ಮುಖಪುಟ /ನಮ್ಮದೇವಾಲಯಗಳು  

ಹಲವು ವೈಶಿಷ್ಟ್ಯಗಳ ಹಾಸನಾಂಬಾ ದೇವಾಲಯ

2016ರ ಅಕ್ಟೋಬರ್ 20ರಿಂದ ನ.1ರವಗೆ ದೇವಿಯ ದರ್ಶನ

*ಟಿ.ಎಂ. ಸತೀಶ್

Hasanambe, Hasanambe Devei and Sri Siddeswara Temple, hassan, ಹಾಸನ ಶ್ರೀ ಹಾಸನಾಂಬೆ ದೇವಾಲಯ, ಶ್ರೀ ಸಿದ್ದೇಶ್ವರ ದೇವಾಲಯ. ಹಾಸನ, ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ದೇವಾಲಯ, ದೀಪಾವಳಿ, ಹಾಸನಾಂಬೆ, ಕನ್ನಡರತ್ನ.ಕಾಂ. ಟಿ.ಎಂ. ಸತೀಶ್, ತುರುವೇಕೆರೆ ಸತೀಶ್, ಕನ್ನಡರತ್ನ ಸತೀಶ್, T.M. Satish, Turuvekere Satishಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಹಾಸನ ಜಿಲ್ಲೆಯ ಕೇಂದ್ರ ಸ್ಥಳ ಹಾಸನ ಕೂಡ ಮಹಿಮಾನ್ವಿತವಾದ ನಗರ. ಇಲ್ಲಿರುವ ಹಾಸನಾಂಬೆ ನೂರಾರು ವರ್ಷಗಳಿಂದ ಹಾಸನವನ್ನು ಪೊರೆಯುತ್ತಿದ್ದಾಳೆ. ಆದರೆ ಈ ದೇವಿಯ ದರ್ಶನ ಮಿಕ್ಕೆಲ್ಲ ದೇವಾಲಯಗಳಂತೆ ನಿತ್ಯ ದೊರೆಯುವುದಿಲ್ಲ. ವರ್ಷಕ್ಕೊಮ್ಮೆ ಅದೂ 10-12 ದಿನ ಮಾತ್ರ ಲಭ್ಯವಾಗುತ್ತದೆ. ಇದೇನಿದು ವರ್ಷದಲ್ಲಿ 10-12 ದಿನ ಮಾತ್ರವೇ ಎನ್ನುತ್ತೀರಾ.. ಇದು ಅಚ್ಚರಿ ಎನಿಸಿದರೂ ಸತ್ಯ. ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ಮಧ್ಯಾಹ್ನ ಬಾಗಿಲು ತೆರೆಯುವ ಈ ದೇವಾಲಯವನ್ನು ಕಾರ್ತೀಕ ಮಾಸದ ಬಲಿಪಾಡ್ಯಮಿಯ ಮಾರನೆ ದಿನ ಬೆಳಗ್ಗೆ ಮುಚ್ಚಲಾಗುತ್ತದೆ. ಮತ್ತೆ ಈ ದೇವಿಯ ದರ್ಶನ ಒಂದು ವರ್ಷದ ನಂತರವಷ್ಟೇ.

ಈ 10-12 ದಿನಗಳಲ್ಲಿ ದೇವಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇಕೆ ದೇಶಾದ್ಯಂತದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಎಲ್ಲ ಭಕ್ತರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲು ಹಾಗೂ ಯಾತ್ರಿಕರಿಗೆ ಸಕಲ ಅನುಕೂಲ ಕಲ್ಪಿಸಿಕೊಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತದೆ.

Hasanambe, Hasanambe Devei and Sri Siddeswara Temple, hassan, ಹಾಸನ ಶ್ರೀ ಹಾಸನಾಂಬೆ ದೇವಾಲಯ, ಶ್ರೀ ಸಿದ್ದೇಶ್ವರ ದೇವಾಲಯ. ಹಾಸನ, ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ದೇವಾಲಯ, ದೀಪಾವಳಿ, ಹಾಸನಾಂಬೆ, ಕನ್ನಡರತ್ನ.ಕಾಂ. ಟಿ.ಎಂ. ಸತೀಶ್, ತುರುವೇಕೆರೆ ಸತೀಶ್, ಕನ್ನಡರತ್ನ ಸತೀಶ್, T.M. Satish, Turuvekere Satishಹಾಸನ ಎಂಬ ಹೆಸರು ಹೇಗೆ ಬಂತು: ಈ ಊರಿಗೆ ಹಾಸನ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆ ಹಲವು ಕಥೆಗಳಿವೆ. ಸ್ಥಳಪುರಾಣದ ರೀತ್ಯ ಹಾಸನ ಎಂಬ ಹೆಸರು ಸಿಂಹಾಸನಪುರವೆಂಬ ಪೂರ್ವನಾಮದಿಂದ ಬಂದಿದೆ. ದ್ವಾಪರ ಯುಗದಲ್ಲಿ ಈ ಸ್ಥಳ ಮಧ್ಯಮ ಪಾಂಡವ ಅರ್ಜುನನ ಮೊಮ್ಮಗ ಜನಮೇಜಯನ ಸ್ಥಳವೆಂಬ ಪ್ರತೀತಿ ಇದೆ. ಬ್ರಿಟಿಷ್ ಅಧಿಕಾರಿಯೊಬ್ಬರು ಸಿಂಹಾಸನಪುರಿ ಎಂಬ ಹೆಸರು ಹೇಳಲು ಕಷ್ಟ ಪಡುತ್ತಿದ್ದ ಕಾರಣ ಆರಂಭದ ಸಿಂಹವನ್ನು ಅಂತ್ಯದ ಪುರಿ ಎಂಬುದನ್ನು ಬಿಟ್ಟು ಹಾಸನ ಎಂದು ಕರೆಯುತ್ತಿದ್ದನಂತೆ ಹೀಗಾಗಿ ಈ ಊರಿನ ಹೆಸರು ಹಾಸನ ಎಂದಷ್ಟೇ ಉಳಿದುಕೊಂಡಿದೆ ಎಂದು ಕೆಲವರು ಹೇಳುತ್ತಾರೆ.

ಆದರೆ ಬಹುತೇಕರು ಇಲ್ಲಿರುವ ಹಾಸನಾಂಬೆಯ ದೇವಾಲಯದಿಂದಾಗಿ ಈ ಊರಿಗೆ ಹಾಸನ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಇದಕ್ಕೆ ಶಾಸನಗಳ ಪುಷ್ಟಿಯನ್ನೂ ನೀಡುತ್ತಾರೆ. ಹಾಸನ ಬಳಿಯ ಕುದರೆಗುಂಡಿ ಗ್ರಾಮದಲ್ಲಿ ಸಿಕ್ಕಿರುವ 1140ರ ಕಾಲದ ವೀರಗಲ್ಲಿ ಹಾಸನದ ಉಲ್ಲೇಖ ಇದೆಯಂತೆ. ಹೀಗಾಗಿ 11ನೇ ಶತಮಾನದಲ್ಲೇ ಈ ಊರಿಗೆ ಹಾಸನ ಎಂಬ ಹೆಸರಿತ್ತು ಎಂಬುದು ಅರಿವಾಗುತ್ತದೆ. ಇಲ್ಲಿರುವ ದೇವಿ ಹಾಸನಾಂಬೆ. ಸಪ್ತಮಾತೃಕೆಯರಲ್ಲಿ ಒಬ್ಬಳೆಂದು ಹೇಳಲಾಗುತ್ತದೆ.

ಒಮ್ಮೆ ಸಪ್ತಮಾತೆಯರು ವಾರಣಾಸಿಯಿಂದ ದಕ್ಷಿಣ ಭಾರತಕ್ಕೆ ಆಕಾಶ ಮಾರ್ಗದಲ್ಲಿ ಬರುತ್ತಿರುವಾಗ ಈ ಪ್ರದೇಶದ ರಮಣೀಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ ಇಳಿಯುತ್ತಾರೆ. ಕೆಲ ಕಾಲ ಅಲ್ಲೇ  ನೆಲೆಸಲು ನಿರ್ಧರಿಸುತ್ತಾರೆ, ಇವರಲ್ಲಿ ಆರು ಮಾತೆಯರು ಹಾಸನದಲ್ಲೂ ಏಳನೇ ಮಾತೃಕೆ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬ ಸ್ಥಳದಲ್ಲಿ ಕೆಂಚಾಂಬ ಎಂಬ ಹೆಸರಿನಿಂದಲೂ ನೆಲೆಗೊಂಡರೆಂಬುದು ಈ ಜಿಲ್ಲೆಯಲ್ಲಿರುವ ಜನಜನಿತ ಕಥೆ.

Hasanambe, Hasanambe Devei and Sri Siddeswara Temple, hassan, ಹಾಸನ ಶ್ರೀ ಹಾಸನಾಂಬೆ ದೇವಾಲಯ, ಶ್ರೀ ಸಿದ್ದೇಶ್ವರ ದೇವಾಲಯ. ಹಾಸನ, ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ದೇವಾಲಯ, ದೀಪಾವಳಿ, ಹಾಸನಾಂಬೆ, ಕನ್ನಡರತ್ನ.ಕಾಂ. ಟಿ.ಎಂ. ಸತೀಶ್, ತುರುವೇಕೆರೆ ಸತೀಶ್, ಕನ್ನಡರತ್ನ ಸತೀಶ್, T.M. Satish, Turuvekere Satishಸುಮಾರು 11ನೆಯ ಶತಮಾನದಲ್ಲಿ ಚೋಳರಸರ ಅಧಿಪತಿಯಾದ ಬುಕ್ಕಾನಾಯಕ ಇಲ್ಲಿ ಕೋಟೆ ಮತ್ತು ಮಾರುಕಟ್ಟೆಯನ್ನು ಕಟ್ಟಿಸಿದ ಎಂದು ತಿಳಿದುಬರುತ್ತದೆ. ಬಳಿಕ 12ನೇ ಶತಮಾನದಲ್ಲಿ ಈ ಸ್ಥಳ ಸಂಜೀವ ಕೃಷ್ಣಪ್ಪ ನಾಯಕ ಎಂಬ ಪಾಳೆಯಗಾರನಿಗೆ ಸೇರಿತೆಂದು ಇತಿಹಾಸದಿಂದ ತಿಳಿಯಬರುತ್ತದೆ.

ಕೃಷ್ಣಪ್ಪ ನಾಯಕ ಒಮ್ಮೆ ತನ್ನ ಪರಿವಾರದೊಂದಿಗೆ ಕೋಟೆಯಿಂದ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಹೆಬ್ಬಾಗಿಲು ಪ್ರವೇಶಿಸಿ ಓಡಿಹೋಯಿತಂತೆ. ಇದನ್ನು ಅಪಶಕುನ ಎಂದು ತಿಳಿದ ನಾಯಕರು ಚಿಂತಾಕ್ರಾಂತರಾಗುತ್ತಾರೆ. ರಾತ್ರಿ  ನಾಯಕನಿಗೆ ಸ್ವಪ್ನದಲ್ಲಿ ದರ್ಶನಕೊಟ್ಟ ಹಾಸನಾಂಬೆ ಆ ಸ್ಥಳದಲ್ಲಿ ಕೋಟೆ ಹಾಗೂ ದೇಗುಲ ಕಟ್ಟುವಂತೆ ಸೂಚಿಸಿದಳಂತೆ, ದೇವಿಯ ಆಣತಿಯಂತೆ ಕೋಟೆ ಹಾಗೂ ದೇಗುಲ ಕಟ್ಟಿಸಿದ ಕೃಷ್ಣಪ್ಪ ನಾಯಕರು, ಹಾಸನಾಂಬೆಯೆಂದು ಕರೆದರೆಂದು ಹಾಸನಾಂಬೆ ಇರುವ ಊರಿಗೆ ಹಾಸನವೆಂದು ಹೆಸರಿಟ್ಟರಂತೆ.

ಮತ್ತೊಂದು ಕಥೆ ರೀತ್ಯ ಅತ್ತೆ ಕಾಟದಿಂದ ಬೇಸತ್ತ ಸೊಸೆ ಇಲ್ಲಿ ನಿತ್ಯ ಬಂದು ದೇವಿಯ ದರ್ಶನ ಪಡೆಯುತ್ತಿದ್ದಳು, ತನ್ನ ನೋವು ಹೇಳಿಕೊಳ್ಳುತ್ತಿದ್ದಳು, ಒಮ್ಮೆ ಅವಳನ್ನುಅನುಸರಿಸಿ ಬಂದ ಅತ್ತೆ ತನ್ನ ಸೊಸೆ ದೇವಿಯೊಂದಿಗೆ ಮಾತನಾಡುವುದನ್ನು ಕಂಡು ಆಕೆಯ ತಲೆಗೆ ಕುಕ್ಕಿದಾಗ ಆಕೆ ಕಲ್ಲಾದಳೆಂಬ ಕಥೆಯೂ ಇದೆ. ಇದಕ್ಕೆ ಪುಷ್ಟಿಯಾಗಿ ಇಲ್ಲೊಂದು ಕಲ್ಲಿದೆ ಎನ್ನುತ್ತಾರೆ. ಆದರೆ ಇದಕ್ಕೆ ಸ್ಪಷ್ಟ  ಆಧಾರವಿಲ್ಲ.


ದೇವಿಯ ಮಹಿಮೆ: ಹುತ್ತ ರೂಪದಲ್ಲಿ ಇಲ್ಲಿ ನೆಲೆಸಿರುವ ಹಾಸನಾಂಬಾ ದೇವಿಯನ್ನು ಸಾಂಕೇತಿಕವಾಗಿ ಕುಂಭ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಹೆಣ್ಣು ದೇವತೆಗಳಂತೆ ಮುಖವಾಡಗಳನ್ನು ಮಾಡಿ ಅಲಂಕರಿಸಲಾಗುತ್ತದೆ. ಆದರೆ ದೇವಾಲಯ ಬಾಗಿಲು ತೆರೆಯುವ ಮೊದಲ ದಿನ ಮಾತ್ರ ಯಾವುದೇ ಅಲಂಕಾರಗಳಿಲ್ಲದೆ ಮೂಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಾರನೇ ದಿನದಿಂದ ಜಿಲ್ಲಾ ಖಜಾನೆಯಿಂದ ಆಭರಣ ತಂದು ಅಲಂಕರಿಸಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ಬೆಳಗ್ಗೆ ಬಾಗಿಲು ಹಾಕುವಾಗ ಹಚ್ಚಿಡುವ ದೀಪ ಮುಂದಿನ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಎಂಬುದು ನಂಬಿಕೆ. ಹಿಂದೆ ಇಲ್ಲಿ ಮೂರು ಪಾತ್ರೆಗಳಲ್ಲಿ ಮಾಡಿಡುತ್ತಿದ್ದ ಎಡೆ ಮುಂದಿನ ವರ್ಷದವರೆಗೂ ಬಿಸಿಯಾಗೇ ಇರುತ್ತಿತ್ತು. ಅದನ್ನೇ ಪ್ರಸಾದ ಎಂದು ನೀಡುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಆ ಪದ್ಧತಿ ನಿಂತು ಹೋಗಿದೆಯಂತೆ.

ವರ್ಷಕ್ಕೊಮ್ಮೆ ಮಾತ್ರವೇ ಬಾಗಿಲು ತೆರೆಯುವುದರಿಂದ ಬಾಗಿಲು ತೆರೆದ ಕೂಡಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಅದಕ್ಕೆ ಎರಡು ಕಾರಣ ಇದೆಯಂತೆ. ಒಂದು ವರ್ಷವಿಡೀ ಬಾಗಿಲು ಹಾಕುವ ಕಾರಣ ಬಾಗಿಲು ತೆಗೆದ ಕೂಡಲೇ ದೇವಿಯ ನೋಟದ ಶಕ್ತಿ ತಡೆದುಕೊಳ್ಳುವ ಶಕ್ತಿ ಭಕ್ತಿರಿಗೆ ಇರುವುದಿಲ್ಲವಂತೆ ಹೀಗಾಗಿ ದೇವಾಲಯದ ಮುಂದೆ ಬಾಳೆಯ ಕಂದು ಕಡಿದು ದೃಷ್ಟಿ ನಿವಾರಣೆ ಮಾಡುತ್ತಾರಂತೆ. ಮತ್ತೊಂದು ವೈಜ್ಞಾನಿಕ ಕಾರಣ, ದೇವಾಲಯದಲ್ಲಿ ಹುತ್ತ ಇರುವ ಕಾರಣ ಹಾಗೂ ವರ್ಷ ಪೂರ್ತಿ ಮುಚ್ಚಿರುವ ಕಾರಣ ಹಾವುಗಳು ಇತ್ಯಾದಿ ಇರುವ ಅಪಾಯವೂ ಇರುತ್ತದೆ. ಹೀಗಾಗಿ ಆರಂಭದಲ್ಲಿ ವಾದ್ಯಗಳ ಶಬ್ದ ಮಾಡಿ ನಂತರ ದೇಗುಲಕ್ಕೆ ಭಕ್ತರನ್ನು ಬಿಡಲಾಗುತ್ತದೆ ಎನ್ನಲಾಗಿದೆ.   ಹಾಸನಾಂಬೆ ಶಕ್ತಿದೇವತೆಯಾದರೂ ಇಲ್ಲಿ ಪ್ರಾಣಿಬಲಿ ನಡೆಯುವುದಿಲ್ಲ. ಜೊತೆಗೆ ದೇವಾಲಯದ ಸುತ್ತಮುತ್ತ ಇರುವ ಮನೆಗಳವರು ದೇವಾಲಯ ತೆರೆದಿರುವ ಅಷ್ಟೂ ದಿನ ಮನೆಯಲ್ಲಿ ಒಗ್ಗರಣೆ ಸಿಡಿಸಿವುದಿಲ್ಲ.

ವರ್ಷಕ್ಕೊಮ್ಮೆ ಮಾತ್ರ ತೆರೆಯುವುದೇಕೆ
: ಈ ದೇವಾಲಯವನ್ನು ವರ್ಷಕ್ಕೊಮ್ಮೆ ಮಾತ್ರವೇ ತೆರೆಯುವುದೇಕೆ ಎಂಬುದಕ್ಕೆ ಸೂಕ್ತ ಸಮಜಾಯಿಷಿ ಇಲ್ಲ. ಆದರೆ, ದೀಪಾವಳಿಯ ಸಂದರ್ಭದಲ್ಲಿ ತೆರೆಯುವ ಈ ದೇವಾಲಯದ ಜೊತೆ ದೀಪಾವಳಿ ಹಬ್ಬದ ನಂಟಂತೂ ಇದೆ. ಬ್ರಹ್ಮನ ವರ ಬಲದಿಂದ ಮದಾಂಧನಾದ ಅಂಧಕಾಸುರನೆಂಬ ರಾಕ್ಷಸ ಲೋಕ ಕಂಟಕನಾಗುತ್ತಾನೆ. ಆ ರಕ್ಕಸನ  ವಧೆಗೆ ಪರಶಿವ ಸಿದ್ಧನಾಗುತ್ತಾನೆ. ಅಂಧಕಾಸುರನೊಂದಿಗಿನ ಕಾಳಗದಲ್ಲಿ ಆತನ ಮೈಯಿಂದ ಕೆಳಗೆ ಬಿದ್ದ ರಕ್ತದ ಪ್ರತಿ ಹನಿಯಿಂದಲೂ ಒಬ್ಬೊಬ್ಬ ಅಂಧಕಾಸುರ ಹುಟ್ಟುತ್ತಿರುತ್ತಾನೆ. ಅವನ ರಕ್ತ ನೆಲಕ್ಕೆ ಬೀಳುವುದನ್ನು ತಡೆಯುವ ಸಲುವಾಗಿ ತನ್ನ ಬಾಯಿಯಿಂದ ಶಿವನು ಒಬ್ಬ ಶಕ್ತಿಯನ್ನು (ಯೋಗೇಶ್ವರಿ) ಸೃಷ್ಟಿಸಿದನಂತೆ. ಇತರ ದೇವತೆಗಳೂ ಕೂಡ ತಮ್ಮ ತಮ್ಮ ಶಕ್ತಿಯಿಂದ ಆರು ದೇವಿಯರನ್ನು ಸೃಷ್ಟಿಸಿದರು. ಅವರೇ ಸಪ್ತಮಾತೃಕೆಯರು ಎನ್ನಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಅಂಧಕಾಸುರನ ಸಂಹರಿಸಿದ್ದರಿಂದ ಆ ಸಂದರ್ಭದಲ್ಲಿ ಮಾತ್ರ ದೇವಾಲಯ ತೆರೆಯಲಾಗುತ್ತದೆ ಎನ್ನುತ್ತಾರೆ. ಹಾಸನಾಂಬೆ ದೇವಾಲಯದ ದ್ವಾರವನ್ನು ಪ್ರವೇಶ ಮಾಡುತ್ತಿದ್ದಂತೆ ಶ್ರೀ ಸಿದ್ದೇಶ್ವರಸ್ವಾಮಿ ದೇವರ ದರ್ಶನ ಆಗುತ್ತದೆ. ಇಲ್ಲಿನ ಶ್ರೀ ಸಿದ್ದೇಶ್ವರಸ್ವಾಮಿ  ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೂಪದಲ್ಲಿದ್ದಾನೆ. ಗಣಪತಿಯ ಗುಡಿಯೂ ಇಲ್ಲಿದೆ.

ಮುಖಪುಟ /ನಮ್ಮದೇವಾಲಯಗಳು