ಮುಖಪುಟ /ನಮ್ಮದೇವಾಲಯಗಳು   

ಭೂತ ಭವಿಷ್ಯತ್ ವರ್ತಮಾನ ಹೇಳುವ 3ತಲೆ ಬಸವ

Hampi basava, ಭೂತ, ಭವಿಷ್ಯತ್ ವರ್ತಮಾನ ತಿಳಿಸುವ ಹಂಪೆಯ ನಂದಿಭೂತಕಾಲದಲ್ಲಿ ಏನಾಯಿತು ಎಂಬುದು ಹಲವರಿಗೆ ಗೊತ್ತು? ವರ್ತಮಾನದಲ್ಲಿ ಏನಾಗುತ್ತಿದೆ ಎಂಬುದು ಕೆಲವರಿಗೆ ಮಾತ್ರ ಗೊತ್ತು? ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಸಿದ್ಧಪುರುಷರಿಗೆ, ಯೋಜನಾ ತಜ್ಞರಿಗೆ ಗೊತ್ತು?

 ಹಿಂದೆ ಘಟಿಸಿದ್ದು ಆಗಿ ಹೋಯಿತು. ಮುಂದೆ ಆಗುವುದು ಕಲ್ಪನೆ ಮಾತ್ರ ಹೀಗಾಗಿ ಈ ಎರಡೂ ಓಕೆ. ಆದರೆ, ವರ್ತಮಾನ ಹೀಗೇಕೆ? ಎಂಬ ಪ್ರಶ್ನೆ ಕೆಲವರದು.

 ಅಯ್ಯೋ ಬಿಡಿ ಸ್ವಾಮಿ ಕಾಲ ಕೆಟ್ಟಿಹೋಯಿತು ಎಂಬ ಮಾತನ್ನು ನಾವು ಸರ್ವೇ ಸಾಮಾನ್ಯವಾಗಿ ಜನರ ಬಾಯಿಂದ ಕೇಳುತ್ತೇವೆ. ನಿಜವಾಗಿಯೂ ಕೆಟ್ಟಿರುವುದು ಕಾಲವೋ ಇಲ್ಲ ನಾವೋ? ಈ ಪ್ರಶ್ನೆಗೆ ಆತ್ಮಾವಲೋಕನದಿಂದ ಮಾತ್ರ ಉತ್ತರ ಸಿಕ್ಕೀತು.

 ಇರಲಿ ಬಿಡಿ. ಮಂತ್ರಕ್ಕಿಂತ ಉಗುಳೇ ಹೆಚ್ಚಾಯಿತು. ಈಗ ಮೂಲ ವಿಷಯಕ್ಕೆ ಬರೋಣ. ಮರೆಯಲಾಗದ ಕರುನಾಡ ಸಾಮ್ರಾಜ್ಯ ವಿಜಯನಗರ. ಈ ಸಂಸ್ಥಾನದ ಪ್ರಮುಖ ಪಟ್ಟಣ ಹಂಪಿ. ಹಂಪಿಯ ಪಂಪಾನದಿ ತೀರದಲ್ಲಿ  ನೆಲೆಸಿಹ ವಿರೂಪಾಕ್ಷನ ಮಹಿಮೆಯೂ ಅಪಾರ.

 ಹಂಪೆ ಇಂದು ಹಾಳು ಕೊಂಪೆಯಾಗಿದೆ. ನಾವು ಇತಿಹಾಸದ ಪುಟಗಳಲ್ಲಿ ಓದಿರುವಂತೆ ಇಂದಲ್ಲಿ ಮುತ್ತು, ರತ್ನ, ವಜ್ರ ವೈಢೂರ‍್ಯಾದಿಗಳನ್ನು ಮಾರಾಟ ಮಾಡುವವರಿಲ್ಲ.

 ಕಲಾ ಶ್ರೀಮಂತಿಕೆಯಿಂದ ಮೆರೆದ ನಾಡಿನಲ್ಲಿ  ಹಲವು ನೂರಾರು ವಿಗ್ರಹಗಳು ಭಗ್ನಗೊಂಡಿವೆ. ಇಲ್ಲಿನ ಹಜಾರ ರಾಮ ದೇವಾಲಯವೊಂದರಲ್ಲೇ ಸಾವಿರಾರು ರಾಮದೇವರ ಸುಂದರ ಶಿಲ್ಪಕಲಾ ಮೂರ್ತಿಗಳು ಭಗ್ನಗೊಂಡಿವೆ. ಹಂಪೆ ಹಾಳದ ಬಗೆ ಇತಿಹಾಸದ ಪುಟದಲ್ಲಿ  ಅಚ್ಚಳಿಯದೆ ಉಳಿದು ಹೋಗಿದೆ.

 ಹಂಪೆಯಲ್ಲಿ  ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಉಗ್ರನರಸಿಂಹ, ವಿಠಲ ಮೊದಲಾದ ವಿಖ್ಯಾತ ದೇವಾಲಯಗಳಿದ್ದರೂ ಇಲ್ಲಿ  ಪೂಜಾದಿಗಳು ನಡೆಯುವುದಿಲ್ಲ. ಕಾರಣ ಇಲ್ಲಿರುವ ಎಲ್ಲ ಮೂರ್ತಿಗಳೂ ಭಿನ್ನವಾಗಿವೆ.

 ನಿತ್ಯ ಪೂಜೆ ನಡೆಯುವುದು ವಿರೂಪಾಕ್ಷ, ಭುವನೇಶ್ವರಿ, ಪಂಪಾದೇವಿಯರಿಗೆ ಮಾತ್ರ. ಜಲಕಂಠೇಶ್ವರನಿಗೆ ಸ್ವಾಮೀಜಿಯೊಬ್ಬರು ಬಂದು ದಿನಕ್ಕೊಮ್ಮೆ ನಾಲ್ಕರಳು ಹೂ ಹಾಕಿ ಹೋಗುತ್ತಾರಷ್ಟೇ..

 ಹಂಪೆಯಲ್ಲಿ  ಭಗ್ನವಾದ ಮೂರ್ತಿಗಳ ಸಂಖ್ಯೆ ಸಹಸ್ರಾರು. ಇಂಥ ಭಗ್ನಗೊಂಡ ಮೂರ್ತಿಗಳ ಪೈಕಿ ವಿರೂಪಾಕ್ಷ ದೇವಾಲಯದ ಎದುರು ಈಗ ಪ್ರದರ್ಶನಕ್ಕಷ್ಟೇ ಇಡಲಾಗಿರುವ ಮೂರು ತಲೆಯ ನಂದಿಯೂ ಒಂದು.

 ಸಾಮಾನ್ಯವಾಗಿ ನಾವು ಎಲ್ಲ  ಈಶ್ವರ ದೇವಾಲಯಗಳಲ್ಲೂ ನಂದಿಯನ್ನು ಕಾಣುತ್ತೇವೆ. ಆದರೆ, ಮೂರು ತಲೆಯ ನಂದಿಯ ವಿಗ್ರಹ ಅಪರೂಪ. ಅಪರೂಪವೇನು ವಿರಳ ಎಂದೇ ಹೇಳಬಹುದು.

 ಇಂಥ ಅಪರೂಪದ ಮೂರ್ತಿಯ ಕಲ್ಪನೆಗೆ ಹಲವಾರು ಆಧಾರಗಳಿವೆ. ಈ ನಂದಿಯನ್ನು  ತ್ರಿಮೂರ್ತಿಗಳಿಗೆ ಹೋಲಿಸುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಎಂದೂ ಕೆಲವರು ಕರೆಯುತ್ತಾರೆ.

 ಆದರೆ, ಇದು ತ್ರಿಮೂರ್ತಿಗಳನ್ನು ಬಿಂಬಿಸುವ ಶಿಲ್ಪವಲ್ಲ. ಇದು ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ತಿಳಿಸುವ ಸಲುವಾಗಿ ಕೆತ್ತಲಾದ ಮೂರ್ತಿ ಎಂಬುದು ಹಲವರ ವಾದ.

 ಈಗ ಈ ವಿಗ್ರಹ ಭಿನ್ನವಾಗಿರುವುದರಿಂದ ಪೂಜೆ ಇಲ್ಲ. ಆದರೆ, ಇಲ್ಲಿನ ಜನ ಹೇಳುವಂತೆ ವಿಗ್ರಹದ ಎಡ ತುದಿಯಲ್ಲಿರುವುದು ಭೂತಕಾಲ, ಮಧ್ಯದಲ್ಲಿರುವುದು ಭವಿಷ್ಯ ಹಾಗೂ ಕೊನೆಯಲ್ಲಿರುವುದು ವರ್ತಮಾನ.

 ಭೂತ -ಭವಿತವ್ಯಗಳು ಇಲ್ಲಿ  ನೆಟ್ಟಗಿವೆ. ಆದರೆ ವರ್ತಮಾನವೇ ಹಾಳಾಗಿದೆ ಎಂಬ ಸೂಚನೆ ನೀಡುವಂತೆ ಮೂರನೆಯ ನಂದಿ ಭಗ್ನಗೊಂಡಿದೆ.

 ವರ್ತಮಾನವನ್ನು ಬಿಂಬಿಸುವ ನಂದಿಯ ಮೂರ್ತಿ ಭಗ್ನವಾಗಿರುವುದರಿಂದಲೇ ಇಂದು ವರ್ತಮಾನ ಹಾಳಾಗಿರುವುದು ಎಂದು ಕೆಲವರು ಹೇಳುತ್ತಾರೆ. ಇಲ್ಲ. ಇಲ್ಲ. ವರ್ತಮಾನ ಹಾಳಾಗಿರುವುದರ ದ್ಯೋತಕವಾಗಿಯೇ ನಂದಿ ಭಗ್ನಗೊಂಡಿದೆ ಎಂಬುದು ಮತ್ತೆ ಕೆಲವರ ವಾದ.

 ವಾದ ಏನೇ ಆದರೂ, ವಾದದ ಸರಣಿ ಭಿನ್ನವೇ ಆದರೂ ಸುಂದರವಾದ ಮೂರು ತಲೆಯ ನಂದಿಯ ವಿಗ್ರಹ ಭಿನ್ನವಾಗಿರುವುದಂತೂ ನೂರಕ್ಕೆ ನೂರು ಸತ್ಯ. ಹಾಗೆಯೇ ವರ್ತಮಾನವೂ ಹಾಳಾಗಿದೆ ಎಂಬುದು. ಈ ಬಗ್ಗೆ ನೀವೇನಂತೀರಿ? ವರ್ತಮಾನ ಚೆನ್ನಾಗಿದೆ ಎಂದು ಸಮರ್ಥಿಸಲು ನೀವು ಸಿದ್ಧರಿದ್ದೀರಾ?

ಮುಖಪುಟ /ನಮ್ಮದೇವಾಲಯಗಳು