ಮುಖಪುಟ /ನಮ್ಮದೇವಾಲಯಗಳು 

ಸುಬ್ರಹ್ಮಣ್ಯನಗರ ಮದ್ದೂರಮ್ಮ ದೇವಾಲಯ

Madduramma Temple, Subramanya Nagar, Malleswara, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರು ಮಹಾನಗರದಲ್ಲಿ  ಇರುವ ಅತ್ಯಂತ ಹಳೆಯ ಬಡಾವಣೆಗಳ ಪೈಕಿ ಮಲ್ಲೇಶ್ವರ ಬಳಿ ಇರುವ ಸುಬ್ರಹ್ಮಣ್ಯ ನಗರವೂ ಒಂದು. ಹಿಂದೆ ಸುಬ್ಬಣ್ಣ ಪಾಳ್ಯ ಎನಿಸಿಕೊಂಡಿದ್ದ ಈ ಪ್ರದೇಶದ ಪ್ರಥಮ ನಗರಸಭಾ ಸದಸ್ಯ ಹಾಗೂ ಜನಾನುರಾಗಿ ಸುಬ್ಬಣ್ಣ (ಸುಬ್ರಹ್ಮಣ್ಯ). ಅವರ ಗೌರವಾರ್ಥವೇ ಈ ಪ್ರದೇಶಕ್ಕೆ ಸುಬ್ಬಣ್ಣ ಪಾಳ್ಯ ಎಂಬ ಹೆಸರು ಬಂದಿತ್ತು. ಬೆಂಗಳೂರು ಮಹಾನಗರ ಪಾಲಿಕೆ ಪಾಳ್ಯಕ್ಕೆ ಸುಬ್ರಹ್ಮಣ್ಯ ನಗರ ಎಂದು ಮರು ನಾಮಕರಣ ಮಾಡಿತು.
ಹಿಂದೆ ಒಂದು ಪುಟ್ಟ ಗ್ರಾಮವಾಗಿ, ಕೃಷಿ ಚಟುವಟಿಕೆಗಳ ತಾಣವಾಗಿದ್ದ ಈ ಊರು ಹಲವು ದಶಕಗಳ ಹಿಂದೆಯೇ ಆಧುನಿಕ ಬೆಂಗಳೂರಿನ ಭಾಗವಾಯಿತಾದರೂ ಇಲ್ಲಿರುವ ಜನರು ತಮ್ಮ ಹಳೆಯ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿರುವ ಗ್ರಾಮದೇವತೆ ಮದ್ದೂರಮ್ಮನ ದೇವಾಲಯದಲ್ಲಿ ನಡೆಯುವ ಪೂಜಾವಿಧಿಗಳು.

ಇಂದಿಗೂ ಇಲ್ಲಿ ಶರನ್ನವರಾತ್ರಿಯ ವೇಳೆ ನಡೆಯುವ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಊರಿನ ಸುಮಂಗಲಿಯರು ತಲೆಯ ಮೇಲೆ ದವನ, ಹೊಂಬಾಳೆಯ ಕಳಶ, ದೀಪಾರತಿ ಹೊತ್ತು ತಾಯಿಯ ಗುಣಗಾನ ಮಾಡುವ ಜಾನಪದ ಹಾಡುಗಳನ್ನು ಹಾಡುತ್ತಾ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ.

ಇಲ್ಲಿ ಗ್ರಾಮದೇವತೆ ಮದ್ದೂರಮ್ಮನ 150 ವರ್ಷಗಳ ಹಳೆಯ ದೇವಾಲಯವಿದೆ. ಸ್ಥಳೀಯರು ಹೇಳುವ ರೀತ್ಯ  ಇಲ್ಲಿ ಬಹಳ ಹಿಂದೆ ಬರಿಯ ಕಲ್ಲು ಬಂಡೆ ಇತ್ತು. ನೋಡಲು ದೇವತೆಯಂತೆ ಕಾಣುತ್ತಿದ್ದ ಈ ಕಲ್ಲಿಗೆ ಊರಿನ ಕೆಲವು ಜನ ಹರಿಶಿನ ಕುಂಕುಮ ಹಚ್ಚಿ ಪೂಜೆಯನ್ನೂ ಮಾಡುತ್ತಿದ್ದರು. ಇಲ್ಲಿಗೆ ಬಂದ ತಾಂತ್ರಿಕ ರಾಮಾಚಾರಿ ಎನ್ನುವವರು ಈ ಕಲ್ಲಿನಲ್ಲಿ ಶಕ್ತಿದೇವತೆ ಮದ್ದೂರಮ್ಮ ನೆಲೆಸಿದ್ದಾಳೆ ಎಂದು ಗ್ರಾಮಸ್ಥರಿಗೆ ತಿಳಿಸಿದರಂತೆ. ಆಗ ಗ್ರಾಮಸ್ಥರು ಅದೇ ಕಲ್ಲಿನಲ್ಲಿ ತಾಯಿಯ ದಿವ್ಯ ವಿಗ್ರಹ ಮಾಡಿಸಿ, ಪ್ರತಿಷ್ಠಾಪಿಸಿ, ಅಂದಿನಿಂದ ಇಂದಿನವರೆಗೂ ಪೂಜಿಸುತ್ತಾ ಬಂದಿದ್ದಾರೆ.

ಹಿಂದೆ ಈ ದೇವಾಲಯದ ಪಕ್ಕದಲ್ಲಿ ಕಲ್ಯಾಣಿ ಇತ್ತಂತೆ. ಇಂದು ಅದೇ ಜಾಗದಲ್ಲಿ ಅಶ್ವತ್ಥಕಟ್ಟೆ ಇದೆ. ಕಟ್ಟೆಯಲ್ಲಿ ನಾಗದೇವತೆಗಳ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಬಹಳ ಹಿಂದೆ ಇಲ್ಲಿ ಎರುಡ ಕೆರೆಗಳೂ ಇದ್ದವಂತೆ. ಬೆಂಗಳೂರು ಬೆಳೆದಂತೆಲ್ಲ ಕೆರೆಗಳು ಮಾಯವಾದವು. ಒಂದು ಕೆರೆ ಕ್ರೀಡಾಂಗಣವಾದರೆ ಮತ್ತೊಂದು ಉದ್ಯಾನವಾಗಿದೆ.

ಪ್ರತಿ ದಿನ ದೇವಾಲಯದಲ್ಲಿ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ಪ್ರತಿ ವರ್ಷ ದಸರೆಯ ಹತ್ತೂ ದಿನಗಳ ಕಾಲ ಶ್ರೀ ಮದ್ದೂರಮ್ಮ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ.  ಮಂಗಳವಾರ, ಭಾನುವಾರ ಹಾಗೂ ಶುಕ್ರವಾರ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಮುಖಪುಟ /ನಮ್ಮದೇವಾಲಯಗಳು