ಮುಖಪುಟ /ನಮ್ಮ ದೇವಾಲಯಗಳು  

ಗದಗಿನ ವೀರನಾರಾಯಣ ದೇವಾಲಯ

gadag veeranarayana temple, ಗದಗಿನ ವೀರನಾರಾಯಣ ದೇವಾಲಯ, ಧಾರವಾಡದಿಂದ ಪೂರ್ವಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾಕೇಂದ್ರ. ಹಿಂದೆ ಕ್ರತುಪುರ,  ಬೆಳವಲ ನಾಡು ಎಂದು ಕರೆಸಿಕೊಂಡಿದ್ದ ಈ ಪ್ರಾಂತ್ಯ ಕಾಲಾನಂತರದಲ್ಲಿ ಗದುಗ, ಗದಗು, ಗದಗ ಎಂಬ ಹೆಸರು ಪಡೆಯಿತು.

ವಿಜಯನಗರ ಅರಸರ ಕಾಲದಿಂದ ಗದುಗು ಎಂದೇ ಕ್ಯಾತವಾಗಿದ್ದ ಇಲ್ಲಿ ಹೊಯ್ಸಳರ ಅರಸು ಬಿಟ್ಟಿದೇವ ಕಟ್ಟಿಸಿದ ಶ್ರೀ ವೀರನಾರಾಯಣ ದೇವಾಲಯವಿದೆ. ರಾಮಾನುಜಾಚಾರ್ಯರಿಂದ ವೈಷ್ಣವನಾದ ಬಿಟ್ಟಿದೇವ ತನ್ನ ಗುರುಗಳ ಆಣತಿಯಂತೆ ಕಟ್ಟಿಸಿದ ಐದು ವಿಷ್ಣು ದೇವಾಲಯಗಳ ಪೈಕಿ ಇದೊ ಒಂದು.

ವೀರನಾರಾಯಣ ದೇವಾಲಯ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರದರಸರ ಕಾಲದ ವಾಸ್ತುಶೈಲಿಯನ್ನು ಒಳಗೊಂಡಿದೆ. ಪ್ರವೇಶದ್ವಾರ ವಿಜಯನಗರ ಶೈಲಿಯಲ್ಲಿದ್ದರೆ, ಗರ್ಭಗೃಹ ಹಾಗೂ ಮೇಲ್ಗೋಪುರ ಚಾಲುಕ್ಯರ ಶೈಲಿಯಲ್ಲಿದೆ. ದೇವಾಲಯದ ಮುಂದಿರುವ ಗರುಡಗಂಬ ಹಾಗೂ ರಂಗಮಂಟಪಗಳು ಹೊಯ್ಸಳ ಶೈಲಿಯಲ್ಲಿವೆ.

ಪೂರ್ವಾಭಿಮುಖವಾಗಿರುವ ದೇವಾಲಯ ಪ್ರವೇಶಿಸಿದರೆ ಒಳಗಿರುವ ಸುಂದರ ದೇವಾಲಯಗಳ ಆಧಾರ ಸ್ತಂಭಗಳ ಸೂಕ್ಷ್ಮ ಕೆತ್ತನೆ ಮನಸೆಳೆಯುತ್ತದೆ. ಗದುಗಿನ ನಾರಣಪ್ಪ (ಕುಮಾರವ್ಯಾಸ) ಈ ದೇವಾಲಯದಲ್ಲಿ ಕುಳಿತು  ಗದುಗಿನ ಭಾರತ ಬರೆದನೆಂದೂ ಹೇಳುತ್ತಾರೆ. ದೇವಾಲಯದ ಕೆಲವು ಕಲ್ಲುಗಳಲ್ಲಿ ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಲೋಹದ ಲೇಖನಿಯನ್ನು ಹರಿತ ಮಾಡಿದ ಕುರುಹುಗಳೂ ಇವೆ.

ಗರ್ಭಗೃಹದಲ್ಲಿ ತುಸು ನೀಲಿ ಮಿಶ್ರಿತ ಕಪ್ಪುಶಿಲೆಯಲ್ಲಿ ಸುಂದರವಾಗಿ ಕಡೆಯಲಾಗಿರುವ ವೀರನಾರಾಯಣನ ನಿಂತಿರುವ ಭಂಗಿಯ ಮೂರ್ತಿಯಿದೆ.  ಈ ವಿಗ್ರಹದಲ್ಲಿ ಸೂಕ್ಷ್ಮ ಶಿಲ್ಪಕಲೆಯಿಂದ ಕೂಡಿದ ಪ್ರಭಾವಳಿಯಿದ್ದು ಮೇಲ್ಭಾಗದಲ್ಲಿ ಸಿಂಹಮುಖವಿದೆ.  ದೇವಾಲಯ ಪ್ರಾಕಾರದಲ್ಲಿ  ಲಕ್ಷ್ಮೀನರಸಿಂಹ, ಸರ್ಪೇಶ್ವರ ಇತ್ಯಾದಿ ದೇವಾಲಯಗಳಿವೆ.

gadag veeranarayana temple, ಗದಗಿನ ವೀರನಾರಾಯಣ ದೇವಾಲಯ, ಚಿತ್ರಕೃಪೆ ಗದಗ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಕ್ರತುಪುರ ಎಂದು ಹೆಸರು ಬರಲು ಕಾರಣವೇನು ಎಂಬುದಕ್ಕೆ ಒಂದು ಕಥೆಯಿದೆ. ಈ ಭಾಗದಲ್ಲಿ ಹಿಂದೆ  ಕಪೋತರೋಮನೆಂಬ ರಾಕ್ಷಸನ ಲೋಕಕಂಟಕನಾಗಿದ್ದನಂತೆ. ಗದಗಕ್ಕೆ ಸಮೀಪದಲ್ಲಿರುವ ಕಪ್ಪತ ಎಂಬಲ್ಲಿ ತಪವನ್ನಾಚರಿಸಿದ್ದ ಬ್ರಹ್ಮನ ಮಾನಸ ಪುತ್ರ ಕ್ರತು ರಾಕ್ಷಸನ ಸಂಹಾರಕ್ಕೆ ವಿಷ್ಣುವನ್ನು ಬೇಡಲು, ವಿಷ್ಣು ವೀರನಾರಾಯಣನ ರೂಪದಲ್ಲಿ ಕಾಣಿಸಿಕೊಂಡು ರಾಕ್ಷಸನನ್ನು ಸಂಹರಿಸಿದನಂತೆ. ಹೀಗಾಗಿ ಕೃತುವಿನ ಕೃಪೆಯಿಂದ ನಾರಾಯಣ ಧರೆಗಿಳಿದ ಈ ಸ್ಥಳ ಕ್ರತಪುರವಾಯಿತಂತೆ. ಒಂದು ಕಾಲದಲ್ಲಿ ವಿದ್ಯಾಕೇಂದ್ರವಾಗಿ ಮೆರೆದ ಈ ಪುಣ್ಯಭೂಮಿ ಜನಮೇಜಯ ಸರ್ಪಯಾಗ ಮಾಡಿದ ಕ್ಷೇತ್ರ ಎಂದೂ ಹೇಳುತ್ತಾರೆ. ಇಲ್ಲಿರುವ ಸರ್ಪೇಶ್ವರ ದೇವಾಲಯ ಇದಕ್ಕೆ ಸಾಕ್ಷಿಯಾಗಿದೆ.

ಗದಗಿನಲ್ಲಿ ಅನೇಕ ದೇವಸ್ಥಾನಗಳಿದ್ದು, ಮೂರು ಲಿಂಗಗಳಿರುವ ತ್ರಿಕೂಟೇಶ್ವರ ದೇವಸ್ಥಾನವೂ ಪ್ರಮುಖವಾದುದಾಗಿದೆ. ಇದರ ಮಹಾದ್ವಾರ ಭವ್ಯವಾಗಿದೆ. ಗರ್ಭಗುಡಿಯ ಸುತ್ತ ಸುಂದರ ಶಿಲ್ಪಗಳಿವೆ. ಊರ ಮಧ್ಯದಲ್ಲಿರುವ ಸೋಮೇಶ್ವರ ದೇವಸ್ಥಾನ ಮನಮೋಹಕವಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು