ಮುಖಪುಟ /ನಮ್ಮದೇವಾಲಯಗಳು   

ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯ

*ಟಿ.ಎಂ. ಸತೀಶ್
Bhadravathi lakxinarasimha temple, kannadaratna.com, ಕನ್ನಡರತ್ನ.ಕಾಂ, ಭದ್ರಾವತಿ, ಚಿತ್ರಕೃಪೆ ಶಿವಮೊಗ್ಗ ಜಿಲ್ಲೆ ಅಧಿಕೃತ ವೆಬ್ ತಾಣ
ಕಬ್ಬಿಣದ ಕಾರ್ಖಾನೆ, ಕಾಗದದ ಕಾರ್ಖಾನೆಗಳಿಂದ ಖ್ಯಾತವಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಿಲ್ಪಕಲೆಗಳ ತವರೂ ಹೌದು. ಇದಕ್ಕೆ ಸಾಕ್ಷಿ ಇಲ್ಲಿರುವ ಶ್ರೀಲಕ್ಷ್ಮೀನರಸಿಂಹ ದೇವಾಲಯ. ಭದ್ರಾವತಿ ಹಳೆನಗರದಲ್ಲಿರುವ ಈ ದೇವಾಲಯವನ್ನು 13ನೇ ಶತಮಾನದಲ್ಲಿ ಹೊಯ್ಸಳ ವಂಶದ ವೀರನರಸಿಂಹ ನಿರ್ಮಿಸಿದನೆದು ತಿಳಿದುಬಂದಿದೆ.

ಸ್ಥಳ ಪುರಾಣದ ರೀತ್ಯ ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷ ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಟ್ಟಾಗ, ಭೂದೇವಿಯ ರಕ್ಷಣೆಗೆ ವರಹಾವತಾರ ತಾಳಿದ ಶ್ರೀಮನ್ನಾರಾಯಣ ತನ್ನ ಕೋರೆಯ ಹಲ್ಲುಗಳಿಂದ ಭೂಮಿಯನ್ನು ಚುಚ್ಚಿ ಎತ್ತಿದಾಗ ತುಂಗ ಹಾಗೂ ಭದ್ರಾನದಿಗಳು ಹುಟ್ಟಿದವು. ನಂತರ ಈ ಎರಡೂ ನದಿಗಳು ಕೂಡಲಿಯಲ್ಲಿ ಸಂಗಮವಾದವು.

ಭದ್ರಾನದಿ ದಡದಲ್ಲಿರುವ ಊರು ಭದ್ರಾವತಿಯಾಯ್ತು. ಇಲ್ಲಿದ್ದ ವಂಕಿ ಗೃಹಸ್ಥ, ತನ್ನ ವಾನಪ್ರಸ್ಥಾಶ್ರಮದಲ್ಲಿ ತಪವನ್ನಾಚರಿಸಿದಾಗ ಲಕ್ಷ್ಮೀನರಸಿಂಹ ಪ್ರತ್ಯಕ್ಷನಾದನಂತೆ. ನರಸಿಂಹ ಪ್ರತ್ಯಕ್ಷನಾದ ಸ್ಥಳದಲ್ಲಿ ಲಕ್ಷ್ಮೀನರಸಿಂಹನನ್ನು ಪ್ರತಿಷ್ಠಾಪಿಸಿ ವಂಕಿಮುನಿ ಪೂಜಿಸುತ್ತಿದ್ದರು. ನಂತರದ ದಿನಗಳಲ್ಲಿ ಹೊಯ್ಸಳರ ವೀರನರಸಿಂಹ ಇಲ್ಲಿ ದೇವಾಲಯ ಕಟ್ಟಿಸಿದರೆದು ಹೇಳಲಾಗುತ್ತದೆ.

ಹೊಯ್ಸಳರ ಕಲಾವೈಭವದಿಂದ ಶ್ರೀಮಂತವಾದ ಈ ದೇವಾಲಯ ಬೇಲೂರು, ಹಳೇಬೀಡಿನ ದೇವಾಲಯಗಳ ಮಾದರಿಯಲ್ಲಿದೆ. ಎಲ್ಲ ಹೊಯ್ಸಳ ದೇವಾಲಯಗಳಂತೆ ಇಲ್ಲಿಯೂ ನಕ್ಷತ್ರಾಕಾರದ ಜಗಲಿ, ಮುಖಮಂಟಪ, ಸುಖನಾಸಿ, ಭುವನೇಶ್ವರಿ ಹಾಗೂ ಗರ್ಭಗೃಹಗಳಿವೆ. ದೇವಾಲಯದ ಎದುರು ಎರಡು ಗರಡು ಗಂಬಗಳಿವೆ. ಪಕ್ಕದಲ್ಲಿ ಎತ್ತರದ ತುಳಸಿಯ ಬೃಂದಾವನವಿದೆ.

ದೇವಾಲಯದ ನಕ್ಷತ್ರಾಕಾರದ ಜಗಲಿ 3 ಅಡಿ ಎತ್ತರವಿದ್ದು ಅದನ್ನು ಹತ್ತಲು ಮೆಟ್ಟಿಲುಗಳಿವೆ. ಜಗತಿಯ ಮೇಲೆ ಮುಖಮಂಟಪಯುಕ್ತವಾದ ತ್ರಿಕೂಟಾಚಲ ದೇವಾಲಯದಲ್ಲಿ ಮೂರು ಗರ್ಭಗೃಹ ಹಾಗೂ ಮೂರು ಗೋಪುರಗಳಿವೆ. ದೇವಾಲಯದ ಸುತ್ತಲೂ ಇರುವ ಭಿತ್ತಿಗಳಲ್ಲಿ ಶಿಲ್ಪಕಲಾ ಸೌಂದರ್ಯವೇ ಅಡಗಿದೆ. ಹಿರಣ್ಯ ಕಶಿಪುವನ್ನು ವಧಿಸುತ್ತಿರುವ ಉಗ್ರನರಸಿಂಹ, ಕಾಳಿಂಗ ಮರ್ದನ ನಿರತ ಶ್ರೀಕೃಷ್ಣ, ಗೋವರ್ಧನ ಗಿರಿಯನ್ನೇ ಎತ್ತಿದ ಗೋವರ್ದನಗಿರಿಧಾರಿ, ಬೆಣ್ಣೆ ಕದಿಯುತ್ತಿರುವ ಬಾಲಕೃಷ್ಣ, ರಾಮಾನಂಜನೇಯ, ವಿಷಕನ್ನಿಕೆಯರು, ದಶಾವತಾರದ ಕಥೆಗಳನ್ನು ಸುಂದರವಾಗಿ ಕೆತ್ತಲಾಗಿದೆ.

ಪ್ರಧಾನ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನುಳಿದ ಎರಡು ಗರ್ಭಗೃಹಗಳಲ್ಲಿ ಪುರುಷೋತ್ತಮ ಹಾಗೂ ಗೋಪಾಲಕೃಷ್ಣ ವಿಗ್ರಹಗಳಿವೆ. ದೇವಾಲಯದ ಪ್ರಾಕಾರದಲ್ಲಿ ವಿನಾಯಕ, ಸರಸ್ವತಿ ವಿಗ್ರಹಗಳೂ ಇವೆ.

ದೇವಾಲಯದ ಹೊರಗಿರುವ ಆವರಣದಲ್ಲಿ ಕೃಷ್ಣಶಿಲೆಯ ವಿನಾಯಕ ಮೂರ್ತಿಯಿದೆ. ಇದನ್ನು ಆಂಬೊಡೆ ಗಣಪತಿ ಎಂದು ಕರೆಯುತ್ತಾರೆ. ಆದರೆ, ಭಕ್ತರು ಈ ದೇವರಿಗೆ ವಡೆಸರ ಹಾಕುವ ಹರಕೆ ಹೊರುತ್ತಾರೆ. ಬೆಣ್ಣೆಯ ಅಲಂಕಾರದಲ್ಲಿ ಮೂರ್ತಿಯನ್ನು ನೋಡುವುದೇ ಒಂದು ಸೊಗಸು.

ಸಮೀಪದಲ್ಲೇ ಚಂಡಿಕೇಶ್ವರಿ ಆಲಯವಿದೆ. ಮಕ್ಕಳಿಗೆ ಬಾಲಗ್ರಹ ಇತ್ಯಾದಿ ಇದ್ದರೆ ಅಥವಾ ಮಕ್ಕಳು ಚಂಡಿಹಿಡಿಯುತ್ತಿದ್ದರೆ ಇಲ್ಲಿ ಹರಕೆ ಹೊರುತ್ತಾರೆ. ದೂರದೂರದ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಊರಿನಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ ರಾಮೇಶ್ವರನದು.

ಮುಖಪುಟ /ನಮ್ಮದೇವಾಲಯಗಳು