ಮುಖಪುಟ /ನಮ್ಮದೇವಾಲಯಗಳು 

ಹಟ್ಟಿಯಂಗಡಿ ಸಿದ್ಧಿ ವಿನಾಯಕ

Hattiyangadi Ganesha, ಹಟ್ಟಿಯಂಗಡಿ ಗಣೇಶ, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳುವಾರಾಹಿ ನದಿಯ  ದಂಡೆಯ ಮೇಲಿರುವ ಪವಿತ್ರ ಪುಣ್ಯ ಕ್ಷೇತ್ರವೇ ಹಟ್ಟಿಯಂಗಡಿ. ಉಡುಪಿಯಿಂದ 45 ಹಾಗೂ ಕುಂದಾಪುರದಿಂದ 8 ಕಿಲೋ ಮೀಟರ್ ದೂರದಲ್ಲಿರುವ ಹಟ್ಟಿಯಂಗಡಿ ಸಿದ್ಧಿವಿನಾಯಕನ ನೆಲೆವೀಡು.

ಆಳುಪರ ಆಳ್ವಿಕೆಗೆ ಒಳಪಟ್ಟು ಆಳುಪ ರಾಜವಂಶದ ಒಂದು ಪಂಗಡದ ರಾಜಧಾನಿಯಾಗಿ ಮೆರೆದ ಈ ಸ್ಥಳ ವಾಣಿಜ್ಯ ಕೇಂದ್ರವಾಗಿಯೂ ಖ್ಯಾತಿ ಪಡೆದಿತ್ತು. ಇಲ್ಲಿ 5-6ನೇ ಶತಮಾನದ ಸಿದ್ಧಿವಿನಾಯಕನ ಮೂರ್ತಿಯಿದೆ. ಬೇಡಿ ಬರುವ ಭಕ್ತರ ಅಭೀಷ್ಠ ಈಡೇರಿಸುತ್ತಿರುವ ವಿಘ್ನನಿವಾರಕ ಸಿದ್ಧಿಶಕ್ತಿಯಾಗಿ ಸಿದ್ಧಿವಿನಾಯಕನಾಗಿದ್ದಾನೆ.

ದೇವಾಲಯ ಮಂಟಪದಾಕಾರದಲ್ಲಿದೆ. ದೇವಾಲಯದ ಮಹಾದ್ವಾರ ಕಲಾತ್ಮಕವಾಗಿದೆ. ಎಡಬಲಗಳಲ್ಲಿ ದ್ವಾರಪಾಲಕರ ಕೃಷ್ಣಶಿಲೆಯ ವಿಗ್ರಹಗಳಿವೆ. ಒಳಗೆ ಚತುರಸ್ರ ಆಕಾರದ ಗರ್ಭಗುಡಿಯಿದೆ. ಭಿತ್ತಿಯ ಹೊರಭಾಗದಲ್ಲಿ ಮುದ್ಗಲ ಪುರಾಣದಲ್ಲಿ ಬರುವ 32 ರೀತಿಯ ಗಣಪನ ವಿಗ್ರಹಗಳಿಂದ ಕೂಡಿದೆ.

Hattiyangadi Ganesha, ಹಟ್ಟಿಯಂಗಡಿ ಗಣೇಶಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಇಲ್ಲಿರುವ ಪ್ರಾಚೀನ ಗಣಪನ ಮೂರ್ತಿಯ ಸೊಬಗಂತೂ ವರ್ಣಿಸಲಸದಳ. ಅಪರೂಪದ ಈ ವಿಗ್ರಹವನ್ನು ಬಾಲಗಣಪನೆಂದು ಹಲವರು ಹೇಳುತ್ತಾರೆ. ಈ ಗಣಪನ ಮುಂದೆ ಕೈಜೋಡಿಸಿ ನಿಂತು ಬೇಡಿದರೆ, ಕೆಲಸ ಆಗುವಂತಿದ್ದರೆ ಮಾತ್ರ ದೇವರು ಸಿರಿಮುಡಿ ಹೂ ಪ್ರಸಾದ ಕರುಣಿಸುತ್ತಾನೆ.  ಈ ವಿಸ್ಮಯ ಕಂಡು ಭಕ್ತರು ನಿಬ್ಬೆರಗಾಗಿದ್ದಾರೆ. ಕೆಲಸ ಆಗುವುದಿಲ್ಲ ಎಂದಾದರೆ ಎಷ್ಟು ಹೊತ್ತು ನಿಂತು ಪ್ರಾರ್ಥಿಸಿದರೂ ಗಣಪ ಪ್ರಸಾದ ಕರುಣಿಸುವುದಿಲ್ಲ.

ಇಲ್ಲಿನ ಸಿದ್ಧಿ ಗಣಪನಿಗೆ ನಿತ್ಯ ಇಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿನಿತ್ಯ ಅಷ್ಟದ್ರವ್ಯಾತ್ಮಕ ಗಣಹೋಮ ನಡೆಯುವುದು ಇಲ್ಲಿನ ವೈಶಿಷ್ಟ್ಯ. ಹಿಂದೆ ಇಲ್ಲಿದ್ದ ಪುರಾತನ ದೇವಾಲಯ ಹೇಗಿತ್ತೆಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈಗಿರುವ ದೇವಾಲಯವನ್ನು ಮೊದಲಿಗೆ 1924ರಲ್ಲಿ ಗಣಪಯ್ಯ ಭಟ್ಟರು ಜೀರ್ಣೋದ್ಧಾರ ಮಾಡಿದ ದಾಖಲೆಗಳಿವೆ. ಕಳೆದ 50 ವರ್ಷಗಳಲ್ಲಿ ದೇವಾಲಯ ಪ್ರಸಿದ್ಧಿಗೆ ಬಂದು, ಇಲ್ಲಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ. Hattiyangadi Ganesha, ಹಟ್ಟಿಯಂಗಡಿ ಗಣೇಶದೇವಾಲಯ ಪುನರ್ ನಿರ್ಮಾಣಕ್ಕಾಗಿ 1972ರಲ್ಲಿ ರಚಿಸಿದ ಸಮಿತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತು.

ಈಗ ಇಲ್ಲಿ ವಿನಾಯಕ ಅತಿಥಿಗೃಹ, ಯಾಗ ಮಂಟಪ, ಸುಸಜ್ಜಿತ ಅಡುಗೆ ಕೋಣೆ ಮತ್ತು ಭೋಜನ ಶಾಲೆಯಿದೆ. ಗೋಶಾಲೆ, ಸಭಾಭವನ, ನವಗ್ರಹ ಗುಡಿಗಳನ್ನೂ ನಿರ್ಮಿಸಲಾಗಿದೆ. ಭೋಜನಶಾಲೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಧರ್ಮದರ್ಶಿಗಳು, ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ, ಕುಂದಾಪುರ ತಾಲೂಕು, 576283 ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು