ಮುಖಪುಟ /ನಮ್ಮದೇವಾಲಯಗಳು

ಹನುಮಂತನಗರ ಕುಮಾರಸ್ವಾಮಿ ದೇವಾಲಯ

*ಟಿ.ಎಂ.ಸತೀಶ್

Harohara, subramanya, Kumaraswamy, kannadaratna.com, ಕನ್ನಡರತ್ನ.ಕಾಂ.ಬಸವನಗುಡಿ ಪಕ್ಕದಲ್ಲೇ ಇರುವ ಹನುಮಂತನಗರ ಹಲವು ಸುಂದರ ದೇವಾಲಯಗಳ ಬೀಡು. ಇಲ್ಲಿರುವ ಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿ ದೇವಾಲಯ ಬಹಳ ಪ್ರಖ್ಯಾತ. ಈ ದೇವಸ್ಥಾನದ ಇತಿಹಾಸ ಸುಮಾರು 400 ವರ್ಷಗಳಿಗೂ ಮಿಗಿಲು.

ಹನುಮಂತನಗರದ ಎತ್ತರವಾದ ಬೆಟ್ಟದ ಮೇಲೆ ಈಗಿರುವ ಭವ್ಯ ದೇವಾಲಯದ ಜಾಗದಲ್ಲಿ ಹಿಂದೆ ಮಾಗಡಿ ಕೆಂಪೇಗೌಡರು ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ, ಪುಟ್ಟದೊಂದು ಮಂಟಪ ಕಟ್ಟಿಸಿದ್ದರಂತೆ. ನಂತರದ ದಿನಗಳಲ್ಲಿ ನರಹರಿರಾಯರು ಲಿಂಗದ ಮುಂಭಾಗದಲ್ಲಿ ಮಂಟಪ ಹಾಗೂ ಗೋಪುರ ಕಟ್ಟಿಸಿದರಂತೆ. ಹೀಗಾಗೇ ಈ ಗುಡ್ಡಕ್ಕೆ ನರಹರಿರಾಯರ ಗುಡ್ಡ ಎಂಬ ಹೆಸರು ಬಂದಿದೆ.

ಈ ದೇವಾಲಯಕ್ಕೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇನಾಂ ಜಮೀನು ನೀಡಿ ಅಭಿವೃದ್ಧಿ ಪಡಿಸಿದರು.

ganapathi, kannadaratna.com, ಕನ್ನಡರತ್ನ.ಕಾಂ.ಈ ಪುಣ್ಯಕ್ಷೇತ್ರದಲ್ಲಿ ಉದ್ಭವ ಲಿಂಗ ಹಾಗೂ ಉದ್ಭವ ಆದಿಶೇಷನ ವಿಗ್ರಹವಿದೆ. ದೇವಾಲಯಕ್ಕೆ ಹೋಗಲು 500ಕ್ಕೂ ಹೆಚ್ಚು ಮೆಚ್ಚಿಲುಗಳಿವೆ. ಮೆಟ್ಟಿಲು ಏರುತ್ತಾ ಸಾಗಿದರೆ ಮಾರ್ಗಮಧ್ಯದಲ್ಲಿ ಉದ್ಭವ ಆದಿಶೇಷನ ಗುಡಿ ಇದೆ. ಇಲ್ಲಿ ಆದಿಶೇಷನ ದರ್ಶನ ಪಡೆದು ವಿರಮಿಸಿಕೊಂಡು ಬೆಟ್ಟವೇರಿದರೆ, 108 ಅಡಿ ಎತ್ತರದ 7 ಅಂತಸ್ತಿನ ಸುಂದರವಾದ ರಾಜಗೋಪುರವುಳ್ಳ ಭವ್ಯ ದೇವಾಲಯವಿದೆ.

ದೇವಾಲಯದ ಗೋಪುರ ರಮಣೀಯವಾಗಿದೆ. ದೇವಾಲಯದ ಗರ್ಭಗೃಹದಲ್ಲಿ ಸುಂದರವಾದ ಕುಮಾರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 1956ರ ಆಷಾಡ ಮಾಸದಲ್ಲಿ ಸುಬ್ರಹ್ಮಣ್ಯನ ಜನ್ಮನಕ್ಷತ್ರವಾದ ಕೃತ್ತಿಕೆ ನಕ್ಷತ್ರವಿದ್ದಾಗಲೇ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪಕ್ಕದಲ್ಲಿ ಶಿವಲಿಂಗ ಹಾಗೂ ಪಾರ್ವತಿ ಅಮ್ಮನವರ ಗುಡಿ, ಗಾಯತ್ರಿಯೂ ಇದೆ. ಪಕ್ಕದಲ್ಲೇ ಗಣಪತಿಯ ದೇವಾಲಯ ಹಾಗೂ ನವಗ್ರಹಗಳ ಗುಡಿ ಇದೆ. ಬೆಳ್ಳಿಯ ಕವಚದ ಅಲಂಕಾರದಲ್ಲಿ ವಿಗ್ರಹಗಳ ಸೊಬಗು ನೂರ್ಮಡಿಗೊಳ್ಳುತ್ತದೆ.

shivalinga, kannadaratna.com, ಕನ್ನಡರತ್ನ.ಕಾಂ.ಪ್ರತಿವರ್ಷ ಆಷಾಡ ಮಾಸದಲ್ಲಿ ಆಡಿಕೃತ್ತಿಕೆ ಉತ್ಸವ ನಡೆಯುತ್ತದೆ. ತಮಿಳುನಾಡಿನಿಂದಲೂ ಭಕ್ತರು ಆಗಮಿಸುತ್ತಾರೆ. ಕಾವಡಿ ಹೊತ್ತು ಹರೋ ಹರ ಎಂದು ದೇವರಿಗೆ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಕಾರ್ತೀಕ ಮಾಸದಲ್ಲಿ ಇಲ್ಲಿ ಲಕ್ಷ ದೀಪೋತ್ಸವವೂ ಜರುಗುತ್ತದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಪಡಿ ಉತ್ಸವ ನಡೆಯುತ್ತದೆ. ಪ್ರತಿಮಂಗಳವಾರ ಹಾಗೂ ಷಷ್ಠಿಯಂದು ಹಾಗೂ ಸುಬ್ರಹ್ಮಣ್ಯ ಷಷ್ಠಿಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಮೆಟ್ಟಿಲುಗಳನ್ನು ಏರುವ ಮೊದಲೇ ಪಂಚಮುಖ ವಿನಾಯಕನ ದರ್ಶನವಾಗುತ್ತದೆ. ದೇವಾಲಯದ ಎದುರು ಅಶ್ವತ್ಥಕಟ್ಟೆ ಹಾಗೂ ಆಂಜನೇಯನ ದೇವಸ್ಥಾನವಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು