|
ಬೆಂಗಳೂರಿನ ಇಸ್ಕಾನ್ ದೇವಾಲಯ
ಇಸ್ಕಾನ್ ದೇಶದ ವಿವಿಧೆಡೆ ಸುಂದರ ದೇವಾಲಯಗಳನ್ನು ನಿರ್ಮಿಸಿದೆ. ಇವುಗಳ ಪೈಕಿ ಮನೋಹರವಾದ ಕೃಷ್ಣ ದೇವಾಲಯ ಬೆಂಗಳೂರಿನ ರಾಜಾಜಿನಗರ ಹಾಗೂ ಮಹಾಲಕ್ಷ್ಮೀ ಬಡಾವಣೆಯ ಬಳಿಯ ಪಶ್ಚಿಮ ಕಾರ್ಡ್ ರೋಡ್ ನಲ್ಲಿದೆ.
ಪ್ರತಿನಿತ್ಯ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇಸ್ಕಾನ್ ದೇವಾಲಯವು ಆಧುನಿಕ ಮತ್ತು ದಕ್ಷಿಣ ಭಾರತದ ಪಾರಂಪರಿಕ ದೇವಾಲಯ ವಾಸ್ತು ವಿಧಾನಗಳು ಹದವಾದ ಮಿಶ್ರಣವಾಗಿದ್ದು, ದೇವಾಲಯವು ಉದ್ದನೆಯ ಗೋಪುರಗಳು, ಬಂಗಾರದ ದೀಪದಗೊಂಚಲು, ಸೂಕ್ಷ್ಮ ಕೆತ್ತನೆಯ ಮರಮುಟ್ಟುಗಳು ಮತ್ತು ವಿಶೇಷ ರೀತಿಯ ಶಿಲ್ಪಗಳಿಂದ ಕೂಡಿರುವ ಈ ದೇವಾಲಯ ಲೋಕರ್ಪಣೆಗೊಂಡಿದ್ದು 1997ರಲ್ಲಿ. ದೇವಾಲಯದ ಮುಖ್ಯ ಒಳಾಂಗಣದಲ್ಲಿರುವ ದೊಡ್ಡ ಬಂಗಾರದ ದೀಪದ ಗೊಂಚಲು ತಿರುವು ಮುರುವಾದ ಕಮಲದ ಆಕೃತಿಯಲ್ಲಿದ್ದು, ತನ್ನ ಸೂಕ್ಷ್ಮ ಕಲಾಕೃತಿಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ.
ರಾತ್ರಿಯ ವೇಳೆ ವಿದ್ಯುತ್ ದೀಪಗಳ ಬೆಳಕಲ್ಲಿ ಝಗಮಗಿಸುವ ದೇವಾಲಯವನ್ನು ನೋಡುವುದೇ ಒಂದು ಸೊಬಗು. ದೇವಾಲಯದಲ್ಲಿ 17 ಮೀಟರ್ ಎತ್ತರ ಅಂದರೆ 56 ಅಡಿಯ ಬಂಗಾರದ ಕವಚವಿರುವ ಧ್ವಜಸ್ತಂಭವಿದೆ. 28 ಅಡಿಯ ಬಂಗಾರ ಲೇಪಿತ ಕಳಶಗಳೂ ಇವೆ. ಇಸ್ಕಾನ್ ದೇಗುಲದಲ್ಲಿ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರು, ಸ್ವಚ್ಛವಾದ ಶೌಚಾಲಯ, ವೃದ್ಧರು ಮತ್ತು ಅಂಗವಿಕಲರ ನೆರವಿಗಾಗಿ ಲಿಫ್ಟ್ ಸೌಲಭ್ಯ, ವಾಹನ ನಿಲುಗಡೆಗೆ ವಿಶಾಲವಾದ ಸ್ಥಳವಿದ್ದು, ಮೂಲ ಸೌಕರ್ಯಗಳಿಂದಲೂ ಶ್ರೀಮಂತವಾಗಿದೆ.
ವಾರ್ಷಿಕ ರಥಯಾತ್ರೆ, 12 ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವ ನೋಡಲೇ ಬೇಕಾದ ಉತ್ಸವ ಎಂದರೆ ತಪ್ಪಾಗಲಾರದು. ಪ್ರತಿ ನಿತ್ಯ ದೇವಾಲಯದಲ್ಲಿ ಶುಚಿಯಾದ ರುಚಿಯಾದ ಪ್ರಸಾದ ನೀಡಲಾಗುತ್ತದೆ. ದೇವಾಲಯ ಪ್ರತಿ ಮುಂಜಾನೆ 4-15ರಿಂದ 5-00, 7-15ರಿಂದ 12-50 ಮತ್ತು ಮಧ್ಯಾಹ್ನ 4:೦೦ರಿಂದ ರಾತ್ರಿ 8-20 ರವರೆಗೆ ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. | |||