಾಜ್ ಅವರು ಹಾಕಿಸಿದ್ದಾರೆ. ಇಷ್ಟು ಮನೋಹರವಾದ ವಿಗ್ರಹವಿರುವ ಈ ದೇವಾಲಯಕ್ಕೆ ಮೊದಲಿನಿಂದಲೂ ಯಾವುದೇ ವಿಶಿಷ್ಟ ರಕ್ಷಣೆ ಇಲ್ಲದಿದ್ದರೂ, ಸ್ವಾಮಿ ತನ್ನ ಸೌಂದರ್ಯ ರಕ್ಷಿಸಿಕೊಂಡಿದ್ದಾನೆ. ಈ ದೇವಾಲಯ ಇಂದು ತೀರಾ ಶಿಥಿಲಾವಸ್ತೆಯಲ್ಲಿದೆ. ಗರ್ಭಗೃಹ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂಥ ಅಪರೂಪದ ಹಾಗೂ ನೂರಾರು ವರ್ಷಗಳ ಐತಿಹಾಸಿಕ ಮಹತ್ವ ಇರುವ ದೇವಾಲಯವನ್ನು, ದೇವರನ್ನು ಉಳಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862. | |||