|
ದೇವರಕೆರೆ ದ್ವೀಪದ ಶ್ರೀ ಶ್ರೀನಿವಾಸ ದೇವಾಲಯ *ಲೇಖಕರು: ಜಿ.ಎಸ್.ಶ್ರೀವತ್ಸ
ಬೆಂಗಳೂರು ನಗರದ ಪ್ರಾಚೀನತೆಗೆ ಹಲವು ದೇವಾಲಯಗಳೂ ಸಾಕ್ಷಿಯಾಗಿವೆ. ಇಂಥ ಪುರಾತನ ದೇವಾಲಯಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ವಸಂತಪುರದ ಭೂನ್ನೀಳಾ ವಸಂತನಾಯಕಿ ಸಮೇತ ವಸಂತ ವಲ್ಲಭಸ್ವಾಮಿ ದೇವಾಲಯವೂ ಒಂದು. ಐತಿಹಾಸಿಕವಾಗಿ 1 ಸಾವಿರ ವರ್ಷಗಳ ಭವ್ಯ ಇತಿಹಾಸ ಇರುವ ಈ ಪವಿತ್ರ ಸ್ಥಳದ ಸನಿಹದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ದೇವರಕೆರೆ. ಇಲ್ಲಿ ಮಹಾಲಕ್ಷ್ಮೀ, ಪದ್ಮಾವತಿ ಸಮೇತ ಶ್ರೀ ಶ್ರೀನಿವಾಸಸ್ವಾಮಿಯವರ ಸುಂದರ ದೇವಾಲಯವಿದೆ. ಈ ದೇವಾಲಯ ಇತ್ತೀಚಿನ ನಿರ್ಮಾಣವಾದರೂ, ಇಲ್ಲಿನ ಇತಿಹಾಸ ಮತ್ತು ಮಹಿಮೆ ಬಹು ಪ್ರಾಚೀನವಾದ್ದು. ದೇವರಕೆರೆಯ ಸ್ಥಳ ಮಹಿಮೆಯನ್ನು ತಿಳಿಯಬೇಕಾದರೆ ವಸಂತ ವಲ್ಲಭ ಸ್ವಾಮಿ ದೇವಾಲಯದ ಚರಿತ್ರೆಯತ್ತ ಪಕ್ಷಿನೋಟ ಬೀರಲೇ ಬೇಕು. ಬಹು ಹಿಂದೆ ಹಿಮಾಲಯದಲ್ಲಿ ಬದರೀಕಾಶ್ರಮದಲ್ಲಿದ್ದ ಮಾಂಡವ್ಯ ಮಹಾಮುನಿಗಳು ದಕ್ಷಿಣ ಭಾರತದಲ್ಲಿರುವ ಪವಿತ್ರ ತಾಣಗಳ ದರ್ಶನಕ್ಕಾಗಿ ಮೇಲುಕೋಟೆಗೆ ಪ್ರಯಾಣ ಬೆಳೆಸುತ್ತಾರೆ. ಹೀಗೆ ದಕ್ಷಿಣ ಪಥದಲ್ಲಿ ಸಂಚರಿಸಿ ಚಲುವನಾರಾಯಣಸ್ವಾಮಿ ದರ್ಶನ ಪಡೆದು ಹಿಂತಿರುಗುವ ಸಂದರ್ಭದಲ್ಲಿ ಧ್ಯಾನಮಗ್ನರಾಗಿದ್ದ ಮಾಂಡವ್ಯ ಮಹಾಮುನಿಗಳಿಗೆ ಶ್ರೀ ವಲ್ಲಭರಾಯಸ್ವಾಮಿ ಕಾಣಿಸಿಕೊಂಡು ಬೆಂಗಳೂರಿನ ಕಲ್ಯಾಣಪುರಿಯಲ್ಲಿ ತಾನು ನೆಲೆಸಿರುವುದಾಗಿ ತಿಳಿಸುತ್ತಾನೆ.
ಎಲ್ಲ ದೇವಾಲಯಗಳ ಬಳಿ ಸಾಮಾನ್ಯವಾಗಿ ಕೆರೆ, ತೊರೆ, ಸರೋವರ, ಕಲ್ಯಾಣಿ, ಪುಷ್ಕರಣಿಗಳಿದ್ದರೆ, ಈ ದೇವಾಲಯದ ಸುತ್ತಲೂ ಕೆರೆಯಿದ್ದು ನಡುಗಡ್ಡೆಯಲ್ಲಿ ದೇವಾಲಯವಿದೆ. ಈ ದೇವಾಲಯಕ್ಕೆ ಬರುವ ಭಕ್ತರನ್ನು ವರಮಹಾಲಕ್ಷ್ಮೀ, ಪದ್ಮಾವತಿ ಸಮೇತನಾದ ಶ್ರೀ. ಶ್ರೀನಿವಾಸದೇವರು ಹರಸುತ್ತಾ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾರೆ. ಈ ದೇವಾಲಯದಲ್ಲಿ 12 ದಿನಗಳ ಕಾಲ 12 ಪ್ರದಕ್ಷಿಣೆ ಹಾಕಿದೆ ಮನದ ಬಯಕೆಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ವಯಸ್ಸಾದರೂ ಮದುವೆಯಾಗವರು, ಮದುವೆಯಾಗಿ ಬಹುವರ್ಷಕಳೆದರೂ ಮಕ್ಕಳಾಗದವರು, ವಿದ್ಯಾವಂತರಾಗಿದ್ದೂ ಉದ್ಯೋಗ ದೊರಕದ ನಿರುದ್ಯೋಗಿಗಳು, ವಿವಿಧ ಕಾರಣಗಳಿಂದ ಮನೋಕ್ಲೇಶಕ್ಕೆ ಒಳಗಾದವರು, ಮನೆಕಟ್ಟಲು ಕಷ್ಟಪಟ್ಟವರು ಇಲ್ಲಿ ಬಂದು ದೇವರನ್ನು ಪೂಜಿಸಿ ಪರಿಹಾರ ಕಂಡುಕೊಂಡಿದ್ದಾರೆ. ದೇವರಿಗೆ ನಡೆಯುವ ಕಲ್ಯಾಣೋತ್ಸವದ ಕಂಕಣ ಕಟ್ಟಿಕೊಂಡರೆ ನಲವತ್ತೆಂಟು ದಿನಗಳಲ್ಲಿ ವಿವಾಹ ನಿಶ್ಚಯವಾಗುತ್ತದೆ ಎಂದು ಅರ್ಚಕರು ಹೇಳುತ್ತಾರೆ.
ದೇವಾಲಯದಲ್ಲಿ ಪ್ರತಿ ಪೌರ್ಣಿಮೆಯ ದಿನ ಶ್ರೀ ಸತ್ಯನಾರಾಯಣ ವ್ರತ ವೈಭವದಿಂದ ನಡೆಯುತ್ತದೆ. ಸತ್ಯನಾರಾಯಣ ವ್ರತ ಕಥೆಯಲ್ಲಿ ಶ್ರೀಸತ್ಯನಾರಾಯಣ ಪೂಜೆಯನ್ನು ನದಿ, ಕೆರೆ ತಟದಲ್ಲಿ ಮಾಡುವುದು ಶ್ರೇಷ್ಠ ಎಂಬ ಉಲ್ಲೇಖವಿದೆ. ಇಲ್ಲಿ ಇಡೀ ದೇವಾಲಯವನ್ನು ನೀರು ಸುತ್ತುವರಿದಿದ್ದು ಇಲ್ಲಿ ನಡೆಯುವ ಪೂಜೆ ಅತ್ಯಂತ ಶ್ರೇಷ್ಠ ಎಂದು ಅರ್ಚಕರು ಹೇಳುತ್ತಾರೆ. ದೇವಾಲಯ ನಿರ್ಮಿಸಿದ ಮಹಾವಿಷ್ಣುವಿನ ಪರಮ ಭಕ್ತರಾದ ಶ್ರೀ ಮುನಿರೆಡ್ಡಿ ಅವರು ಈಗ್ಗೆ 6 ವರ್ಷಗಳ ಹಿಂದೆ ಪ್ರಥಮ ಏಕಾದಶಿಯಂದು ವೈಕುಂಠವಾಸಿಗಳಾದರು. ಪ್ರಥಮ ಏಕಾದಶಿಯಂದು ಪ್ರಾಣತ್ಯಾಗ ಮಾಡಿ, ದ್ವಾದಶಿಯಂದು ಸಂಸ್ಕಾರ ನಡೆದರೆ ಅವರಿಗೆ ಪುನರ್ಜನ್ಮವಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಇಂಥ ಪವಿತ್ರದಿನ ನಿಧನಹೊಂದಿದ ಅವರು ಭಗವಂತನ ಸಾನ್ನಿಧ್ಯ ಸೇರಿದ್ದಾರೆಂದೇ ಹಿರಿಯರು ಹೇಳುತ್ತಾರೆ. ದಿವಂಗತ ಮುನಿರೆಡ್ಡಿ ಅವರು ಇಬ್ಬರು ಪುತ್ರರಾದ ಶ್ರೀ. ಎಂ. ರಾಜಪ್ಪರೆಡ್ಡಿ ಹಾಗೂ ಶ್ರೀ.ಎಂ.ಆನಂದರೆಡ್ಡಿ ಅವರು ದೇವಾಲಯದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದಾರೆ. ವಸಂತಪುರ ದೇವಾಲಯದ ಅರ್ಚಕರಾಗಿದ್ದ ಕೀರ್ತಿಶೇಷ ಶ್ರೀರಾಘವಭಟ್ಟರವರ ತೃತೀಯ ಪುತ್ರ ಶ್ರೀ.ವಿ.ಆರ್. ಸುದರ್ಶನ ಭಟ್ಟರ್ ಅವರು ಇಲ್ಲಿ ಅರ್ಚಕರಾಗಿದ್ದು ಸ್ವಾಮಿಯ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂಲ ಮೂರ್ತಿಯನ್ನು ಕಾಣಲು ಎರಡು ಕಣ್ಣು ಸಾಲದು. ಬಸ್ ಮಾರ್ಗ : ಕೆಂಪೇಗೌಡ ಬಸ್ ನಿಲ್ದಾಣದಿಂದ 210ಎ, 210ಎಕ್ಸ್, 210 ಆರ್., ಶಿವಾಜಿನಗರದಿಂದ 210 ಜಿ. ಇಳಿಯ ಬೇಕಾದ ನಿಲ್ದಾಣ ಇಸ್ರೋ ಲೇಔಟ್ ಕೊನೆ ಬಸ್ ಸ್ಟಾಪ್. ಹೆಚ್ಚಿನ ಮಾಹಿತಿಗೆ ಪ್ರಧಾನ ಅರ್ಚಕರಾದ ಶ್ರೀ. ಸುದರ್ಶನ ಭಟ್ಟರ್ ಅವರನ್ನು ದೂರವಾಣಿ 9845559972 ಮೂಲಕ ಸಂಪರ್ಕಿಸಬಹುದು. | |||