ಮುಖಪುಟ /ನಮ್ಮದೇವಾಲಯಗಳು  

ಹೊಳೆನರಸೀಪುರ ಲಕ್ಷ್ಮೀನರಸಿಂಹ ದೇವಾಲಯ

ಹೇಮಾವತಿ ನದಿ ತಟದ ಭಕ್ತಿವರ್ಧನ ಕ್ಷೇತ್ರ

*ಟಿ.ಎಂ. ಸತೀಶ್

Holenarasipura temple, ಹೊಳೆನರಸೀಪುರ ದೇವಾಲಯ, ಕನ್ನಡರತ್ನ.ಕಾಂ.ಹೊಯ್ಸಳ ದೊರೆಗಳ ಕಲಾರಾಧನೆ, ಕಲೋಪಾಸನೆಯ ನೆಲೆಯಲ್ಲಿ ಶಿಲೆಗಳೇ ಕಲೆಯಾಗಿ ಜಗತ್ತಿನ ಜನಮನ ಗೆದ್ದಿರುವ ಕರ್ನಾಟಕದ ಹಾಸನ ಜಿಲ್ಲೆಯಲ್ಲಿನ ಹೊಳೆನರಸೀಪುರ  ಪ್ರಮುಖ ತಾಲೂಕು ಕೇಂದ್ರ.

ಹೇಮಾವತಿ ನದಿ ದಂಡೆಯ ಮೇಲಿರುವ ಈ ಊರಿಗೆ ನರಸಿಂಹನಾಯಕ 1168ರಲ್ಲಿ ಕೋಟೆ ಕಟ್ಟಿದನೆಂದು ತಿಳಿದು ಬರುತ್ತದೆ. ಕೋಟೆಯ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ.

ನದಿ ಎಂಬ ಪದಕ್ಕೆ ಹಾಸನ ಭಾಗದಲ್ಲಿ ಹೊಳೆ ಎಂದೇ ಕರೆಯುತ್ತಾರೆ. ಹೊಳೆಯ ದಂಡೆಯಲ್ಲಿರುವ ಊರಿನ ಹೆಸರಿನ ಜೊತೆ ಹೊಳೆ ಸೇರಿಕೊಂಡಿದೆ. ಜೊತೆಗೆ ಇಲ್ಲಿ ನರಸಿಂಹ ದೇವಾಲಯ ಇರುವುದರಿಂದ ಹಾಗೂ ನರಸಿಂಹನಾಯಕ ಕೋಟೆ ಕಟ್ಟಿಸಿದ ಕಾರಣ ಈ ಊರಿಗೆ ಹೊಳೆ ನರಸೀಪುರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. 

ಭಕ್ತಿವರ್ಧನ ಕ್ಷೇತ್ರ ಎಂದೇ ಖ್ಯಾತವಾದ ಹೊಳೆನರಸೀಪುರ ಪಟ್ಟಣದಲ್ಲಿ 14ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಭವ್ಯ ಹಾಗೂ ವಿಶಾಲವಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ನವರಂಗ, ಗರ್ಭಗೃಹ ಒಳಗೊಂಡ ದೇವಾಲಯ ಹಾಗೂ ವಿಗ್ರಹಗಳು, ಕೆತ್ತನೆಗಳು ಸುಂದರವಾಗಿವೆ. ದೇವಾಲಯವು ಹೊರ ನವರಂಗ ಹಾಗೂ ದ್ವಾರಪಾಲಕರ ವಿಗ್ರಹಗಳು, ರಾಜಗೋಪುರ  ಒಳಗೊಂಡಿದೆ. ಸುಮಾರು 630 ವರ್ಷಗಳ ಹಿಂದೆ ಈ ದೇವಾಲಯವನ್ನು ಜೋಳರ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ದೇವಾಲಯಕ್ಕೆ ನಾಲ್ಕು ಅಂತಸ್ತಿನ ಭವ್ಯ ಗೋಪುರ ಹಾಗೂ ದ್ವಾರಬಂಧವಿದೆ. ಅಕ್ಕಪಕ್ಕದಲ್ಲಿ ಜಯವಿಜಯರ ಹಾಗೂ ಗೋಪುರದ ಸುತ್ತ ದೇವಾನುದೇವತೆಗಳ ಗಾರೆ ಶಿಲ್ಪಗಳಿವೆ. ಮುಖ್ಯ ಪ್ರವೇಶದ್ವಾರದಕ್ಕೆ ನೇರವಾಗಿ ಪ್ರಧಾನ ಗರ್ಭಗುಡಿಯಿದ್ದು, ಪ್ರಾಕಾರದಲ್ಲಿ ಗರುಡಗಂಭವಿದೆ. ಗರುಡಗಂಬಕ್ಕೆ ಹಿತ್ತಾಳೆಯ ತಗಡಿನ ಕವಚ ಹಾಕಲಾಗಿದ್ದು ಸೊಗಸಾಗಿ ಕಾಣುತ್ತದೆ. 

ದೇವಾಲಯ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಪ್ರಾಕಾರ, ಬೃಹತ್ ಮಂಟಪ ಕಾಣಿಸುತ್ತದೆ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು ಮೂರು ಗೋಪುರಗಳಿಂದ ಕೂಡಿದೆ. ಹೀಗಾಗಿ ಇದನ್ನು ತ್ರಿಕೂಟಾಚಲ ಎಂದೂ ಕರೆಯುತ್ತಾರೆ. ಪ್ರಧಾನಗರ್ಭಗೃಹದಲ್ಲಿ ಎತ್ತರದ ಪೀಠದ ಮೇಲೆ ಲಕ್ಷ್ಮಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಆಕೆಯನ್ನೇ ನೋಡುತ್ತಿರುವ ಸೌಮ್ಯ ನರಸಿಂಹನ ವಿಗ್ರಹವಿದ್ದರೆ, ಉಳಿದೆರೆಡು ಗರ್ಭಗೃಹಗಳಲ್ಲಿ ಗರುಡ ಪೀಠದ ಮೇಲೆ ನಿಂತಿರುವ ಲಕ್ಷ್ಮೀನಾರಾಯಣ ಮತ್ತು ಕೊಳಲನೂದುತಿರುವ ಗೋಪಾಲಕೃಷ್ಣ ಮೂರ್ತಿಯಿದೆ.

ದೇವಾಲಯದ ಹೊರಗೆ ಇರುವ ಸಭಾ ಮಂಟಪದಲ್ಲಿ ಶ್ರೀ. ಪ್ರಸನ್ನ ಮಹಾಲಕ್ಷ್ಮೀಯ ಸುಂದರ ವಿಗ್ರಹವಿದೆ. ದೇವಾಲಯದ ಆವರಣದಲ್ಲಿ ಸುಂದರ ಕೆತ್ತನೆಗಳಿಂದ ಕೂಡಿದ ಗಣಪತಿ ಹಾಗೂ ದುರ್ಗಾದೇವಿ, ಆಳ್ವಾರರು, ಆಂಜನೇಯ, ಗರುಡ ಮೂರ್ತಿಗಳೂ ಇವೆ. ಪ್ರಾಕಾರದಲ್ಲಿ ರಥೋತ್ಸವದ ಸಂದರ್ಭದಲ್ಲಿ ಬಳಸುವ ವಿವಿಧ ವಾಹನಗಳನ್ನು ಇಡಲಾಗಿದೆ.

Holenarasipura Ratha, pubba Nakshatra, lakshmi narasimha swamy temple, Hole Narasipura, Hassan, ourtemples.in, kannadaratna.comಈ ದೇವಾಲಯ 630 ವರ್ಷಗಳ ಹಿಂದೆ ನಿರ್ಮಿಸಿದ್ದೆಂದು ಹೇಳಲಾದರೂ ಇಲ್ಲಿರುವ ದೇವರಿಗೆ ಪುರಾಣದ ನಂಟಿದೆ. ದೇವರ್ಷಿಗಳಾದ ಶ್ರೀ. ವಸಿಷ್ಠರೇ ಈ ಪ್ರದೇಶಕ್ಕೆ ಆಗಮಿಸಿ, ದೇವಾಲಯದ ಆವರಣದಲ್ಲಿರುವ ಹಂಗರಮರದ ಬಳಿ ಪರ್ಣಕುಟೀರ ನಿರ್ಮಿಸಿಕೊಂಡು ಶ್ರೀ. ಲಕ್ಷ್ಮೀನರಸಿಂಹನ ಕುರಿತು ತಪಸ್ಸು ಮಾಡಿದ್ದರೆಂದೂ, ನರಸಿಂಹ ವಸಿಷ್ಠರಿಗೆ ಪಾಲ್ಗುಣ ಮಾಸದ ಪೌರ್ಣಿಮೆಯ ಪುಬ್ಬ ನಕ್ಷತ್ರದಲ್ಲಿ ಬೆಳಗಿನ ಝಾವ ದರ್ಶನ ಕೊಟ್ಟಿದ್ದನೆಂಬ ಪ್ರತೀತಿ ಇದೆ, ಹೀಗಾಗಿಯೇ ಇಲ್ಲಿ ಪ್ರತಿ ವರ್ಷ ಪಾಲ್ಗುಣದ ಪುಬ್ಬಾ ನಕ್ಷತ್ರದ ದಿನವೇ ಮಹಾ ರಥೋತ್ಸವ ನಡೆಯುತ್ತದೆ, ಈ ಕ್ಷೇತ್ರಕ್ಕೆ ಭಕ್ತಿವರ್ಧನ ಕ್ಷೇತ್ರ ಎಂಬ ಹೆಸರೂ ಇದೆ ಎಂದು ಅರ್ಚಕರು ಹೇಳುತ್ತಾರೆ.

ದೇವಾಲಯದಲ್ಲಿ ವೈಖಾನಸಾಗಮ ರೀತ್ಯ ನಿತ್ಯ ಪೂಜಾವಿಧಿಗಳು ನಡೆಯುತ್ತವೆ.   ದೇವಾಲಯವು ಬೆಳಗ್ಗೆ 7ರಿಂದ ಮಧ್ಯಾಹ್ನ 1 ಹಾಗೂ ಸಂಜೆ 6ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.

ಮುಖಪುಟ /ನಮ್ಮದೇವಾಲಯಗಳು