|
ಅರ್ಕೇಶ್ವರನ ಸನ್ನಿಧಿ - ಎಡತೊರೆ ಕ್ಷೇತ್ರ *ಟಿ.ಎಂ.ಸತೀಶ್
ಮೈಸೂರು ಜಿಲ್ಲೆ ಕೃಷ್ಣರಾಜನಗರದ ಹೊರವಲಯದಲ್ಲಿರುವ ಹಳೆಯ ಊರೇ ಎಡತೊರೆ. ಕಾವೇರಿ ಇಲ್ಲಿ ತೊರೆಯಂತೆ ಎಡಕ್ಕೆ ತಿರುಗಿ ಹರಿಯುವ ಕಾರಣ ಈ ಊರಿಗೆ ಎಡತೊರೆ ಎಂದೇ ಹೆಸರಾಗಿದೆ. ಇಲ್ಲಿ ಶ್ರೀ ಅರ್ಕೇಶ್ವರಸ್ವಾಮಿಯ ಪುರಾತನ ದೇವಾಲಯವಿದೆ. ಈ ದೇವಾಲಯವನ್ನು ಮೈಸೂರು ಅರಸು ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರೆಂದೂ, 11ನೆಯ ಶತಮಾನದಲ್ಲಿ ಗಂಗರನ್ನು ಸೋಲಿಸಿ ರಾಜೇಂದ್ರ ಚೋಳ ಈ ಸ್ಥಳವನ್ನು ವಶಪಡಿಸಿಕೊಂಡಿದ್ದನೆಂದು ಇತಿಹಾಸ ಸಾರುತ್ತದೆ. ಈ ಊರು ಪದೇಪದೇ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಅಪಾರ ಹಾನಿ ಅನುಭವಿಸುತ್ತಿತ್ತು. ಸರ್.ಎಂ.ವಿಶ್ವೇಶ್ವರಾಯರ ದೂರದರ್ಶಿತ್ವದ ಫಲವಾಗಿ ಕೃಷ್ಣರಾಜಸಾಗರ ಅಣೆಕಟ್ಟು (ಕೆ.ಆರ್.ಎಸ್) ಕಟ್ಟಿದ ಬಳಿಕ, ಊರಿನ ಒಂದು ಭಾಗ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ಆಗ ಕೃಷ್ಣರಾಜ ಒಡೆಯರು ಹಳೆ ಊರಿಗೆ 3 ಕಿಲೋ ಮೀಟರ್ ದೂರದಲ್ಲಿ 75 ವರ್ಷಗಳ ಹಿಂದೆ ಹೊಸ ಪಟ್ಟಣ ನಿರ್ಮಿಸಿದರು. ಹೀಗಾಗಿ ಈ ಊರಿಗೆ ಕೃಷ್ಣರಾಜನಗರ ಎಂಬ ಹೆಸರು ಬಂದಿದೆ. ಮೈಸೂರು ಮಹಾರಾಜರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ದೇವಾಲಯದಲ್ಲಿ ಕಲ್ಯಾಣ ಮಂಟಪವೂ ಇದ್ದು, ಇಲ್ಲಿ ವಿವಾಹಾದಿ ಶುಭಕಾರ್ಯಗಳೂ ನಡೆಯುತ್ತವೆ. ಸೂರ್ಯಭಗವಂತನು ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಮನಸೋತು, ಶಿವರಾತ್ರಿಯ ದಿನ, ಕಾವೇರಿಯಲ್ಲಿ ಮಿಂದು ಮಡಿಯುಟ್ಟು ಶಿವನನ್ನು ಪೂಜಿಸಿದನಂತೆ, ಶಿವ ಪ್ರತ್ಯಕ್ಷನಾಗಿ ಸ್ವಯಂಭು ಲಿಂಗರೂಪದಲ್ಲಿ ಸೂರ್ಯನಿಗೆ ದರ್ಶನ ನೀಡಿದನಂತೆ. ಹೀಗಾಗಿ ಈ ದೇವರಿಗೆ ಅರ್ಕೇಶ್ವರ ಎಂಬ ಹೆಸರು ಬಂತೆಂಬುದು ಪ್ರತೀತಿ. ಇಂದಿಗೂ ಶಿವರಾತ್ರಿಯ ದಿನ ಸೂರ್ಯೋದಯದ ಕಾಲದಲ್ಲಿ ಪ್ರಥಮ ಸೂರ್ಯಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುತ್ತವೆ. ಸೂರ್ಯಭಗವಾನನ ತಪಸ್ಸಿನ ಫಲವಾಗಿ ಶಿವ ನೆಲೆಸಿದ ಈ ಕ್ಷೇತ್ರದಲ್ಲಿ ರಥಸಪ್ತಮಿಯ ದಿನ ರಥೋತ್ಸವ ಹಾಗೂ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ಜರುಗುತ್ತದೆ. | |||