|
ದುರ್ಗಾಪರಮೇಶ್ವರಿ ದೇವಾಲಯ ವಿದ್ಯಾರಣ್ಯಪುರ *ಟಿ.ಎಂ.ಸತೀಶ್
ಭವ್ಯವಾದ ಸ್ವಾಗತ ಗೋಪುರ ದಾಟಿ ತುಸು ದೂರ ಹೋಗಿ ಬಲಕ್ಕೆ ತಿರುಗಿದರೆ ರಸ್ತೆಗೆ ನೇರವಾಗಿ 7 ಅಂತಸ್ತುಗಳ 108 ಅಡಿ ಎತ್ತರದ ಸುಂದರ ಹಾಗೂ ಕಲಾತ್ಮಕವಾದ ರಾಜಗೋಪುರ ಮನಸೆಳೆಯುತ್ತದೆ. ವಿಜಯನಗರ ಶೈಲಿಯಲ್ಲಿರುವ ಈ ಗೋಪುರದಲ್ಲಿ ರುಂಡಮಾಲಿನಿ, ಮಹಿಷಾಸುರಮರ್ದಿನಿ, ಮಹಾಲಕ್ಷ್ಮೀ, ಅಸುರ ಗಣ ಸೇರಿದಂತೆ ನೂರಾರು ಪುತ್ಥಳಿಗಳಿವೆ. 20 ಅಡಿಗೂ ಹೆಚ್ಚು ಎತ್ತರದ ತೇಗದ ಕಲಾತ್ಮಕ ಬಾಗಿಲುಗಳನ್ನು ಒಳಗೊಂಡ ಮಹಾದ್ವಾರದ ಎರಡೂ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತ ಚಾಮುಂಡೇಶ್ವರಿಯ ಮೂರ್ತಿಗಳಿವೆ. ದೇವಾಲಯದ ಇಕ್ಕೆಲಗಳಲ್ಲಿ ಜಯ ವಿಜಯರ 3 ಅಡಿ ಎತ್ತರದ ಕಲ್ಲಿನ ಶಿಲ್ಪಗಳಿವೆ. ಮಹಾದ್ವಾರ ದಾಟಿ ಮುಂದೆ ಸಾಗಿದರೆ ಎಡಭಾಗದಲ್ಲಿರುವ ಕಂಬದಲ್ಲಿ ಸಿದ್ಧಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ಸಿದ್ಧಿ ವಿನಾಯಕನ ದರ್ಶನವಾಗುತ್ತದೆ. ಮಹಾದ್ವಾರದ ಎದುರು ಇರುವ ಪುಟ್ಟ ಮಂದಿರದಲ್ಲಿ ಬೆಳ್ಳಿಯ ಕವಚಗಳಿಂದ ಅಲಂಕೃತನಾದ ವಿಘ್ನೇಶ್ವರನ ಮಂದಿರವಿದೆ. ಪಕ್ಕದಲ್ಲಿಯೇ ದಕ್ಷಿಣಾಮೂರ್ತಿ, ಹಿಂಭಾಗದಲ್ಲಿ ಸುಬ್ರಹ್ಮಣ್ಯ ಹಾಗೂ ಅಲ್ಲಿಯೇ ಸಮೀಪದಲ್ಲಿ 18 ಭುಜಗಳನ್ನು ಹೊಂದಿರುವ ವಿಜಯದುರ್ಗೆಯ ಮೂರ್ತಿಗಳಿವೆ. ವಿಶಾಲವಾದ ಪ್ರಾಕಾರವನ್ನೊಳಗೊಂಡ ದೇವಾಲಯವನ್ನು ಪ್ರದಕ್ಷಿಣೆ ಹಾಕಿಬಂದರೆ, ಬಲಭಾಗದಲ್ಲಿ ಆಂಜನೇಯ, ನವಗ್ರಹ ಗುಡಿ ಹಾಗೂ ಉತ್ಸವ ಮೂರ್ತಿಯ ಪುಟ್ಟ ದೇವಾಲಯಗಳಿವೆ.
ಪ್ರಾಕಾರವನ್ನು ಒಂದು ಸುತ್ತು ಹಾಕಿ ಪ್ರಧಾನ ದೇವಾಲಯ ಪ್ರವೇಶಿಸಿದರೆ ಮೊದಲಿಗೆ
ಸುಂದರವಾದ ನಾಗಾಭರಣ ಅಲಂಕಾರದಿಂದ ಕಂಗೊಳಿಸುವ ಶಿವಲಿಂಗ ದರ್ಶನವಾಗುತ್ತದೆ.
ಶಿವಲಿಂಗಕ್ಕೆ ಭಕ್ತಿಯಿಂದ ವಂದಿಸಿ ಮುಂದೆ ಬಂದರೆ ಮಧ್ಯದ ಪ್ರಧಾನ ಗರ್ಭಗುಡಿಯಲ್ಲಿ
ಮಹಿಷಾಸುರ ಮರ್ದಿನಿಯ 6 ಅಡಿ ಎತ್ತರದ ಸುಂದರ ಮೂರ್ತಿಯಿದೆ.
ಮನಮೋಹಕವಾದ ದುರ್ಗಪರಮೇಶ್ವರಿಗೆ ನಿತ್ಯ ಪೂಜೆ ನಡೆಯುತ್ತದೆ. ಶುಕ್ರವಾರ, ಮಂಗಳವಾರ ಹಾಗೂ ಭಾನುವಾರ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. 1988ರಲ್ಲಿ ಅರ್ಚಕರಾದ ರಾಮಮೂರ್ತಿಯವರು ಈ ದೇವಾಲಯದ ನಿರ್ಮಾಣಕ್ಕೆ ಹಾಗೂ ಅದರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈಗ ಭಕ್ತಾದಿಗಳ ನೆರವಿನಿಂದ ಟ್ರಸ್ಟ್ ನವರು ದೇವಾಲಯವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿದ್ದಾರೆ. ದೇವಾಲಯದ ನವರಂಗದ ಮೇಲಿನ ಗೋಪುರದಲ್ಲಿ ಕೂಡ ತಾಯಿ ದುರ್ಗೆಯ ಲೀಲೆ ಹಾಗೂ ಮಹಿಮೆ ಸಾರುವ ಗಾರೆಯ ಪ್ರತಿಮೆಗಳಿವೆ. ದೇವಾಲಯದ ಪ್ರಕಾರದಲ್ಲಿ ದೀಪದ ಸ್ತಂಭ ಹಾಗೂ ಗರುಡಗಂಭವೂ ಇದೆ. ಮದುವೆ ಆಗದ ಹೆಣ್ಣುಮಕ್ಕಳು, ನಿರುದ್ಯೋಗಿ ಯುವಕರು, ವಿದ್ಯಾರ್ಥಿಗಳು ಇಲ್ಲಿ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಹರಕೆಯನ್ನು ಹಳದಿ ಚೀಟಿಯಲ್ಲಿ ಬರೆದು ದೇವರಿಗೆ ಕಟ್ಟುತ್ತಾರೆ. ತಮಿಳುನಾಡಿನಿಂದ ಕೂಡ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯಲ್ಲಿ ಇಲ್ಲಿ 9 ದಿನವೂ ವಿಶೇಷ ಪೂಜೆ ನಡೆಯುತ್ತದೆ. | |||