|
ಶಿಲ್ಪಕಲೆಗಳ ನೆಲೆವೀಡು *ಟಿ.ಎಂ. ಸತೀಶ್
ಬೆಟ್ಟಗುಡ್ಡಗಳಿಂದಾವರಿಸಿ, ವಿಶಾಲ ಕಣಿವೆಗಳಿರುವ ಈ ರಮ್ಯತಾಣ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ವಿಸ್ತಾರಗೊಂಡಿತು. ಒಂದನೇ ಬಲ್ಲಾಳ ಬೇಲೂರನ್ನೂ, ವಿಷ್ಣವರ್ಧನ ವಿಷ್ಣುಸಮುದ್ರವನ್ನೂ ನೆಲೆವೀಡಾಗಿ ಮಾಡಿಕೊಂಡರೂ ಒಂದುಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿದ್ದ ದೋರಸಮುದ್ರ ಹಳೇಬೀಡು ಎಂಬ ಅಭಿದಾನದಿಂದ ಜಗದ್ವಿಖ್ಯಾತವಾಯ್ತು.
ಹೆಸರು
ಹಳೆಯ ಬೀಡಾದರೂ,
ಇಲ್ಲಿನ ಶಿಲ್ಪಕಲೆಗಳು ನವನವೀನ,
ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಯಗಳಿವೆಯಾದರೂ,
ಅಲ್ಲಾಉದ್ದೀನನ ದಂಡನಾಯಕ ಮಲ್ಲಿಕ್ ಕಾಫೂರ್ ಸೇರಿದಂತೆ ಹಲವು
ಮುಸಲ್ಮಾನ ದೊರೆಗಳ ದಾಳಿಯ ಬಳಿಕ ಈ ಹೊತ್ತು,
ಸುಸ್ಥಿತಿಯಲ್ಲಿ ಉಳಿದಿರುವುದು ಹೊಯ್ಸಳೇಶ್ವರ ದೇವಾಲಯ ಮಾತ್ರ.
ಕರ್ನಾಟಕದ ಪರಂಪರೆಯ ಪ್ರತೀಕವಾಗಿರುವ ಈ ದೇವಾಲಯ ಹೊಯ್ಸಳ ದೊರೆಗಳ ಕಲಾಶ್ರೀಮಂತಿಕೆಯ ದ್ಯೋತಕವಾಗಿ ಹಾಗೂ ಕಲೋಪಾಸನೆಗೆ ಸಾಕ್ಷಿಯಾಗಿವೆ. ಗಟ್ಟಿಯಾದ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯ ಅತ್ಯಂತ ವಿಸ್ತಾರವಾಗಿದ್ದು, 700 ಅಡಿಗಳಿಗೂ ಹೆಚ್ಚು ಉದ್ದವಾಗಿರುವ ಭಿತ್ತಿಗಳ ಮೇಲೆ ಸಾವಿರಾರು ದೇವತೆಗಳ ಕೆತ್ತನೆ, ಮಹಾಭಾರತ, ರಾಮಾಯಣ, ಶೈವಪುರಾಣ, ಸಮುದ್ರ ಮಂಥನದ ಉಬ್ಬುಶಿಲ್ಪಗಳಿವೆ. ಆನೆ, ಹಂಸ, ಬಳ್ಳಿ ಸುರುಳಿ,ಕುದುರೆ, ಕಥಾ ಪಟ್ಟಿಗೆಗಳು ಅತ್ಯಂತ ಮನೋಹರವಾಗಿವೆ. ಆನೆಯ ಪಟ್ಟಿಕೆಯೊಂದರಲ್ಲೇ ಸುಮಾರು 2 ಸಾವಿರ ಆನೆಗಳ ಕೆತ್ತನೆಗಳಿವೆ.
ಊರಿನ ಬೆಣ್ಣೆ ಗುಡ್ಡಕ್ಕೆ
ಹೊಂದಿಕೊಂಡಂತೆ ಪೂರ್ವದ ಕಡೆ ಇರುವ ವಿಶಾಲ ಬಯಲಿನಲ್ಲಿ ಹೊಯ್ಸಳರ ಅರಮನೆಯಿತ್ತು.
ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಹಾಸನದಿಂದ 31 ಕಿ.ಮೀ. ದೂರದಲ್ಲಿರುವ ಹಳೇಬೀಡು ಬೇಲೂರಿಗೆ ಕೇವಲ 17 ಕಿ.ಮೀಟರ್ ಅಂತರದಲ್ಲಿದೆ. ಸುತ್ತಮುತ್ತ ನೋಡಬೇಕಾದ ಸ್ಥಳಗಳೆಂದರೆ ಬೆಳವಾಡಿ, ಬಸ್ತಿಹಳ್ಳಿ, ಜೈನಬಸದಿಗಳು. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||