ಮುಖಪುಟ /ನಮ್ಮದೇವಾಲಯಗಳು 

ಹರಳೂರು ವೀರಭದ್ರೇಶ್ವರ ದೇವಾಲಯ

*ಟಿ.ಎಂ.ಸತೀಶ್

Haraluru Veerabhadra swamyತುಮಕೂರು ಬಳಿಯ ಕ್ಯಾತ್ಸಂದ್ರ ಮಾರ್ಗವಾಗಿ ಸಾಗಿದರೆ 15 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟಗ್ರಾಮ ಹರಳೂರು. ಇಲ್ಲಿ 600 ವರ್ಷಗಳ ಇತಿಹಾಸ ಇರುವ ವೀರಭದ್ರದೇವರ ದೇವಾಲಯವಿದೆ. ಈ ವೀರಭದ್ರ ದೇವರಿಗೆ ಪುದುವಟ್ಟು ಇಟ್ಟ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ದೇವಾಲಯದ ಅರ್ಚಕರು ತಿಳಿಸುತ್ತಾರೆ.

ವೀರಭದ್ರನ ಅವತಾರದ ಬಗ್ಗೆ ಒಂದು ಕಥೆ ಇದೆ. ದಕ್ಷ ರಾಜನ ಮಗಳು ಶಿವ ಸತಿ ದಾಕ್ಷಾಯಿಣಿ ತನ್ನ ಪತಿಗೆ ಆದ ಅವಮಾನ ಸಹಿಸಲಾರದೆ ಯಜ್ಞಕುಂಡದಲ್ಲಿ ಬಿದ್ದು ದಗ್ಧವಾಗಿ ಹೋದಾಗ ಕೋಪಗೊಂಡ ಶಿವನ ಅಂಶದಿಂದ ಹುಟ್ಟಿದವನೇ ಈ ವೀರಭದ್ರ. ವೀರಭದ್ರ ದಕ್ಷ ಸಂಹಾರ ಮಾಡಿ, ಧರ್ಮೋತ್ಥಾನ ಮಾಡಿದನೆಂದು ತಿಳಿದುಬರುತ್ತದೆ.

Veerabhadra Jateಹೀಗೆ ಶಿವನ ಅಂಶನಾದ ವೀರಭದ್ರನಿಗೆ ಇಲ್ಲಿ ಸುಂದರವಾದ ದೇವಾಲಯ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ವೀರಖಡ್ಗವನ್ನು ಮೇಲೆ ಎತ್ತಿ ಹಿಡಿದು ವಿಜಯೋತ್ಸವ ಆಚರಿಸುತ್ತಿರುವ 6 ಅಡಿ ಎತ್ತರದ ವೀರಭದ್ರನ ಸುಂದರ ಕೃಷ್ಣ ಶಿಲೆಯ ವಿಗ್ರಹವಿದೆ. ಸುತ್ತಲೂ ಇರುವ ಪ್ರಭಾವಳಿಯಲ್ಲೂ ಕಲಾತ್ಮಕತೆ ಕೆತ್ತನೆ ಇದೆ. ಈ ವಿಗ್ರಹದಲ್ಲಿ ಒಂದು ವಿಶೇಷವಿದೆ. ದೇವಾಲಯದ ಹಿಂಭಾಗದಲ್ಲಿ ವೀರಭದ್ರನಿಗೆ ಹೆಣೆದ ಜಡೆಯಿದೆ. ಹೀಗಾಗೇ ಜಡೆ ವೀರಭದ್ರ ಎಂದೂ ಈ ದೇವರನ್ನು ಕರೆಯುತ್ತಾರೆ.

ಈ ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದ್ದು ನೂತನ ಸಿಮೆಂಟ್ ಕಟ್ಟಡವಾಗಿ ಪರಿವರ್ತಿಸಲಾಗಿದೆ. ಒಳಭಾಗದಲ್ಲಿ ಹಳೆಯ ಕಲ್ಲಿನ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ದೇವಾಲಯ ಪ್ರವೇಶಿಸಲು ಮೆಟ್ಟಿಲುಗಳಿವೆ. ದೇಗುಲದ ಮೇಲೆ ಗೋಪುರವಿದ್ದು ಗೋಪುರದ Haralur veerabhadra devalayaಗೂಡುಗಳಲ್ಲಿ ನಂದಿ ಸಮೇತನಾದ ಶಿವಪಾರ್ವತಿ, ಗಣಪತಿ ಹಾಗೂ ಷಣ್ಮುಖನ ಪ್ರತಿಮೆಗಳಿವೆ. ನಾಲ್ಕೂ ಮೂಲೆಯಲ್ಲಿ ನಂದಿಯ ಗಾರೆ ಪ್ರತಿಮೆಗಳಿವೆ ಜೊತೆಗೆ ಶಿವಗಣಗಳ ಮೂರ್ತಿಗಳೂ ಇವೆ.

ದೇವಾಲಯದಲ್ಲಿ 35 ಅಡಿ ಎತ್ತರದ ಬೃಹದಾಕಾರದ ಮರದಿಂದ ನಿರ್ಮಿಸಿದ ರಥವಿದ್ದು ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.innin

ಮುಖಪುಟ /ನಮ್ಮದೇವಾಲಯಗಳು