ಮುಖಪುಟ /ನಮ್ಮದೇವಾಲಯಗಳು

ಕರುನಾಡ ಕರವೀರಪುರ ಗೊರವನಹಳ್ಳಿ

*ಟಿ.ಎಂ.ಸತೀಶ್

Goravanahalli Lakshmi temple, ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನತುಮಕೂರು ಜಿಲ್ಲೆ ಧನದೇವತೆ, ಚೈತನ್ಯದಾಯಿನಿ ಮಹಾಲಕ್ಷ್ಮಿಯ ತವರೂ ಹೌದು. ತುಮಕೂರಿನಿಂದ 35 ಕಿಲೋಮೀಟರ್ ಹಾಗೂ ಕೊರಟಗೆರೆಯಿಂದ ಕೇವಲ 10 ಕಿಲೋ ಮೀಟರ್‌ಗಳ ದೂರದಲ್ಲಿ ಜಯಮಂಗಲಿ ನದಿಯ ದಂಡೆಯಲ್ಲಿರುವ ಗೊರವನಹಳ್ಳಿ ಕರುನಾಡ ಕರವೀರಪುರವೆಂದೇ ಖ್ಯಾತವಾಗಿದೆ.

ಕಾಮಿತ ಫಲವೀಯುತ್ತಾ ಕಲಿಯುಗದ ಕಾಮಧೇನು ಎಂದೇ ಖ್ಯಾತಳಾದ ವರಮಹಾಲಕ್ಷ್ಮೀ ನೊಂದ ಬೆಂದು ಬರುವ ಭಕ್ತರ ನೋವು ನೀಗುವ ಅಮೃತಮಯಿಯಾಗಿ ಇಲ್ಲಿ ನೆಲೆಸಿದ್ದಾಳೆ. ತೀತಾ ಜಲಾಶಯದ ಬುಡದಲ್ಲಿರುವ ಪರಮ ಪವಿತ್ರವಾದ ಗೊರವನಹಳ್ಳಿಯಲ್ಲಿ  ತಾಯಿ ಮಹಾಲಕ್ಷ್ಮೀ ಗೋಚರಿಸಿದ್ದು, 20ನೆ ಶತಮಾನದ ಕೊನೆಯ ಭಾಗದಲ್ಲಿ. ಚಿಕ್ಕದೊಂದು ಗುಡಿಯಲ್ಲಿ ಪ್ರತಿಷ್ಠಿತಳಾಗಿ ಪೂಜಿತಳಾದ ಶ್ರೀಮನ್ನಾರಾಯಣನ ಹೃದಯ ಸಿಂಹಾಸನಾಶ್ವರಿ ಲಕ್ಷ್ಮೀ ತನ್ನ ಭಕ್ತರನ್ನು ಉದ್ದರಿಸುತ್ತಾ, ಇಂದು  ಬೃಹತ್ ದೇಗುಲ ನಿರ್ಮಿಸಲಾಗಿದೆ. ದೇಗುಲದ ಮೇಲೆ ಸುಂದರವಾದ ಗೋಪುರ ನಿರ್ಮಿಸಲಾಗಿದೆ.  ಗೋಪುರದ ಗೂಡುಗಳಲ್ಲಿ ಅಷ್ಟಲಕ್ಷ್ಮಿಯರ ಪ್ರತಿಮೆಗಳಿವೆ. ಗೋಪುರದಲ್ಲಿ ವಿವಿಧ ದೇವತೆಗಳ ಹಾಗೂ ಋಷಿಗಳ ಪ್ರತಿಮೆಗಳಿವೆ.  ನಿತ್ಯವೂ ನೂರಾರು ಭಕ್ತರು ಇಲ್ಲಿ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ   ವರ್ಷಕ್ಕೊಮ್ಮೆ ಜಾತ್ರೆ ನಡೆದರೆ, ಇಲ್ಲಿ ನಿತ್ಯ ಜನಜಾತ್ರೆ. ಸರತಿಯ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವ ಭಕ್ತಕೋಟಿ ಧನ್ಯತಾಭಾವದೊಂದಿಗೆ ದೇಗುಲದಿಂದ ಹೊರಬರುತ್ತಾರೆ..

ಐತಿಹ್ಯ : ಕೇವಲ 25 ವರ್ಷಗಳ ಹಿಂದೆ ಗೊರವನಹಳ್ಳಿ ಬಸ್ ಸೌಕರ್ಯವೂ ಇಲ್ಲದ ಒಂದು ಕುಗ್ರಾಮವಾಗಿತ್ತು. ಕುಗ್ರಾಮ ಪುಣ್ಯಕ್ಷೇತ್ರವಾಗಿದ್ದು ಲಕ್ಷ್ಮೀಕಟಾಕ್ಷವಾದ ಬಳಿಕವಷ್ಟೇ.

Goravanahalli Lakshmi, ಗೊರವನಹಳ್ಳಿ ಲಕ್ಷ್ಮೀರುದ್ರ ರಮಣೀಯ ಪರಿಸರದಲ್ಲಿರುವ ಗೊರವನಹಳ್ಳಿಯಲ್ಲಿ ಲಕ್ಷ್ಮೀ ಬಂದು ನೆಲೆಸಲು ಈ ಹಳ್ಳಿಗೆ ಸೊಸೆಯಾಗಿ ಬಂದ ಮಾತೆ ದಿವಂಗತ ಕಮಲಮ್ಮನವರೇ ಕಾರಣ. ಲಕ್ಷ್ಮೀಕೃಪೆಗೆ ಪಾತ್ರರಾದ ಅವರು, ತಾವೂ ಲಕ್ಷ್ಮಿಯನ್ನು ಪೂಜಿಸಿ, ಇತರರಿಗೂ ಲಕ್ಷ್ಮೀಪೂಜೆಗೆ ಪ್ರೇರೇಪಿಸಿದರು. ಅವರ ತ್ಯಾಗ ಹಾಗೂ ಸೇವಾರ್ಚನೆಯ ಫಲವಾಗಿಯೇ ಇಂದು ಗೊರವನಹಳ್ಳಿಲಕ್ಷ್ಮೀಕ್ಷೇತ್ರವಾಗಿ, ಸುಕ್ಷೇತ್ರವಾಗಿ ಸುಪ್ರಸಿದ್ಧವಾಗಿದೆ.

ಗೊರವನಹಳ್ಳಿಯ ಲಕ್ಷ್ಮೀ ಟ್ರಸ್ಟ್ ಕೇವಲ ಧಾರ್ಮಿಕ ಚಟುವಟಿಕೆಗಳಿಗಷ್ಟೇ ತನ್ನನ್ನು ಸೀಮಿತಪಡಿಸಿಕೊಳ್ಳದೆ ಸಾಮಾಜಿಕ ಕಾರ್ಯದಲ್ಲೂ ತೊಡಗಿದೆ. ಟ್ರಸ್ಟ್ ಈಗ ಗೊರವನಹಳ್ಳಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನೂ ಆರಂಭಿಸಿದೆ. ನೇತ್ರ ತಪಾಸಣಾ ಶಿಬಿರ, ಸಾಮೂಹಿಕ ವಿವಾಹಗಳನ್ನೂ ಏರ್ಪಡಿಸುತ್ತದೆ. ಶ್ರೀಕ್ಷೇತ್ರದಲ್ಲಿ  ಮದುವೆ, ಮುಂಜಿ  ಮಾಡಲೆಂದೇ ಕಲ್ಯಾಣ ಮಂಟಪವನ್ನೂ ನಿರ್ಮಿಸಲಾಗಿದೆ.

ಇಲ್ಲಿಗೆ ನಿತ್ಯ ಬರುವ ಭಕ್ತಕೋಟಿಗೆ ಗೊರವನಹಳ್ಳಿ ಲಕ್ಷ್ಮೀಟ್ರಸ್ಟ್ ಊಟದ ವ್ಯವಸ್ಥೆಯನ್ನೂ ಮಾಡಿದೆ. ಶುಚಿಯಾದ ಪಾಕಶಾಲೆಯಲ್ಲಿ ಅತ್ಯಾಧುನಿಕ ಪರಿಕರಗಳ ಮೂಲಕ ರುಚಿಕರವಾದ ಅಡುಗೆ ಮಾಡಲಾಗುತ್ತದೆ. ಧನದೇವತೆ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಿರುವ  ಈ ಕ್ಷೇತ್ರದಲ್ಲಿ ನಿತ್ಯ ದಾಸೋಹಕ್ಕೆ ಯಾವುದೇ ಕೊರತೆ ಇಲ್ಲ.

ಲಕ್ಷದೀಪೋತ್ಸವ : ಪ್ರತಿವರ್ಷ ಕಾರ್ತೀಕ ಮಾಸದಲ್ಲಿ  ಗೊರವನಹಳ್ಳಿಯ ಲಕ್ಷ್ಮೀ ಸನ್ನಿಧಿಯಲ್ಲಿ  ವೈಭವದಿಂದ ಲಕ್ಷ ದೀಪೋತ್ಸವ ಜರುಗುತ್ತದೆ. ಅಜ್ಞಾನವೆಂಬ ಕತ್ತಲನ್ನು ತೊಡೆದೋಡಿಸಿ ಸುಜ್ಞಾನವೆಂಬ ಬೆಳಕು ಚೆಲ್ಲುವ, ಬದುಕನ್ನೇ ಜ್ಯೋತಿಯಂತೆ ಪ್ರಕಾಶಮಾನಗೊಳಿಸುವ ಈ ದೀಪೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೀಪೋತ್ಸವಕ್ಕೆ ಗೊರವನಹಳ್ಳಿ ನವವಧುವಿನಂತೆ ಅಲಂಕಾರಗೊಳ್ಳುತ್ತದೆ. ಪುಷ್ಪಾಲಂಕಾರದಿಂದ ಕಂಗೊಳಿಸುವ ಕಮಾನು ಮೊದಲಿಗೆ ಭಕ್ತರನ್ನು ನಗು ನಗುತ್ತಾ ಬರಮಾಡಿಕೊಂಡರೆ, ಜಯಮಂಗಲಿ ನದಿಯ ಮೇಲಿಂದ ಬೀಸುವ ತಂಗಾಳಿ ಚಾಮರ ಸೇವೆ ಮಾಡುತ್ತದೆ. ದೂರದೂರದ ಊರುಗಳಿಂದ ಬರುವ ಭಕ್ತಜನ ಲಕ್ಷ್ಮೀ ದೇವಿಯ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಾರೆ.

ಲಕ್ಷದೀಪೋತ್ಸವದ ಅಂಗವಾಗಿ ಕಳಶಪೂಜೆಯೂ ನಡೆಯುತ್ತದೆ. ಮಹಾಲಕ್ಷ್ಮಿಗೆ ವಿಶೇಷ ಅಲಂಕಾರ ನಡೆಯುತ್ತದೆ. ವೈಕುಂಠ ಪುರವಾಸಿನಿ ಲಕ್ಷ್ಮೀ ನೆಲೆಸಿಹ ಈ ನಾಡಿನಲ್ಲಿ ತಪಃಶಕ್ತಿ ಇದೆ. ಭಕ್ತರಿಗೆ ಚೈತನ್ಯ, ಶಕ್ತಿ ನೀಡುವ ಶಕ್ತಿ ದೇವತೆ ಈ ತಾಯಿ ಎನ್ನುತ್ತಾರೆ ತುಮಕೂರು ಶ್ರೀಕ್ಷೇತ್ರ ಹಿರೇಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು. ನೀವೂ ಗೊರವನಹಳ್ಳಿಗೆ ಬನ್ನಿ ಲಕ್ಷ್ಮೀ ಕೃಪೆಗೆ ಪಾತ್ರರಾಗಿ.

ಮುಖಪುಟ /ನಮ್ಮದೇವಾಲಯಗಳು