ಮುಖಪುಟ /ನಮ್ಮದೇವಾಲಯಗಳು  

ಜಾವಗಲ್  ಲಕ್ಷ್ಮೀನರಸಿಂಹ ದೇವಾಲಯ

javagal lakshminarasimha temple, Hassan, Arasikere, ಅರಸೀಕೆರೆ, ಜಾವಗಲ್ಶಿಲ್ಪಕಲೆಗಳ ತವರು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಊರು ಜಾವಗಲ್. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ರಿಂದಾಗಿ ಈ ಊರು ಜಗತ್ತಿನಾದ್ಯಂತ ಇರುವ ಇಂದಿನ ಪೀಳಿಗೆಗೂ ಪರಿಚಿತವಾಯ್ತು.

ಜಾವಗಲ್ ಇಂದು ನಿನ್ನೆಯ ಊರಲ್ಲ. ಇದಕ್ಕೆ ಹಲವು ಶತಮಾನಗಳ ಇತಿಹಾಸವೇ ಇದೆ. ಹೊಯ್ಸಳರ ಕಾಲದಲ್ಲಿ ಪ್ರಮುಖ ತಾಣವಾಗಿ ಈ ಊರು ಮೆರೆದದ್ದನ್ನು ಇತಿಹಾಸ ಸಾರುತ್ತದೆ. ದೇವಾಲಯಗಳ ತವರೂ ಆದ ಈ ಊರಿನಲ್ಲಿ ಹೊಯ್ಸಳರ ಕಾಲದ ಶಿಲ್ಪಕಲಾ ಪ್ರಭುತ್ವವಿರುವ ಸುಂದರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ.

ಈ ದೇವಾಲಯ ತ್ರಿಕೂಟಾಚಲ, ಮೂರು ಗರ್ಭಗೃಹ, ಮೂರು ಗೋಪುರಗಳಿರುವ ಈ ದೇವಾಲಯದ ವಿನ್ಯಾಸ ಮನಮೋಹಕವಾಗಿದೆ. ಹೊರ ಗೋಡೆಗಳಲ್ಲಿ ಬೇಲೂರು, ಹಳೇಬೀಡಿನಂತೆಯೇ ಭವ್ಯವಾದ ಶಿಲ್ಪಕಲಾ ಶ್ರೀಮಂತಿಕೆಯೇ ಅಡಗಿದೆ. ಪಟ್ಟಿಕೆಗಳಲ್ಲಿ ಆನೆ, ಕುದುರೆ, ಮಕರ, ಹಂಸ, ಲತಾ ಸುರುಳಿಗಳು ಶಿಲೆಯಲ್ಲಿ ಕಲೆಯಾಗಿ ಅರಳಿ ನಿಂತಿವೆ.

javagal lakshminarasimha temple, Hassan, Arasikere, ಅರಸೀಕೆರೆ, ಜಾವಗಲ್ಭಿತ್ತಿಗಳಲ್ಲಿ 137 ದೊಡ್ಡ ಹಾಗೂ ಸುಂದರ ಶಿಲ್ಪಗಳಿದ್ದು ಇವುಗಳ ಪೈಕಿ 77 ಸ್ತ್ರೀ ಪ್ರತಿಮೆಗಳಾಗಿವೆ. ಭಿತ್ತಿಗಳಲ್ಲಿ ಶಿಲ್ಪಿ ಭಾಗವತ, ರಾಮಾಯಣದ ಹಲವು ಪ್ರಸಂಗಗಳನ್ನು ಅನಾವರಣ ಮಾಡುತ್ತದೆ ಜೊತೆಗೆ ಮಹಿಷಾಸುರ ಮರ್ಧಿನಿ, ಆದಿಮೂರ್ತಿ, ಇಂದ್ರ, ಗಣಪತಿಯ ಮೂರ್ತಿಗಳೂ ಮನೋಹರವಾಗಿವೆ. ಪ್ರಭಾವಳಿಯ ನಡುವೆ, ವಾದ್ಯಗಾರರ ಜೊತೆ ನಾಟ್ಯಭಂಗಿಯಲ್ಲಿರುವ ಗಣಪನ ಉಬ್ಬು ಶಿಲ್ಪವನ್ನು ನೋಡಲು ಎರಡು ಕಣ್ಣು ಸಾಲದು. ಈ ಸುಂದರ ದೇವಾಲಯವನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ.

ಪ್ರಧಾನ ಗರ್ಭಗೃಹದಲ್ಲಿ ವಿಷ್ಣುವಿನ ಭವ್ಯ ಮೂರ್ತಿ ಇದೆ. ವಿಷ್ಣು ಚತುರ್ವಿಂಶತಿ ಲಕ್ಷಣದ ರೀತ್ಯ ಇಲ್ಲಿರುವ ವಿಷ್ಣು ಶ್ರೀಧರ ಸ್ವರೂಪಿ.

javagal lakshminarasimha temple, Hassan, Arasikere, ಅರಸೀಕೆರೆ, ಜಾವಗಲ್ತ್ರಿಕೂಟಾಚಲಗಳ ಪೈಕಿ ಉತ್ತರ ಭಾಗದ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹ ಮೂರ್ತಿಯೂ, ದಕ್ಷಿಣ ಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ ಸ್ವಾಮಿಯ ಮೂರ್ತಿಯೂ ಇದೆ. ಈ ಮೂರೂ ವಿಗ್ರಹಗಳು ಐದು ಅಡಿ ಎತ್ತರವಿದ್ದು ಭವ್ಯವಾಗಿವೆ.

ಪ್ರಧಾನ ಗರ್ಭಗೃಹದ ಮುಂದೆ ಸುಕನಾಸಿ ಇದೆ. ಮೂರೂ ಗರ್ಭಗೃಹಗಳಿಗೆ ಸೇರಿದಂತೆ ದುಂಡು ತಿರುಗಣಿ ಕಂಬಗಳಿರುವ ನವರಂಗವಿದೆ. ದೇವಾಲಯದಲ್ಲಿ ಸೂಕ್ಷ್ಮ ಕೆತ್ತನೆಗಳಿರುವ ದ್ವಾರಬಂಧಗಳು, ಸುಂದರ ಶಿಲ್ಪಕಲೆಗಳಿಂದ ಕೂಡಿದ ಭುವನೇಶ್ವರಿ, ಲಲಾಟ ಬಿಂಬಗಳು ಗಮನ ಸೆಳೆಯುತ್ತವೆ.

ನವರಂಗದ ಪ್ರವೇಶದ್ವಾರದಲ್ಲಿ ದ್ವಾರಪಾಲಕರ ವಿಗ್ರಹಗಳಿದ್ದು, ಇದನ್ನು ನಂತರದ ದಿನಗಳಲ್ಲಿ ಅಳವಡಿಸಲಾಗಿದೆ ಎಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಮುಖ ಮಂಟಪಕ್ಕೆ ಹೊಂದಿಕೊಂಡತೆ ನೀಳವಾದ ಗ್ರಾನೈಟ್ ಕಂಬಗಳಿಂದ ಕೂಡಿದ ಪಾತಾಳಾಂಕಣವಿದೆ. ಪಕ್ಕದಲ್ಲೇ 35 ಅಡಿ ಎತ್ತರದ ದೀಪಸ್ತಂಭವಿದೆ. ದೇವಾಲಯದ ಮೇಲ್ಛಾವಣಿಯಲ್ಲಿ ಪ್ರಧಾನ ಗರ್ಭಗೃಹಕ್ಕೆ ನಾಲ್ಕು ಹಂತಗಳ ಭವ್ಯ ಶಿಖರವಿದೆ. ಈ ಗೋಪುರಗಳ ಹಂತ ಹಂತದಲ್ಲೂ ಸೂಕ್ಷ್ಮ ಕೆತ್ತನೆಗಳು ರಾರಾಜಿಸುತ್ತಿವೆ.

ದೇವಾಲಯದ ಆವರಣದಲ್ಲಿ ಲಕ್ಷ್ಮೀದೇವಿಯ ಗುಡಿಯೂ ಇದೆ. ಅಮ್ಮನವರ ಗುಡಿಯಲ್ಲಿ ವಿಜಯನಗರ ಶೈಲಿಯ ಮಹಾಲಕ್ಷ್ಮೀ ಮೂರ್ತಿಯಿದೆ. ಮುಂದಿರುವ ಕೋಣೆಯಲ್ಲಿ ದ್ವಾದಶ ಆಳ್ವಾರರುಗಳ ಶಿಲ್ಪಗಳಿವೆ. ಎಲ್ಲ ಹೊಯ್ಸಳ ದೇವಾಲಯಗಳಂತೆಯೇ ಈ ದೇವಾಲಯ ಕೂಡ ನಕ್ಷತ್ರಾಕಾರದ ಜಗಲಿಯ ಮೇಲಿದ್ದು ಅತ್ಯಂತ ಆಕರ್ಷಕವಾಗಿದೆ.

ಜಾವಗಲ್ ನಲ್ಲಿ ಗಂಗಾಧರೇಶ್ವರ ಹಾಗೂ ವೀರಭದ್ರ, ಬನಶಂಕರಿ ದೇವಾಲಯ ಹಾಗೂ  ಚಂದ್ರನಾಥ ಬಸದಿಯೂ ಇದೆ. 

ಮುಖಪುಟ /ನಮ್ಮದೇವಾಲಯಗಳು 

M.V.Shankaranarayan

Our ministers.com