ಮುಖಪುಟ /ನಮ್ಮದೇವಾಲಯಗಳು  

ಬೃಹತ್ ಶಿಖರ ಗಣಪ, ಹನುಮ, ಗೋಪಾಲಕೃಷ್ಣ

*ವಾಗ್ಮಿತ್ರ

Ganesha, Hanuma, Gopalakrishna, ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಬೆಂಗಳೂರು ಹೊರವಲಯದ ಓಂಕಾರ ಆಶ್ರಮದ ಬಳಿ ಇರುವ ಏಷ್ಯಾದ ಅತಿ ದೊಡ್ಡ (೧೨೦ ಅಡಿಗಳ) ಗೋಪುರ ಗಡಿಯಾರ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಲಾಲ್‌ಬಾಗ್, ಕಬ್ಬನ್‌ಪಾರ್ಕ್, ವಿಧಾನಸೌಧ, ಬುಲ್‌ಟೆಂಪಲ್ ದೊಡ್ಡಗಣಪ, ಬನ್ನೇರುಘಟ್ಟ ನೋಡಿ ಹೋಗುತ್ತಿದ್ದ ಪ್ರವಾಸಿಗರು ಈಗ ಓಂಕಾರಾಶ್ರಮಕ್ಕೆ ತಪ್ಪದೇ ಹೋಗುತ್ತಾರೆ.

ಅದೇ ರೀತಿ ಬೆಂಗಳೂರಿನ ಸುತ್ತಮುತ್ತಲ ಪ್ರೇಕ್ಷಣೀಯ ತಾಣಗಳ ಸಾಲಿಗೆ ಈಗ ಮತ್ತೊಂದು ಸೇರ್ಪಡೆ ಆಗಿದೆ. ಬೆಂಗಳೂರಿನಿಂದ 28 ಕಿಲೋ ಮೀಟರ್ ದೂರದಲ್ಲಿರುವ ಕನಕಪುರ ರಸ್ತೆಯ ನೆಟ್ಟಿಗೆರೆ ಈಗ ಪ್ರವಾಸಿತಾಣಗಳ ಸಾಲಿಗೆ ಸೇರಿದ ತಾಣ. ಅಲ್ಲೇನು ವಿಶೇಷ ಎನ್ನುತ್ತೀರಾ?

ವಿಶೇಷ ಇದೆ. ಅಲ್ಲಿ ಅತ್ಯಂತ ಎತ್ತರದ ಗಣಪ, ಆಂಜನೇಯ ಹಾಗೂ ಗೋಪಾಲಕೃಷ್ಣನ ಮೂರು ಮೂರ್ತಿಗಳಿವೆ. ಆ ಗಣಪ, ಕೃಷ್ಣ ಹಾಗೂ ಆಂಜನೇಯರ ಎತ್ತರ ಎಷ್ಟು ಗೊತ್ತೆ ತಲಾ ೪೫ ಅಡಿ. ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಇಲ್ಲಿ ಈ ಮೂರು ದೇವರುಗಳು ಗುಡಿಯ ಒಳಗೆ ಕುಳಿತಿಲ್ಲ. ಬದಲಾಗಿ ದೇವಾಲಯದ ಮೇಲೆ ಕೂತಿದ್ದಾರೆ.

ಏನು ಗಣಪ, ಕೃಷ್ಣ ಹಾಗೂ ಪ್ರಾಣದೇವರನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಬದಲು ದೇಗುಲದ ಮೇಲೆ ಪ್ರತಿಷ್ಠಾಪಿಸಿದ್ದಾರೆಯೇ ಎಂದು ಹುಬ್ಬೇರಿಸಬೇಡಿ. ಇದು ಸತ್ಯ. ಈ ದೇವಾಲಯ ಸಮುಚ್ಚಯದಲ್ಲಿ ಗಣಪ, ಕೃಷ್ಣ, ಆಂಜನೇಯ, ರಾಘವೇಂದ್ರಸ್ವಾಮಿ, ಮಂಜುನಾಥೇಶ್ವರ, ವೆಂಕಟರಮಣ, ಮಹಾಲಕ್ಷ್ಮೀ, ಕನ್ಯಕಾ ಪರಮೇಶ್ವರಿ, ಶಿರಡಿ ಸಾಯಿಬಾಬ, ನವಗ್ರಹ ಮೊದಲಾದ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಈ ಎಲ್ಲಾ ದೇವರುಗಳಿರುವ ದೇವಾಲಯದ ಮೂರು ದೇಗುಲಗಳ ಮೇಲೆ ಕಳಶಪ್ರಾಯವಾಗಿ, ಮೂರು ದೇವತಾ ಮೂರ್ತಿ ನಿರ್ಮಿಸಲಾಗಿದೆ. ದೇವಾಲಯದ ಸುತ್ತ ನವಗ್ರಹ ವೃಕ್ಷಗಳನ್ನು ಬೆಳೆಸಲಾಗಿದೆ. ಸುಂದರ ರಮಣೀಯ ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯ ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಧ್ಯಾನಾಸಕ್ತರಿಗಾಗಿ ವಿಶ್ರಾಂತಿಧಾಮ ಚಾರಿಟಬಲ್ ಟ್ರಸ್ಟ್ ವಿಶ್ರಾಂತಿಧಾಮವನ್ನೂ ನಿರ್ಮಿಸಿದೆ. ಪಿರಮಿಡ್ ಮಾಧರಿಯ ಶಬ್ದ ಮಾಲಿನ್ಯದಿಂದ ಮುಕ್ತವಾದ ಧ್ಯಾನ ಮತ್ತು ಆಧ್ಯಾತ್ಮಿಕ ಕೇಂದ್ರವನ್ನೂ ನಿರ್ಮಿಸಲಾಗಿದೆ. ಈ ದೇವಾಲಯದ ಬಗೆಗಿನ ಹೆಚ್ಚಿನ ವಿವರ 9845028720, 26635048ನಲ್ಲಿ ಲಭ್ಯ. 

ಮುಖಪುಟ /ನಮ್ಮದೇವಾಲಯಗಳು