ಮುಖಪುಟ /ನಮ್ಮ ದೇವಾಲಯಗಳು  

ಕೆಳದಿಯ ರಾಮೇಶ್ವರ ಸನ್ನಿಧಿ
 

* ಟಿ.ಎಂ.ಸತೀಶ್

Keladi temple, shimoga, ಕೆಳದಿ ದೇವಾಲಯ, ಇಕ್ಕೇರಿ ಚರಿತ್ರೆ, ikkeri, kannadaratna.com, ourtemples.in, ಕನ್ನಡರತ್ನ.ಕಾಂ.ಶಿವಮೊಗ್ಗ ಜಿಲ್ಲೆ ಸಾಗರದಿಂದ 7 ಕಿಲೋ ಮೀಟರ್ ದೂರದಲ್ಲಿರುವ ಊರು ಕೆಳದಿ. ತನಗೆ ದೊರೆತ ನಿಧಿಯಿಂದ ಶ್ರೀಮಂತನಾದ ರೈತ ಚೌಡಪ್ಪಗೌಡ 16ನೆಯ ಶತಮಾನದ ಆದಿಯಲ್ಲಿ ವಿಜಯನಗರದರಸರ ಅನುಮತಿಯ ಮೇಲೆ ಕೆಳದಿ ಮೊದಲಾದ ಎಂಟು ಮಾಗಣೆಗಳ ನಾಯಕನಾಗಿ, ಕೆಳದಿಯನ್ನು ತನ್ನ ರಾಜಧಾನಿ ಮಾಡಿಕೊಂಡನಂತೆ. ಕೆಳದಿಯಲ್ಲಿ ಅರಮನೆ, ಕೋಟೆ ಕಟ್ಟಿದ. ಕೆಳದಿಯ ಐತಿಹ್ಯದ ರೀತ್ಯ ಇಲ್ಲಿಗೆ ಸಮೀಪದ ಸೀಗೆವಳ್ಳಿಯಲ್ಲಿ ರಾಮೇಶ್ವರ ಲಿಂಗದ ಮೇಲೆ ಹುತ್ತ ಬೆಳೆದಿತ್ತಂತೆ.  ನಿಧಿ ದೊರಕುವ ಮುನ್ನ ರೈತನಾಗಿದ್ದ ಚೌಡಪ್ಪ ನಾಯಕನಿಗೆ ಸೇರಿದ ಹಸುವೊಂದು ನಿತ್ಯ ಆ ಹುತ್ತದ ಮೇಲೆ ನಿಂತು ತಾನೇ ಹಾಲು ಕರೆದು ಬರುತ್ತಿತ್ತಂತೆ. ಇದನ್ನು ಕಂಡ ವಿಸ್ಮಿತನಾದ ಚೌಡಪ್ಪ ಹುತ್ತ ಅಗೆದು ನೋಡಿದಾಗ ಅಲ್ಲಿ ದಿವ್ಯವಾದ ರಾಮೇಶ್ವರ ಲಿಂಗ ಗೋಚರಿಸಿತು. ಚೌಡಪ್ಪ ಆ ಸ್ಥಳವನ್ನು ಶುದ್ಧ ಮಾಡಿ, ಪರ್ಣ ಕುಟೀರವನ್ನು ಕಟ್ಟಿ ದೇವಾಲಯ ನಿರ್ಮಿಸಿದನಂತೆ. ದೇವರಿಗೆ ನಿತ್ಯ ಪೂಜೆ ಸಲ್ಲಿಸಿದನಂತೆ. ಇದರ ಫಲವಾಗಿಯೇ ಅವನಿಗೆ ಅಖಂಡ ನಿಧಿ ದೊರೆತು, ರಾಜನಾದ. ನಂತರ ಕಲ್ಲಿನಲ್ಲಿ ಭದ್ರವಾದ ದೇವಾಲಯವನ್ನು ಆತನೆ ಕಟ್ಟಿಸಿದ ಎಂದು ತಿಳಿದುಬರುತ್ತದೆ.

ಕೆಳದಿಯ ಗತಕಾಲದ ವೈಭವವನ್ನು ರಾಮೇಶ್ವರ ದೇವಾಲಯ ಸಾರುತ್ತದೆ. ದ್ರಾವಿಡ ಮತ್ತು ಹೊಯ್ಸಳ ವಾಸ್ತುಶೈಲಿಗಳ ಮಿಶ್ರಣದಿಂದ ಕೂಡಿದ ಈ ದೇವಾಲಯದಲ್ಲಿ ಗರ್ಭಗೃಹಪ್ರದಕ್ಷಿಣಾಪಥ, ನವರಂಗ ಮತ್ತು ಮುಖಮಂಟಪಗಳಿವೆ. ದೇವಾಲಯದ ಜಗಲಿಯ ಹೊರಭಿತ್ತಿಗಳಲ ಒಂದು ಕಲ್ಲಿನ ಮೇಲೆ ವಾದ್ಯಗಾರರ, ನರ್ತಕರ ಶಿಲ್ಪಗಳಿವೆ.

ಗರ್ಭಗೃಹದ ಭಿತ್ತಿಯಲ್ಲಿ ಬೇಡರ ಕಣ್ಣಪ್ಪ, ಗರುಡ, ಹನುಮ, ಒಂಟೆ, ಆನೆ, ಆನೆಯ ಜೊತೆ ಹೋರಾಡುತ್ತಿರುವ ಯೋಧ, ಯೋಗಾಸನದಲ್ಲಿರುವ ರಾಮೇಶ್ವರ ಹಾಗೂ ಮಿಥುನ ಶಿಲ್ಪಗಳಿವೆ. ಛಾವಣಿಯ ಮುಂದೆ ಚಾಚಿದ ಭಾಗದಲ್ಲಿ ವೀರಭದ್ರ, ತಾಂಡವವೇಶ್ವರ ಪಾರ್ವತಿ, ಮೋಹಿನಿ, ವೇಣುಗೋಪಾಲ, ಕಾಳಿಂಗಮರ್ಧನ, ಭೈರವ ಇತ್ಯಾದಿ ದೇವದೇವತೆಗಳ ಶಿಲ್ಪಗಳಿವೆ.

ಗರ್ಭಗೃಹದಲ್ಲಿ ಎರಡೂವರೆ ಅಡಿಯ ಎತ್ತರದ ಸುಂದರ ಶಿಲಾಲಿಂಗವಿದೆ. ಗರ್ಭಗುಡಿಯ ಮೇಲೆ ಗೋಪುರವಿದೆ. ದೇವಾಲಯದಲ್ಲಿ ಹದಿನೆಂಟು ಕಂಬಗಳಿಂದ ಕೂಡಿದ ಮುಖಮಂಟಪವಿದೆ. ಇಲ್ಲಿ ಗಣಪತಿ ಮತ್ತು ಮಹಿಷಾಸುರಮರ್ಧಿನಿ ಶಿಲ್ಪಗಳಿವೆ.

ಈ ದೇವಾಲಯಕ್ಕೆ ಹೊಂದಿಕೊಂಡಿರುವ ವೀರಭದ್ರ ದೇವಸ್ಥಾನದ ಒಳಮಾಳಿಗೆಯಲ್ಲಿ ಗಂಡಬೇರುಂಡನ ಅದ್ಭುತ ಶಿಲ್ಪವಿದೆ. ಈ ಗಂಡಭೇರುಂಡ ಪಕ್ಷಿ ತನ್ನ ಎರಡೂ ಕೊಕ್ಕಿನಲ್ಲಿ ಸಿಂಹವನ್ನು ಕಚ್ಚಿ ಹಿಡಿದಿದೆ. ಗಂಡಬೇರುಂಡನ ಕಾಲಿನಲ್ಲಿ ಆನೆಯನ್ನು ಹಿಡಿದುಕೊಂಡಿರುವಂತೆ ಕೆತ್ತಲಾಗಿರುವ ಈ ಶಿಲ್ಪ, ಗಂಡಬೇರುಂಡ ಪಕ್ಷಿಯ ಸಾಮರ್ಥ್ಯವನ್ನು ಸಾರುತ್ತದೆ.

ವೀರಭದ್ರ ದೇವಾಲಯ ರಾಮೇಶ್ವರ ದೇಗುಲದಂತೆಯೇ ಇದೆ. ಇಲ್ಲಿನ  ಗರ್ಭಗೃಹದ ಗೋಡೆಯೊಂದರಲ್ಲಿ ವಾಸ್ತುಪುರುಷನ ಶಿಲ್ಪವಿದೆ. ವೀರಭದ್ರ ದೇವಾಲಯದ ದ್ವಾರ ಮಂಟಪದ ಎದುರು ಇರುವ 25 ಅಡಿ ಕಲ್ಲಿನ ಕಂಬದಲ್ಲಿ ಗಣೇಶ, ಶಿವ, ನಂದಿ, ಪಾರ್ವತಿ ಮತ್ತು ಭೈರವರ ಕೆತ್ತನೆಗಳಿವೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು