ಮುಖಪುಟ /ನಮ್ಮದೇವಾಲಯಗಳು   

ಹುಲಿಯೂರುದುರ್ಗದ ಕಾಳಿಕಾ ದೇವಾಲಯ

Huliyur durga temple, durge, ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, kannadaratna.com,  ourtemples.in, huliyuru durga, ಹುಲಿಯೂರು ದುರ್ಗತುಮಕೂರು ಜಿಲ್ಲೆ ಕುಣಿಗಲ್ ನಿಂದ 24 ಕಿಮೀ ದೂರದಲ್ಲಿರುವ ಊರು ಹುಲಿಯೂರು ದುರ್ಗ.  ಊರಿನಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಹಚ್ಚಹಸುರಿನಿಂದ ಕಂಗೊಳಿಸುವ ಬೆಟ್ಟ, ಗುಡ್ಡ ಅರಣ್ಯ ಪ್ರದೇಶ ಗೋಚರಿಸುತ್ತದೆ.

ಹಿಂದೆ ಈ ಕಾನನದಲ್ಲಿ ಹುಲಿಗಳು ಹೆಚ್ಚಾಗಿದ್ದುದರಿಂದ ಈ ಊರಿಗೆ ಹುಲಿಯೂರು ಎಂದು ಕರೆಯುತ್ತಿದ್ದರು. ಇಲ್ಲಿರುವ 2,771 ಅಡಿ ಎತ್ತರದ ಬೆಟ್ಟದ ಮೇಲೆ ಮಾಗಡಿ ಕೆಂಪೇಗೌಡರು ಕೋಟೆ ಕಟ್ಟಿದ ಬಳಿಕ ಹುಲಿಯೂರಿಗೆ ಹುಲಿಯೂರುದುರ್ಗ ಎಂಬ ಹೆಸರು ಬಂತೆಂದು ಊರ ಹಿರಿಯರು ಹೇಳುತ್ತಾರೆ.

ಇಂದಿಗೂ ಕೋಟೆಯ ಒಳಗೆ ನೀರಿನ ಚಿಲುಮೆಗಳು, ಪಾಳು ಮನೆಗಳು, ಮದ್ದುಗುಂಡುಗಳ ಉಗ್ರಾಣ, ಕಣಜ ಮುಂತಾದ ಅವಶೇಷಗಳು ಇತಿಹಾಸದ ಸಾಕ್ಷಿಯಾಗಿ ಉಳಿದಿವೆ.

ಬೆಟ್ಟದ ತಪ್ಪಲಿನಲ್ಲಿ ದೀಪಾಂಬುಧಿ ಕೆರೆಯ ಪಕ್ಕದಲ್ಲಿ ಅತ್ಯಂತ ಪುರಾತನವಾದ ಹಾಗೂ ಚೋಳರ ಕಾಲದ್ದೆಂದು ಹೇಳಲಾಗುವ ಉತ್ತರಮುಖಿ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಕಾಳಿಕಾದೇವಿ ದೇವಾಲಯವಿದೆ. ಈಗ ನವೀನ ಶೈಲಿಯಲ್ಲಿ ಈ ದೇವಾಲಯಕ್ಕೆ ಪ್ರಾಕಾರ, ಗುಡಿ, ಗೋಪುರ ನಿರ್ಮಿಸಲಾಗಿದೆ. ದೇವಾಲಯದ ಮೇಲೆ ಗೋಪುರಗಳಲ್ಲಿ ಸಿಂಹ, ದುರ್ಗೆಯ ಗಾರೆಯ ಶಿಲ್ಪವಿದೆ. ದೇಗುಲದ ಎದುರು ಗರುಡಗಂಬವಿದೆ. ಗರ್ಭಗೃಹದಲ್ಲಿ ಕೃಷ್ಣಶಿಲೆಯ ಮನೋಹರವಾದ ಕಾಳಿಯ ಮೂರ್ತಿಯಿದೆ.

ಅಮಾವಾಸ್ಯೆಗಳಂದು, ಮಂಗಳವಾರ ಹಾಗೂ ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೆಟ್ಟದ ಹತ್ತಿರ ಗೋಪಾಲಕೃಷ್ಣ ದೇವಾಲಯವಿದೆ; ನವರಂಗದಲ್ಲಿ ಅಂದವಾಗಿ ಕೆತ್ತಿರುವ ಕಣಶಿಲೆಯ ಕಂಬಗಳಿವೆ. ಈ ಬೆಟ್ಟದ ಪಕ್ಕದಲ್ಲಿರುವ ಹೇಮಗಿರಿ ಬೆಟ್ಟ ಹುಲಿಯೂರುದುರ್ಗಕ್ಕಿಂತ ಉನ್ನತವಾಗಿದೆ. ಬೆಟ್ಟದ ಶಿಖರದಲ್ಲಿ ಮಲ್ಲಿಕಾರ್ಜುನ ದೇವಾಲಯವೂ ಇದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು