ಮುಖಪುಟ /ನಮ್ಮದೇವಾಲಯಗಳು   

ಕಂಬದ ಹಳ್ಳಿಯ ಸುಂದರ ಬಸದಿಗಳು
 

*ಟಿ.ಎಂ. ಸತೀಶ್

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರ ಕಂಬದಹಳ್ಳಿ. ಈ ಊರಿನಲ್ಲಿರುವ ಪಂಚಕೂಟಬಸ್ತಿಗೆ ಉತ್ತರದಲ್ಲಿರುವ 5೦ ಅಡಿ ಎತ್ತರದ ಕರಿಕಲ್ಲಿನ ಬ್ರಹ್ಮದೇವರ ಕಂಬದಿಂದಾಗಿ ಊರಿಗೆ ಕಂಬದ ಹಳ್ಳಿ ಎಂಬ ಹೆಸರು ಬಂದಿದೆ.

50 ಅಡಿ ಎತ್ತರದ ಈ ಮನಮೋಹಕ ಕಂಬದ ತಳಭಾಗದಲ್ಲಿ ಅಷ್ಟ ಕೋನಗಳಿದ್ದು, ಅದರ ಮೇಲೆ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿವೆ. ಈ ಕಂಬದ ಮೇಲೆ ಪೂರ್ವಾಭಿಮುಖವಾಗಿರುವ ಬ್ರಹ್ಮದೇವರ ಮೂರ್ತಿಯಿದೆ. ಹೀಗಾಗೇ ಈ ಕಂಬಕ್ಕೆ ಬ್ರಹ್ಮ ದೇವರ ಕಂಬ ಎಂಬ ಹೆಸರು ಬಂದಿದೆ.

ಕಂಬಕ್ಕೆ ಅತಿ ಸನಿಹದಲ್ಲೇ  ದ್ರಾವಿಡ ಶೈಲಿಯಲ್ಲಿ ಕಲ್ಲಿನಿಂದ ಕಟ್ಟಲಾದ ಏಳು ದೇವಾಲಯಗಳಿವೆ. ಕ್ರಿ.ಶ. 9೦೦ರ ಸರಿಸುಮಾರಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಪಂಚಕೂಟಬಸ್ತಿಯಿದೆ. ಇದರ ನಡುವೆ ಮೂರು ಗೋಪುರಗಳ ತ್ರಿಕೂಟಾಚಲ ಆದಿನಾಥಬಸದಿಯಿದೆ.

ಈ ದೇವಾಲಯ ಕನ್ನಡ ನಾಡಿನ್ನಾಳಿದ ಪಲ್ಲವರ ಕಾಲದ್ದೆಂದು ಇಲ್ಲಿರುವ ಶಿಲ್ಪಗಳಿಂದ ತಿಳಿದುಬರುತ್ತದೆ. ದೇವಾಲಯದ ಕೆಳಭಾಗ ಎಂಟು ಮೂಲೆಗಳನ್ನು ಹೊಂದಿದೆ. ಆವಾರ ಭಿತ್ತಿಗಳ ಮೇಲೆ ಯಕ್ಷರು ಮತ್ತು ಜಿನರ ಲತಾಪಟ್ಟಿಕೆಗಳಿವೆ. ಗೂಡುಗಳಿಗೆ ಮಕರತೋರಣಗಳಿವೆ. ಶಿಲ್ಪಾಲಂಕರಣಗಳು ಮನಮೋಹಕವಾಗಿವೆ.

ಬಲಭಾಗದ ಗರ್ಭಗುಡಿಯಲ್ಲಿ ನೇಮಿನಾಥ ಮತ್ತು ಎಡಭಾಗದ ಗುಡಿಯಲ್ಲಿ ಶಾಂತಿನಾಥನ ಶಿಲಾ ಮೂರ್ತಿಗಳಿವೆ.  

ಈ ದೇವಾಲಯದಲ್ಲಿರುವ ಮೂರು ಶಿಖರಗಳೂ ಮೂರು ವಿಧವಾಗಿರುವುದು ವಿಶೇಷ.  ಪೂರ್ವದ ಶಿಖರ ದುಂಡಾಗಿದ್ದರೆ, ಉತ್ತರ ಭಾಗದಲ್ಲಿರುವ  ಗೋಪುರ ಚಚ್ಚೌಕಾಕೃತಿಯಲ್ಲಿದೆ. ಪಶ್ಚಿಮದ ಶಿಖರ ಅಷ್ಟಾಸ್ರವಾಗಿದೆ.  ಬಸ್ತಿಯಲ್ಲಿರುವ ದಿಕ್ಪಾಲಕರ, ಧರಣೇಂದ್ರ, ಚಾಮರ ಹಿಡಿದ ಶಿಲಾಬಾಲಿಕೆಯರ ಹಾಗೂ ಇತರ ಸುಂದರ ಮೂರ್ತಿಗಳು ಮನಸೆಳೆಯುವಂತಿವೆ.

ಈ ದೇವಾಲಯದ ಸಮೀಪದಲ್ಲೇ ಮತ್ತೆರೆಡು ಮಂದಿರಗಳಿವೆ. ಒಂದು ಮಂದಿರದಲ್ಲಿ 10 ಅಡಿ ಎತ್ತರದ ಶಾಂತಿನಾಥನ ಮೂರ್ತಿಯಿದೆ. ಈ ಮಂದಿರವನ್ನು ಕ್ರಿ.ಶ.12ನೆಯ ಶತಮಾನದಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣವರ್ಧನನ ದಂಡನಾಯಕ ಗಂಗರಾಜನ ಬೊಪ್ಪನು ಕಟ್ಟಿಸಿದನೆಂದು ಶಾಸನಗಳು ಸಾರುತ್ತವೆ. ಹೊರಭಿತ್ತಿಗಳ ಪಟ್ಟಿಕೆಗಳಲ್ಲಿ  ಆನೆ, ಕುದುರೆ, ಲತೆ, ಮಕರ, ಸಿಂಹ ಮೊದಲಾದ ಸುಂದರ ಕಲಾಕೃತಿಗಳಿವೆ. ಧ್ಯಾನದಲ್ಲಿ ತಲ್ಲೀನನಾಗಿರುವ ನೇಮಿನಾಥ ವಿಗ್ರಹ ಮನಮೋಹಕವಾಗಿದೆ.

ಈ ಮಂದಿರದ ಪೂರ್ವಕ್ಕೆ ಮತ್ತೊಂದು ಬಸದಿಯಿದೆ. ಮಂದಿರದ ಭುವನೇಶ್ವರಿಯಲ್ಲಿ  ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಮೂಲೆಗಳಲ್ಲಿ  ಪುಷ್ಪಮಾಲಿಕೆಗಳನ್ನು ಹಿಡಿದಿರುವ  ಗಂಧರ್ವರ ಮೂರ್ತಿಗಳು ಸುಂದರವಾಗಿವೆ.

ಮುಖಪುಟ /ನಮ್ಮದೇವಾಲಯಗಳು