|
ಮುಖಪುಟ
/ನಮ್ಮದೇವಾಲಯಗಳು
ಬ್ಯಾಟರಾಯನಪುರದ ಕೋದಂಡರಾಮಸ್ವಾಮಿ
*ಟಿ.ಎಂ.ಸತೀಶ್
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬೆಂಗಳೂರು –
ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ದಾಟಿದೊಡನೆ ಹೆದ್ದಾರಿಯ ಬದಿಯಲ್ಲೇ ಇರುವ ಈ
ದೇವಾಲಯವನ್ನು 1948ರಲ್ಲಿ ನಿರ್ಮಿಸಲಾಯಿತು. ದೇವಾಲಯ ಪ್ರತಿಷ್ಠಾಪನೆಯ
ಸಂದರ್ಭದಲ್ಲಿ ಮೈಸೂರು ಮಹಾರಾಜರಾದ ಶ್ರೀಜಯಚಾಮರಾಜೇಂದ್ರ ಒಡೆಯರು ಹಾಜರಿದ್ದು
ಸಾಕ್ಷೀಕರಿಸಿದರು ಎಂದು ದೇವಾಲಯದ ಪ್ರಾಕಾರದಲ್ಲಿರುವ ಶಾಸನ ಸಾರುತ್ತದೆ.
ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು ಮಧ್ಯದಲ್ಲಿರುವ ಪ್ರಧಾನ ಗರ್ಭಗೃಹದಲ್ಲಿ
ಸೀತಾ ರಾಮ ಸಹಿತನಾಗಿ ಬಿಲ್ಲು ಹಿಡಿದ ಶ್ರೀಕೋದಂಡರಾಮದೇವರ ಸುಂದರ ವಿಗ್ರಹವಿದೆ.
ಪೀಠದ ತಳಭಾಗದಲ್ಲಿ ಭಕ್ತಿಯಿಂದ ಕೈಮುಗಿದು ಕುಳಿತ ಹನುಮಂತನ ವಿಗ್ರಹವಿದೆ.
ಕೋದಂಡರಾಮಸ್ವಾಮಿಯ ಎದುರು ಗರುಡಗಂಬವಿದೆ. ವಿಶಾಲವಾದ ದೇವಾಲಯದಲ್ಲಿ ಮುಖಮಂಟಪ,
ಪ್ರಾಕಾರವಿದೆ. ದೇವಾಲಯದ ಸಾಮಾನ್ಯ ಕಲ್ಲಿನ ನಿರ್ಮಾಣವಾಗಿದ್ದು ಭಿತ್ತಿಗಳಲ್ಲಿ
ಯಾವುದೇ ಶಿಲ್ಪಕಲಾಲಂಕರಣಗಳಿಲ್ಲ. ಈ ದೇವಾಲಯವನ್ನು ಸ್ಥಳೀಯರಾದ ಆಂದಪ್ಪನವರು
ನಿರ್ಮಿಸಿದರೆಂದು ಸ್ಥಾನಿಕಂ ಪುರೋಹಿತರು ತಿಳಿಸುತ್ತಾರೆ. ನಂತರದ ದಿನಗಳಲ್ಲಿ ಅವರ
ವಂಶಸ್ಥರು ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಹನುಮದ್ ಸಮೇತನಾಗಿ ಇಲ್ಲಿ
ನೆಲೆಸಿರುವ ಕೋದಂಡರಾಮಸ್ವಾಮಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಎಂಬುದು
ಭಕ್ತರ ನಂಬಿಕೆ. ಶ್ರಾವಣ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಶ್ರೀರಾಮನವಮಿಯ ಸಂದರ್ಭದಲ್ಲಂತೂ ಗರುಡೋತ್ಸವ, ಶಯನೋತ್ಸವ, ಕಲ್ಯಾಣೋತ್ಸವ,
ಶೇಷವಾಹನೋತ್ಸವ, ಗರುಡೋತ್ಸವವೇ ಮೊದಲಾದ ಹಲವು ಉತ್ಸವಗಳು ವಿಜೃಂಭಣೆಯಿಂದ
ನಡೆಯುತ್ತವೆ. ಬೆಂಗಳೂರು ನಗರದ ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇರಿ, ಸಿಟಿ
ಮಾರುಕಟ್ಟೆ, ಯಲಹಂಕದಿಂದ ಇಲ್ಲಿಗೆ ನೇರ ಬಸ್ ಸೌಲಭ್ಯವಿದೆ. | |||