|
ಕನಕಗಿರಿಯ ಕನಕಾಚಲಪತಿ ದೇವಾಲಯ *ಟಿ.ಎಂ.ಸತೀಶ್
ಹಂಪೆಯಲ್ಲಿರುವ ಹತ್ತಾರು ದೇವಾಲಯ ಹಾಗೂ ಐತಿಹಾಸಿಕ ತಾಣ ಸುತ್ತಿಬರಲು ಕಾಲು ಗಟ್ಟಿಯಾಗಿರುವವರಿಗೆ ಮಾತ್ರವೇ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕಣ್ಣಿದ್ದವರಿಗೆ ಕನಕಗಿರಿ ಎಂಬ ಮಾತು ಬಂದಿದ್ದೇಕೆ ಎಂಬುದನ್ನು ಈ ತಾಣಕ್ಕೆ ಭೇಟಿ ಕೊಟ್ಟರೆ ಮಾತ್ರವೇ ತಿಳಿದೀತು. ಸೌಂದರ್ಯದ ಗಣಿಯಾದ ಈ ದೇವಾಲಯದಲ್ಲಿರುವ ಶಿಲ್ಪಕಲೆ, ನಯನ ಮನೋಹರವಾದ ದೇವತಾಮೂರ್ತಿಗಳನ್ನು ಕಣ್ಣಿದ್ದವರು ಮಾತ್ರವೇ ಕಂಡು ಆನಂದಿಸಲು ಸಾಧ್ಯ. ಇಷ್ಟು ಅದ್ಭುತವಾದ ದೇವಾಲಯದಲ್ಲಿ ಸಾಲಿಗ್ರಾಮರೂಪದಲ್ಲಿ ನೆಲೆಸಿರುವ ಲಕ್ಷ್ಮೀನರಸಿಂಹ ಹಾಗೂ ಆಳೆತ್ತರದ ಸುಂದರ ಮೂಲಪ್ರಾಣ ಸಂಜೀವಮೂರ್ತಿ ವಿಗ್ರಹಗಳಿವೆ.
ಸ್ಕಾಂದ ಪುರಾಣದ ತುಂಗಾಮಹಾತ್ಮೆಯಲ್ಲಿ ಕೂಡ ಕನಕಗಿರಿಯ ಸ್ಥಳವರ್ಣನೆ ಇದೆ ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥ ದಾಸರು ಈ ದೇವರ ಬಗ್ಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಈ ಗಿರಿ ಪ್ರದೇಶದಲ್ಲಿ ಪುಷ್ಪ, ಜಯಂತಿ, ಗುಪ್ತಗಾಮಿನಿಯಾದ ಗೋಪಿಕಾ ನದಿಗಳು ಹರಿಯುವ ಕಾರಣ ಇದು ಪುಣ್ಯ ಕ್ಷೇತ್ರವೆನಿಸಿದೆ. ಇತಿಹಾಸ ತಜ್ಞರ ಪ್ರಕಾರ ಮೌರ್ಯ ದೊರೆ ಅಶೋಕ ಚಕ್ರವರ್ತಿ ಕನಕಗಿರಿಯನ್ನು ದಕ್ಷಿಣ ಭಾರತದ ತನ್ನ ರಾಜಧಾನಿ ಮಾಡಿಕೊಂಡಿದ್ದನೆಂದೂ ಅಭಿಪ್ರಾಯಪಡುತ್ತಾರೆ. 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಇರಬೇಕು ಎಂದೂ ಇತಿಹಾಸ ತಜ್ಞರು ಹೇಳುತ್ತಾರೆ.
ಗುಜ್ಜರ ವಂಶದ ಮೊದಲ ದೊರೆ ಪರಸಪ್ಪ ನಾಯಕ (1436-1510)ನ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದನಂತೆ. ಈ ವಿಷಯವನ್ನು ಆತ ತನ್ನ ಸಾಮ್ರಾಟ ವಿಜಯನಗರದ ಅಧಿಪತಿ ಪ್ರೌಢದೇವರಾಯನಿಗೆ ನಿವೇದಿಸಿಕೊಂಡನಂತೆ. ಆಗ ವಿಜಯನಗರದ ಅರಸರು 12ಗ್ರಾಮಗಳನ್ನು ಆತನಿಗೆ ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ ಕನಕಾಚಲಪತಿಗೆ ನಿತ್ಯ ಪೂಜೆ ನಡೆಸಲು ಆದೇಶಿಸಿದರು. ಇದುವೇ ದೇವಾಲಯದ ಸ್ಥಾಪನೆಗೆ ಕಾರಣವಾಯ್ತು. ನಂತರದ ದಿನಗಳಲ್ಲಿ ಸ್ವಾಮಿಯ ಮಹಿಮೆ ಅರಿತ ವಿಜಯನಗರದ ದೊರೆಗಳಾದ ಸಾಳ್ವ ನರಸಿಂಹ, ಶ್ರೀಕೃಷ್ಣದೇವರಾಯರು, ಅಚ್ಚ್ಯುತರಾಯರು ಕನಕಾಚಲಪತಿಯ ಭಕ್ತರಾದರೆಂದು ಇತಿಹಾಸ ಹೇಳುತ್ತದೆ. ಕನಕಗಿರಿಯ ನಾಯಕರಿಗೂ, ಚಿತ್ರದುರ್ಗದ ಪಾಳೆಯಗಾರ ನಡುವೆ ಸ್ನೇಹ ಸಂಬಂಧವಿತ್ತೆಂದು, ಈ ಎರಡೂ ವಂಶಗಳ ನಡುವೆ ವೈವಾಹಿಕ ಸಂಬಂಧವಿತ್ತೆಂದೂ ತಿಳಿದುಬರುತ್ತದೆ.
ಕನಕಗಿರಿಯಲ್ಲಿ ಮಧ್ಯಕಾಲೀನ ಕರ್ನಾಟಕದ ವಾಸ್ತುಶಿಲ್ಪದಂತೆ ನಿರ್ಮಿಸಲಾದ ವೆಂಕಟಪತಿ ಬಾವಿ ಅಥವಾ ಜಲಕ್ರೀಡಾ ಭವನವಿದೆ. ಸುಂದರವಾದ ಶಿಲ್ಪಕಲೆಯಿಂದ ಕೂಡಿದ ಮಂಟಪಗಳು, ಉಪ್ಪರಿಗೆಗಳಿವೆ. ಭಿತ್ತಿಗಳಲ್ಲಿ ಮಿಥುನ ಶಿಲ್ಪಗಳು, ಶೃಂಗಾರ ಶಿಲ್ಪಗಳಿವೆ. ಇಲ್ಲಿರುವ ಕಮಾನುಗಳಲ್ಲಿ ನವಾಬರ ಕಾಲದ ವಾಸ್ತು ಶಿಲ್ಪಗಳೂ ಕಾಣಸಿಗುತ್ತವೆ. ಗಜಾಸುರನನ್ನು ಕೊಲ್ಲುತ್ತಿರುವ ನಟರಾಜ, ಹಂಪಿಯ ಕಲ್ಲಿನರಥವನ್ನು ನೆನಪಿಸುವ ಅಪೂರ್ಣವಾದ ಕಲ್ಲಿನರಥವೂ ಇಲ್ಲಿದೆ. ತಿರುಪತಿಯ ಕಲ್ಯಾಣಿಯನ್ನು ಹೋಲುವ ಪುಷ್ಕರಣಿ, ನರಸಿಂಹತೀರ್ಥ ಅದರ ಬಳಿಯೇ ಇರುವ ಸೂರ್ಯನಾರಾಯಣ ದೇವಾಲಯ ನೋಡಬೇಕಾದ ಸ್ಥಳಗಳು.
ಜಾತ್ರೆಯ ಕಾಲದಲ್ಲಿ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ಜರುಗುತ್ತವೆ. ಮಾರ್ಗ: ಕನಕಗಿರಿ ಬೆಂಗಳೂರಿನಿಂದ 410 ಕಿಲೋ ಮೀಟರ್ ದೂರದಲ್ಲಿದೆ. ಹೊಸಪೇಟೆಯಿಂದ ಕನಕಗಿರಿಗೆ 70 ಕಿಲೋ ಮೀಟರ್, ಹೊಸಪೇಟೆಗೆ ಟ್ರೈನ್ ಸೌಲಭ್ಯವಿದೆ. ಕೊಪ್ಪಳದಿಂದ ಕನಕಗಿರಿಗೆ ಕೇವಲ 45 ಕಿಲೋ ಮೀಟರ್. ಕೊಪ್ಪಳಕ್ಕೆ ರಾಜ್ಯದ ಎಲ್ಲ ಪ್ರಮುಖ ನಗರಗಳಿಂದಲೂ ಬಸ್ ಸೌಲಭ್ಯವಿದೆ. ಬಳ್ಳಾರಿಯ ಉದ್ದೇಶಿತ ವಿಮಾನ ನಿಲ್ದಾಣದಿಂದ ಕನಕಗಿರಿಗೆ 70 ಕಿಲೋ ಮೀಟರ್. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||