ಮುಖಪುಟ /ನಮ್ಮದೇವಾಲಯಗಳು

ಹಾರನಹಳ್ಳಿ ಚನ್ನಕೇಶವ, ಸೋಮೇಶ್ವರ ದೇವಾಲಯ

*ಟಿ.ಎಂ.ಸತೀಶ್

ಹಾರನಹಳ್ಳಿ ಚನ್ನಕೇಶವ ದೇವಾಲಯ, Haranahalli channakeshavaಕಲೆಗಳ ನಾಡು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಅಥವಾ ಹಾರ್ನಳ್ಳಿ ಚನ್ನಕೇಶವ ಹಾಗೂ ಸೋಮೇಶ್ವರರು ನೆಲೆಸಿಹ ಪುಣ್ಯಭೂಮಿ.

ಅರಸೀಕೆರೆಯಿಂದ ದಕ್ಷಿಣಕ್ಕೆ ಹಾಸನ ಅರಸೀಕೆರೆ ರಸ್ತೆಯಲ್ಲಿ 8 ಕಿ. ಮೀ. ದೂರದಲ್ಲಿರುವ ಈ ಊರಿಗೆ ಇದ್ದ ಪ್ರಾಚೀನ ಹೆಸರು ಹಾರುವನ ಹಳ್ಳಿ. ಹಾರುವ ಅಂದರೆ ಬ್ರಾಹ್ಮಣ ಎಂದರ್ಥ ಅಂದರೆ ಇದು ಹಿಂದೆ ಅಗ್ರಹಾರವಾಗಿತ್ತು. ಶಾಸನಗಳಲ್ಲಿ ಈ ಊರಿಗೆ ಲಕ್ಷ್ಮೀನರಸಿಂಹಪುರವೆಂದು ಹೆಸರಿದ್ದ ಬಗ್ಗೆ ಉಲ್ಲೇಖಗಳಿವೆ.

13ನೆಯ ಶತಮಾನದಲ್ಲಿ ಇಮ್ಮಡಿನರಸಿಂಹನ ಸೋದರಿ ಸೋಮಲದೇವಿಯು ಇಲ್ಲಿ ಸೋಮನಾಥಪುರವೆಂಬ ಅಗ್ರಹಾರವನ್ನು ನಿರ್ಮಿಸಿದಳು ಎಂದು ತಿಳಿದುಬರುತ್ತದೆ.

ಹಾರ್ನಹಳ್ಳಿಯಲ್ಲಿ ಹಲವು ದೇವಾಲಯಗಳಿವೆ. ಇವುಗಳ ಪೈಕಿ ಹೊಯ್ಸಳರ ಕಾಲಕ್ಕೆ ಸೇರಿದ ಚನ್ನಕೇಶವ ದೇವಾಲಯ ಮತ್ತು ಸೋಮೇಶ್ವರ ದೇವಾಲಯಗಳು ಪ್ರಮುಖವಾದ್ದು.

ಕೇಶವ ದೇವಾಲಯವನ್ನು 1234ರಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ, ಗೋಪಣ್ಣ ಎಂಬ ಸಹೋದರರು ತಮ್ಮ ತಂದೆಯ ನೆನಪಿಗಾಗಿ ಕಟ್ಟಿಸಿ ಇದರಲ್ಲಿ ಲಕ್ಷ್ಮೀನರಸಿಂಹ ವಿಗ್ರಹವನ್ನು ಪ್ರತಿಷ್ಠೆಮಾಡಿದರೆಂದು ಇಲ್ಲಿರುವ ಶಾಸನ ತಿಳಿಸುತ್ತದೆ.

ಎಲ್ಲ ಹೊಯ್ಸಳ ದೇವಾಲಯಗಂತೆ ಎತ್ತರವಾದ ಜಗತಿಯ ಮೇಲೆ ನಿರ್ಮಿತವಾಗಿರುವ ಈ ದೇವಾಲಯ  ತ್ರಿಕೂಟಾಚಲ. ಮೂರು ಗೋಪುರ, ಮೂರು ಗರ್ಭಗೃಹವಿರುವ ಈ ದೇವಾಲಯದ ಮಧ್ಯದ ಗರ್ಭಗುಡಿಯ ಮೇಲೆ ಸುಂದರವಾದ ಹಾಗೂ ಕಲಾತ್ಮಕವಾದ ಕೆತ್ತನೆಗಳಿಂದ ಕೂಡಿದ ಗೋಪುರವಿದೆ.

ದೇವಾಲಯದ ಹೊರ ಭಿತ್ತಿಯ ಬುಡದಲ್ಲಿ ಆನೆ, ಕುದುರೆ, ಲತಾ ಸುರುಳಿಗಳು, ಮಕರ, ಹಂಸಗಳ ಸಾಲುಗಳಿವೆ. ಮಧ್ಯದ ಪಟ್ಟಿಕೆಯನ್ನು ಶಿಲ್ಪಿ ಹಾಗೆಯೇ ಬಿಟ್ಟಿದ್ದಾನೆ.

ನಕ್ಷತ್ರಾಕಾರದ ಜಗಲಿಯ ಪ್ರದಕ್ಷಿಣಾ ಪಥದಲ್ಲಿ ಸಾಗಿದರೆ ದೇವಾಲಯದ ಬಿತ್ತಿಗಳಲ್ಲಿರುವ ಶಿಲ್ಪಕಲಾ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳಬಹುದು. ಭಿತ್ತಿಗಳಲ್ಲಿರುವ ಸುಂದರ ದೇವತಾ ವಿಗ್ರಹಗಳು, ದಶಾವತಾರ, ಮಹಾಭಾರತದ ಪ್ರಸಂಗಗಳು, ಬ್ರಹ್ಮ, ಸರಸ್ವತಿ, ಮಹಿಷಮರ್ದಿನಿ ಮೊದಲಾದ ಕೆತ್ತನೆಗಳು ಬೇಲೂರು, ಹಳೇಬೀಡಿನ ದೇವಾಲಯವನ್ನೇ ನೆನಪಿಸುತ್ತವೆ.

Haranahalli someswara temple, ಹಾರನಹಳ್ಳಿ ಸೋಮೇಶ್ವರ ದೇವಾಲಯಮಧ್ಯದ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹ ಮತ್ತು ವೇಣುಗೋಪಾಲರ ಸುಂದರ ಮೂರ್ತಿಗಳಿವೆ. ಇಲ್ಲಿ ನಿತ್ಯಪೂಜೆ ಜರುಗುತ್ತದೆ. ನವರಾತ್ರಿ, ವೈಕುಂಠ ಏಕಾದಶಿ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಇಲ್ಲಿರುವ ಮತ್ತೊಂದು ಸುಂದರ ದೇವಾಲಯ ಸೋಮೇಶ್ವರ ಸ್ವಾಮಿಯದು. ನೋಡಲು ಕೇಶವ ದೇವಾಲಯದಂತೆ ಇರುವ ಈ ದೇವಾಲಯದಲ್ಲಿ ಕೂಡ ಮುಖಮಂಟಪ, ಸುಖನಾಸಿ, ನವರಂಗ ಹಾಗೂ ಗರ್ಭಗೃಹವಿದೆ. ಪ್ರವೇಶದ ಮೇಲ್ಭಾಗದಲ್ಲಿ ಬಸವನ ವಿಗ್ರಹವಿದೆ. ನವರಂಗದ ಭುವನೇಶ್ವರಿಗಳು ವೈವಿಧ್ಯಮಯವಾಗಿದ್ದು, ಕಲಾತ್ಮಕತೆಯಿಂದ ಕಂಗೊಳಿಸುತ್ತಿವೆ.

ಊರಿನ ರಕ್ಷಣೆಗಾಗಿ 1070ರಲ್ಲಿ ಸೋಮೇಶ್ವರ ಎಂಬ ಹೊಯ್ಸಳ ದೊರೆ ಕೋಟೆಯನ್ನು ಕಟ್ಟಿಸಿದನೆಂದು ಶಾಸನಗಳು ಹೇಳುತ್ತವೆ. ಈಗಲೂ ಇಲ್ಲಿ ಕೋಟೆಯ ಅವಶೇಷ ಮತ್ತು ಸೋಮೇಶ್ವರ ತನ್ನ ಮಗಳಾದ ನಾಗರ್ತಿ ಹೆಸರಿನಲ್ಲಿ ಕಟ್ಟಿಸಿದ ಕೆರೆ ನೋಡಬಹುದಾಗಿದೆ.

ಮುಖಪುಟ /ನಮ್ಮ ದೇವಾಲಯಗಳು