|
ಬೆಂಗಳೂರು ಸುಬ್ಬಣ್ಣ ಗಾರ್ಡನ್ ಕೈಲಾಸೇಶ್ವರ ದೇವಾಲಯ
ಬೆಂಗಳೂರು ನಗರ ಬೆಳೆದಂತೆಲ್ಲಾ ಅಭಿವೃದ್ಧಿಯಾದ ವಿಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ತಲೆ ಎತ್ತಿದ ಹೊಸ ಬಡಾವಣೆಗಳಲ್ಲಿ ಬಸವೇಶ್ವರ ಬಡಾವಣೆಯೂ ಒಂದು. ಆಗ ಇಲ್ಲಿ ವಾಸಕ್ಕೆ ಬಂದ ಜನರ ಪೈಕಿ ಹತ್ತೂ ಸಮಸ್ತರು ಸೇರಿ, ತಮ್ಮ ಬಡಾವಣೆಯಲ್ಲೊಂದು ದೇವಾಲಯ ಇರಬೇಕೆಂದು ಸಂಕಲ್ಪ ಮಾಡಿ, ಪುಟ್ಟ ಶಿವನ ದೇವಾಲಯವೊಂದನ್ನು ನಿರ್ಮಿಸಿದರು.
ಸುಂದರವಾದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಈಗಿರುವ ಬೃಹತ್ ಭವ್ಯ ದೇವಾಲಯದಲ್ಲಿ ಕೈಲಾಸೇಶ್ವರ, ಗಣಪತಿ, ತಾಯಿ ಪಾರ್ವತಿ ದೇವಿ, ಆಂಜನೇಯ ಹಾಗೂ ನವಗ್ರಹ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ವಿಶಾಲ ಪ್ರಾಂಗಣದಲ್ಲಿರುವ ಪ್ರಧಾನ ದೇವಾಲಯದ ಮೇಲ್ಭಾಗದಲ್ಲಿ 18 ಅಡಿ ಎತ್ತರದ ಪದ್ಮಾಸನಾರೂಢನಾದ ಶಿವನ ಮೂರ್ತಿ ಗಮನಸೆಳೆಯುತ್ತದೆ. ಶಿವನ ಗೋಪುರಕ್ಕೆ ಆಧಾರವಾಗಿರುವ ಸ್ತಂಭಗಳಲ್ಲಿರುವ ಆನೆಗಳ ಹಾಗೂ ದ್ವಾರಪಾಲಕರ ಪ್ರತಿಮೆಗಳೂ ಸುಂದರವಾಗಿವೆ. ಪ್ರಧಾನ ಗರ್ಭಗೃಹದಲ್ಲಿ ಸುಂದರವಾದ ಕೃಷ್ಣಶಿಲೆಯ ಶಿವಲಿಂಗವಿದ್ದು, ದೇವರ ಎಡಭಾಗದಲ್ಲಿ ತಾಯಿ ಪಾರ್ವತಿಯ ಗುಡಿಯಿದೆ. ಅಂತೆಯೇ ಬಲಭಾಗದಲ್ಲಿ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಪ್ರಾಕಾರದಲ್ಲಿ ಅಶ್ವತ್ಥಕಟ್ಟೆ, ನಾಗರಕಲ್ಲುಗಳೂ ಇವೆ.
ಶಿವರಾತ್ರಿಯಂದು ನಾಲ್ಕು ಯಾಮದ ಪೂಜೆ, ಅಭಿಷೇಕ, ಜಾಗರಣೆ, ಭಜನೆ ಕಾರ್ಯಕ್ರಮಗಳು ಜರುಗುತ್ತವೆ. ಹನುಮಜಯಂತಿ, ಶ್ರೀರಾಮನವಮಿಯಲ್ಲಿ ಹಾಗೂ ಪ್ರತಿ ಸೋಮವಾರ ಮತ್ತು ಶನಿವಾರ ವಿಶೇಷ ಪೂಜೆ ಪ್ರಸಾದ ವಿನಿಯೋಗ ನಡೆಯುತ್ತದೆ. ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ವಾರ ಇಲ್ಲಿ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯುತ್ತದೆ. ಲೋಕಕಲ್ಯಾಣಾರ್ಥ ಹೋಮ, ಹವನಗಳನ್ನೂ ದೇವಾಲಯದ ಆಡಳಿತ ಮಂಡಳಿ ಏರ್ಪಡಿಸುತ್ತಾ ಬಂದಿದೆ. ದೇವಾಲಯದ ಪ್ರಕಾರದಲ್ಲಿರುವ ಧ್ಯಾನ ಮಂದಿರದಲ್ಲಿ ಅಮೃತ ಶಿಲೆಯ ಶಿವನ ವಿಗ್ರಹವಿದ್ದು, ಧ್ಯಾನ ಮಾಡಲು ಪ್ರಶಾಂತವಾದ ವಾತಾವರಣವಿದೆ. | |||