|
ಮುಖಪುಟ
/ನಮ್ಮ
ದೇವಾಲಯಗಳು ಬೆಳವಾಡಿಯ ವೀರನಾರಾಯಣ ದೇವಾಲಯ *ಟಿ.ಎಂ. ಸತೀಶ್
ಹೊಯ್ಸಳರ ಕಾಲದಲ್ಲಿ ಜೈನ ಕೇಂದ್ರವಾಗಿದ್ದ ಈ ಗ್ರಾಮವನ್ನು 1760ರಲ್ಲಿ ಮೈಸೂರು ಅರಸು, ಇಮ್ಮಡಿ ಕೃಷ್ಣರಾಜ ಒಡೆಯರು ಈ ಊರನ್ನು ಶೃಂಗೇರಿ ಮಠಕ್ಕೆ ಜಹಗೀರಿ ನೀಡಿದ್ದರು ಎಂದು ತಿಳಿದುಬರುತ್ತದೆ. ಸ್ಥಳ ಪುರಾಣದ ರೀತ್ಯ ಪುರಾಣ ಕಾಲದಲ್ಲಿ ಈ ಗ್ರಾಮ ಏಕಚಕ್ರನಗರ ಎಂದು ಹೆಸರಾಗಿತ್ತು. ವನವಾಸಿಗಳಾಗಿದ್ದ ಪಾಂಡವರು ಇಲ್ಲಿ ಕೆಲ ಕಾಲ ಕಳೆದರೆಂದೂ ಹೇಳಲಾಗುತ್ತದೆ. ಬಕಾಸುರನೆಂಬ ರಾಕ್ಷಸನು ಪ್ರಜಾಪೀಡಕನಾಗಿದ್ದಾಗ, ಭೀಮ ಊರ ಜನ ಬಂಡಿತುಂಬ ತುಂಬಿಕೊಟ್ಟ ಅನ್ನವನ್ನು ತಾನೇ ತಿಂದು, ಬಕಾಸುರನನ್ನು ಸಂಹರಿಸಿದ್ದು ಇಲ್ಲಿಯೇ ಎಂದು ಜನ ನಂಬಿದ್ದಾರೆ. ಇದರ ಕುರುಹಾಗಿ ಇಲ್ಲಿ ಪ್ರತಿವರ್ಷ ಚೈತ್ರಮಾಸದಲ್ಲಿ ಬಂಡಿಬಾನ ಹಬ್ಬ ನಡೆಯುತ್ತದೆ. ಇಲ್ಲಿರುವ ವೀರನಾರಾಯಣ ದೇವಾಲಯ ಕಲಾತ್ಮಕವಾಗಿಯೂ ಸುಂದರವಾಗಿಯೂ ಇದೆ. ಹೊಯ್ಸಳ ಶೈಲಿಯ ಈ ದೇವಾಲಯ ತ್ರಿಕೂಟಾಚಲವಾಗಿದ್ದು, ದೇವಾಲಯಕ್ಕೆ ಪ್ರತ್ಯೇಕ ಮೂರು ಗೋಪುರ ಹಾಗೂ ಮೂರು ಗರ್ಭಗೃಹಗಳಿವೆ. ಈ ದೇವಾಲಯದ ವಾಸ್ತು ವಿನ್ಯಾಸ ಎಂಥವರನ್ನೂ ಬೆರಗುಗೊಳಿಸುತ್ತದೆ. ಭಾರತದ ವಾಸ್ತುಶಿಲ್ಪವನ್ನು ಎತ್ತಿ ಹಿಡಿಯುವಲ್ಲಿ ಹೊಯ್ಸಳ ದೊರೆಗಳ ಪಾತ್ರವನ್ನು ಇದು ಸಾರುತ್ತದೆ. ವಾಸ್ತುಶಿಲ್ಪದ ಭವ್ಯ ಪರಂಪರೆಗೆ ಸಾಕ್ಷಿಯಾಗಿದೆ. ಇಲ್ಲಿನ ಪ್ರಧಾನ ಗರ್ಭಗೃಹದಲ್ಲಿ ವೀರನಾರಾಯಣ ಸ್ವಾಮಿಯಿದ್ದರೆ, ಉಳಿದೆರಡು ಗರ್ಭಗೃಹಗಳಲ್ಲಿ ವೇಣುಗೋಪಾಲ ಹಾಗೂ ಯೋಗಾನರಸಿಂಹ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಪ್ರವೇಶದ್ವಾರದಲ್ಲಿ ಇರುವ ಆನೆಗಳು ಮನಮೋಹಕವಾಗಿವೆ. ಹೊರಭಿತ್ತಿಗಳ ಕಲಾತ್ಮಕತೆ, ದೇವಾಲಯದ ವಿಶಾಲ ಪ್ರಾಕಾರ ಹಾಗೂ ಕಲ್ಲುಗಳಲ್ಲಿ ಅರಳಿರುವ ಶಿಲೆಗಳು ಮನಸೂರೆಗೊಳ್ಳುತ್ತವೆ. ಇಷ್ಟು ಸುಂದರವಾದ ಶಿಲ್ಪಕಲೆಯ ತವರು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸದಿರುವುದು ವಿಷಾದದ ಸಂಗತಿ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||